×
Ad

ನಿರ್ಮಾಣ ಹಂತದ ಬಾವಿಯೊಳಗೆ ಉಸಿರುಗಟ್ಟಿ ನಾಲ್ವರು ಮೃತ್ಯು

Update: 2021-07-15 23:55 IST

ಕೊಲ್ಲಂ(ಕೇರಳ): ಕೊಲ್ಲಂ ಜಿಲ್ಲೆಯ ಕುಂದಾರದಲ್ಲಿ ಗುರುವಾರ ನಿರ್ಮಾಣ ಹಂತದ ಬಾವಿಯೊಳಗೆ ನಾಲ್ವರು ಉಸಿರುಗಟ್ಟಿ ಸಾವನ್ನಪ್ಪಿರುವ ಘಟನೆ ವರದಿಯಾಗಿದೆ.

ಉಸಿರುಗಟ್ಟಿ ಸಾವನ್ನಪ್ಪಿದವರನ್ನು ಸೋಮರಾಜನ್, ರಾಜನ್, ಮನೋಜ್ ಹಾಗೂ ಶಿವಪ್ರಸಾದ್ ಎಂದು ಗುರುತಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಪೊಲೀಸ್, ಅಗ್ನಿಶಾಮಕ ಹಾಗೂ ರಕ್ಷಣಾ ಸೇವೆಗಳು ಜಂಟಿಯಾಗಿ ರಕ್ಷಣಾ ಕಾರ್ಯಾಚರಣೆ ನಡೆಸಿದರೂ ನಾಲ್ವರ ಜೀವ ಉಳಿಸಲು ಸಾಧ್ಯವಾಗಲಿಲ್ಲ. ರಕ್ಷಣಾ ಕಾರ್ಯಾಚರಣೆಯ ವೇಳೆ ಅಗ್ನಿಶಾಮಕ ಹಾಗೂ ರಕ್ಷಣಾ ಅಧಿಕಾರಿಗಳು ಉಸಿರಾಟದ ಸಮಸ್ಯೆಯಿಂದ ಸ್ಥಳದಲ್ಲಿ ಕುಸಿದುಬಿದ್ದಿದ್ದು ಅವರನ್ನು ಆಸ್ಪತ್ರೆಗೆ ಸೇರಿಸಲಾಗಿದೆ.

ನಾಲ್ವರು ಬಾವಿಯನ್ನು ಸ್ವಚ್ಚಗೊಳಿಸುವಾಗ ಅದರೊಳಗೆ ಸಿಲುಕಿಹಾಕಿಕೊಂಡರು. ಬಾವಿ ನಿರ್ಮಾಣ ಹಂತದಲ್ಲಿದ್ದು, ಇಬ್ಬರು ಕಾರ್ಮಿಕರು ಮೊದಲಿಗೆ ಹೂಳೆತ್ತಲು ಬಾವಿಗೆ ಇಳಿದರು. ಈ ಇಬ್ಬರು ಬಾವಿಯಲ್ಲಿ ಸಿಲುಕಿಕೊಂಡಿದ್ದು ಅವರನ್ನು ರಕ್ಷಿಸಲು ಇನ್ನಿಬ್ಬರು ಬಾವಿಗಿಳಿದಿದ್ದಾರೆ. ಅವರೂ ಕೂಡ ಉಸಿರಾಡಲು ಸಾಧ್ಯವಾಗದೇ ಅಲ್ಲಿಯೇ ಸಿಲುಕಿಕೊಂಡಿದ್ದರು. ಆಮ್ಲಜನಕ ಕೊರತೆ ಹಾಗೂ ವಿಷಾನಿಲವೇ ಈ ಅನಾಹುತಕ್ಕೆ ಕಾರಣ ಎಂದು ಪ್ರಾಥಮಿಕ ಪರಿಶೀಲನೆಯಿಂದ ತಿಳಿದುಬಂದಿದೆ ಎಂದು  ಕೊಲ್ಲಂ ಪೊಲೀಸರು ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News