×
Ad

ಮುಂಬೈ ಪೊಲೀಸ್ ಅಧಿಕಾರಿ ಕ್ರಿಮಿನಲ್ ಗೆ ಕೇಕ್ ತಿನ್ನಿಸುತ್ತಿರುವ ವೀಡಿಯೊ ವೈರಲ್, ತನಿಖೆಗೆ ಆದೇಶ

Update: 2021-07-16 15:34 IST
PHOTO : twitter (video screengrab)

ಮುಂಬೈ: ಉಪನಗರ ಜೋಗೇಶ್ವರಿಯಲ್ಲಿ ಹಿರಿಯ ಇನ್ಸ್‌ಪೆಕ್ಟರ್ ವೊಬ್ಬರು  ಕುಖ್ಯಾತ ಅಪರಾಧಿಯೊಬ್ಬನಿಗೆ ಹುಟ್ಟುಹಬ್ಬದ ಸಂಭ್ರಮಾಚರಣೆಯಲ್ಲಿ ಕೇಕ್ ತಿನ್ನಿಸುತ್ತಿರುವ ವಿಡಿಯೋವೊಂದು ವೈರಲ್ ಆಗಿದೆ.

ಗುರುವಾರ ಈ ಕುರಿತು ತನಿಖೆಗೆ ಆದೇಶಿಸಲಾಗಿದೆ.  ಎರಡು ವಾರಗಳ ಹಿಂದೆ ಈ ಘಟನೆ ನಡೆದಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ವೀಡಿಯೊದಲ್ಲಿರುವ ಅಪರಾಧಿಯನ್ನು ದಾನಿಶ್ ಶೇಖ್ ಎಂದು ಗುರುತಿಸಲಾಗಿದ್ದು, ಈತ ಕೊಲೆ ಯತ್ನ ಸೇರಿದಂತೆ ಹಲವು ಪ್ರಕರಣಗಳನ್ನು ಎದುರಿಸುತ್ತಿದ್ದಾನೆ ಹಾಗೂ  ಈ ಹಿಂದೆ ಈತನನ್ನು ಜೋಗೇಶ್ವರಿ ಪೊಲೀಸರು ಬಂಧಿಸಿದ್ದರು ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಸೋಷಿಯಲ್ ಮೀಡಿಯಾದಲ್ಲಿ ಪ್ರಸಾರವಾಗಿರುವ 15 ಸೆಕೆಂಡುಗಳ ವೀಡಿಯೊದಲ್ಲಿ ಹಿರಿಯ ಇನ್ಸ್‌ಪೆಕ್ಟರ್ ಮಹೇಂದ್ರ ನೆರ್ಲೆಕರ್ ಅವರು ಪೊಲೀಸ್ ಸಮವಸ್ತ್ರದಲ್ಲಿ, ಹೌಸಿಂಗ್ ಸೊಸೈಟಿಯ ಕಚೇರಿಯೊಂದರಲ್ಲಿ ನಡೆದ  ಹುಟ್ಟುಹಬ್ಬ ಆಚರಣೆಯಲ್ಲಿ  ದಾನಿಶ್‌ಗೆ ಕೇಕ್ ತುಂಡು ತಿನ್ನಿಸುತ್ತಿರುವುದು ಕಂಡುಬಂದಿದೆ.

ಘಟನೆಯ ಬಗ್ಗೆ ಪ್ರತಿಕ್ರಿಯಿಸಿರುವ ಪೊಲೀಸ್ ಅಧಿಕಾರಿ ನೆರ್ಲೆಕರ್, "ಇದು ಹಳೆಯ ವೀಡಿಯೊ. ಕೆಲವು ನೆಲಸಮ  ಕಾರ್ಯಗಳು ನಡೆಯುತ್ತಿರುವುದನ್ನು ನೋಡಲು ನಾನು ಹೌಸಿಂಗ್ ಸೊಸೈಟಿಗೆ ಹೋಗಿದ್ದೆ, ಆದರೆ ಅಲ್ಲಿನ ಕೆಲವು ಹಿರಿಯ ನಾಗರಿಕರು ನಾನು ಸೊಸೈಟಿ ಕಚೇರಿಗೆ ಭೇಟಿ ನೀಡಬೇಕೆಂದು ಒತ್ತಾಯಿಸಿದರು. ನಾನು ಅಲ್ಲಿಗೆ ಹೋದೆ, ಆದರೆ ಕೇಕ್ ನೊಂದಿಗೆ  ದಾನಿಶ್ ಕೂಡ  ಅಲ್ಲಿದ್ದ ಎಂದು ನನಗೆ ತಿಳಿದಿರಲಿಲ್ಲ ಎಂದರು.

ಈ ಪ್ರಕರಣದಲ್ಲಿ ಪ್ರಾಥಮಿಕ ತನಿಖೆಗೆ ಆದೇಶಿಸಲಾಗಿದೆ ಎಂದು ಉಪ  ಪೊಲೀಸ್ ಆಯುಕ್ತ (ವಲಯ 10) ಮಹೇಶ್ ರೆಡ್ಡಿ ತಿಳಿಸಿದ್ದಾರೆ. ಸಾಕಿನಾಕಾ ವಿಭಾಗದ ಸಹಾಯಕ ಪೊಲೀಸ್ ಆಯುಕ್ತರು ತನಿಖೆ ನಡೆಸಲಿದ್ದಾರೆ ಎಂದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News