ಇಸ್ರೇಲ್ ರಾಯಭಾರಿ ಕಚೇರಿ ಸ್ಫೋಟ; ನಾಲ್ವರು ವಿದ್ಯಾರ್ಥಿಗಳಿಗೆ ಜಾಮೀನು

Update: 2021-07-16 17:39 GMT

ಹೊಸದಿಲ್ಲಿ, ಜು.16:ಇಲ್ಲಿನ ಇಸ್ರೇಲಿ ರಾಯಭಾರಿ ಕಚೇರಿಯಲ್ಲಿ ಜನವರಿ 29ರಂದು ನಡೆದ ಕಡಿಮೆ ತೀವ್ರತೆಯ ಸ್ಫೋಟ ಪ್ರಕರಣಕ್ಕೆ ಸಂಬಂಧಿಸಿ ಕ್ರಿಮಿನಲ್ ಸಂಚಿನ ಆರೋಪದಲ್ಲಿ ಬಂಧಿತರಾದ ಜಮ್ಮುಕಾಶ್ಮೀರದ ಕಾರ್ಗಿಲ್ ಮೂಲದ ನಾಲ್ವರು ವಿದ್ಯಾರ್ಥಿಗಳಿಗೆ ದಿಲ್ಲಿ ನಗರ ನ್ಯಾಯಾಲಯ ಶುಕ್ರವಾರ ಜಾಮೀನು ಬಿಡುಗಡೆಗೊಳಿಸಿದೆ.

‘‘ಈ ಆರೋಪಿಗಳ ವಿರುದ್ಧ ಯಾವುದೇ ದೋಷಾರೋಪಣ ಪುರಾವೆಗಳು ದೊರೆತಿಲ್ಲ ಹಾಗೂ ಅವರು ಕಳಂಕರಹಿತವಾದ ಹಿನ್ನೆಲೆಯನ್ನು ಹೊಂದಿದವರಾಗಿದ್ದಾರೆ ’’ ಎಂದು ದಿಲ್ಲಿ ಮೆಟ್ರೋಪಾಲಿಟನ್ ಮ್ಯಾಜಿಸ್ಟ್ರೇಟ್ ಡಾ.ಪಂಕಜ್ ಶರ್ಮಾ ಅವರು ಆರೋಪಿಗಳ ಜಾಮೀನುಬಿಡುಗಡೆಗೆ ನೀಡಿದ ಆದೇಶದಲ್ಲಿ ತಿಳಿಸಿದ್ದಾರೆ. ಆರೋಪಿಗಳಾದ ನಾಸಿರ್ ಹುಸೇನ್,ಝುಲ್ಫಿಕರ್ ಅಲಿ ಹಾಗೂ ಮಝಾಮ್ಮಿಲ್ ಹುಸೈನ್ 20ರ ಹರೆಯದವರಾಗಿದ್ದು, ಅವರು ಯಾವುದೇ ಭಯೋತ್ಪಾದಕ ಗುಂಪುಗಳ ಜೊತೆ ನಂಟು ಹೊಂದಿಲ್ಲ ಅಥವಾ ಸಮಾಜಕ್ಕೆ ಯಾವುದೇ ರೀತಿಯಲ್ಲಿ ಬೆದರಿಕೆಯಾಗಿಲ್ಲ ಎಂದರು.

‘‘ಆರೋಪಿಗಳು ಸಮಾಜದಲ್ಲಿ ಬೇರುಗಳನ್ನು ಹೊಂದಿದವರಾಗಿದ್ದಾರೆ. ಅವರ ವಯಸ್ಸು, ಪೂರ್ವಾಪರಗಳನ್ನು ಗಣನೆಗೆ ತೆಗೆದುಕೊಂಡು ಮತ್ತು ಪ್ರಕರಣಕ್ಕೆ ಸಂಬಂಧಿಸಿದ ಪುರಾವೆಗಳು ತನಿಖಾಧಿಕಾರಿಯ ವಶದಲ್ಲಿರುವುದರಿಂದ ಎಲ್ಲಾ ಆರೋಪಿಗಳಿಗೆ ಜಾಮೀನು ಬಿಡುಗಡೆ ನೀಡಲು ಆದೇಶಿಸಲಾಗಿದೆ’’ ಎಂದು ನ್ಯಾಯಾಲಯ ತಿಳಿಸಿದೆ.

ಈ ನಾಲ್ವರು ವಿದ್ಯಾರ್ಥಿಗಳಿಗೂ ತಲಾ 50 ಸಾವಿರ ರೂ.ಬಾಂಡ್ ಹಾಗೂ ಅಷ್ಟೇ ಮೊತ್ತದ ಖಾತರಿಹಣವನ್ನು ಪಡೆದು ಬಿಡುಗಡೆಗೆ ಆದೇಶಿಸಲಾಗಿದೆ. ಇಸ್ರೇಲ್ ರಾಯಭಾರಿ ಕಚೇರಿಯ ಆವರಣದಲ್ಲಿ ನಡೆದ ಲಘುಸ್ಫೋಟದ ತನಿಖೆಯನ್ನು ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್ಐಎ) ನಡೆಸುತ್ತಿದೆಯಾದರೂ, ಈ ಪ್ರಕರಣಕ್ಕೆ ಸಂಬಂಧಿಸಿ ದಿಲ್ಲಿ ಪೊಲೀಸರು ಕ್ರಿಮಿನಲ್ ಸಂಚಿನ ಆರೋಪವನ್ನು ದಾಖಲಿಸಿಕೊಂಡಿತ್ತು ಹಾಗೂ ಕಾರ್ಗಿಲ್ನ ನಾಲ್ವರು ವಿದ್ಯಾರ್ಥಿಗಳನ್ನು ಜೂನ್ 23ರಂದು ಬಂಧಿಸಿದ್ದರು.

ಇದಾದ ಕೆಲವು ದಿನಗಳ ಬಳಿ ಇಸ್ರೇಲಿ ರಾಯಭಾರಿ ಕಚೇರಿಯ ಸಮೀಪ ಸ್ಫೋಟಕ ಸಾಮಗ್ರಿಯನ್ನು ಇರಿಸುತ್ತಿರುವ ದೃಶ್ಯದ ವಿಡಿಯೋದಲ್ಲಿ ಕಂಡುಬಂದ ಇಬ್ಬರು ವ್ಯಕ್ತಿಗಳನ್ನು ಗುರುತಿಸಿದವರಿಗೆ 10 ಲಕ್ಷ ರೂ. ಬಹುಮಾನ ಘೋಷಿಸಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News