ಕೋವಿಡ್ ತಡೆಗಾಗಿ ಬಿಡುಗಡೆಯಾದ ಕೈದಿಗಳನ್ನು ಮುಂದಿನ ಆದೇಶದವರೆಗೆ ಶರಣಾಗದಂತೆ ಸೂಚಿಸದಿರಿ: ರಾಜ್ಯಗಳಿಗೆ ಸುಪ್ರೀಂ ಸೂಚನೆ
ಹೊಸದಿಲ್ಲಿ, ಜು.16: ಕೋವಿಡ್19 ಹಾವಳಿಯ ಹಿನ್ನೆಲೆಯಲ್ಲಿ ಜೈಲುಗಳಲ್ಲಿ ದಟ್ಟಣೆಯನ್ನು ಕಡಿಮೆಗೊಳಿಸುವ ಉದ್ದೇಶದಿಂದ ಬಿಡುಗಡೆಗೊಳಿಸಲಾದ ಕೈದಿಗಳನ್ನು ಮುಂದಿನ ಆದೇಶ ನೀಡುವವರೆಗೆ ಶರಣಾಗುವಂತೆ ಸೂಚಿಸಬಾರದೆಂದು ಸುಪ್ರೀಂಕೋರ್ಟ್ ಶುಕ್ರವಾರ ಸೂಚನೆ ನೀಡಿದೆ.
ಇಂತಹ ಕೈದಿಗಳ ಬಿಡುಗಡೆಗೆ ಸಂಬಂಧಿಸಿದ ವಿಷಯಗಳನ್ನು ನಿಭಾಯಿಸಲು ಎಲ್ಲಾ ರಾಜ್ಯಗಳಿಗೂ ಸಮಾನವಾದ ಮಾರ್ಗದರ್ಶಿ ಸೂತ್ರಗಳನ್ನು ನಿಗದಿಪಡಿಸಬೇಕೆಂದು ಭಾರತದ ಮುಖ್ಯನ್ಯಾಯಮೂರ್ತಿ ಎನ್.ವಿ.ರಮಣ ನೇತೃತ್ವದ ನ್ಯಾಯಪೀಠ ಸೂಚಿಸಿದೆ.
ಸಣ್ಣಪುಟ್ಟ ಅಪರಾಧ ಪ್ರಕರಣಗಳ ದೋಷಿಗಳು ಹಾಗೂ ವಿಚಾರಣಾಧೀನ ಕೈದಿಗಳನ್ನು ಮಧ್ಯಂತರ ಜಾಮೀನಿನಲ್ಲಿ ಅಥವಾ ಪರೋಲ್ನಲ್ಲಿ ಬಿಡುಗಡೆಗೊಳಿಸುವ ಬಗ್ಗೆ ಪರಿಶೀಲಿಸಲು ಉನ್ನತಾಧಿಕಾರ ಸಮಿತಿಯನ್ನು ರಚಿಸುವಂತೆ ಸುಪ್ರೀಂಕೋರ್ಟ್ ರಾಜ್ಯ ಸರಕಾರಗಳಿಗೆ ಸೂಚನೆ ನೀಡಿತ್ತು. ಮೇ 7ರಂದು ಸುಪ್ರೀಂಕೋರ್ಟ್, ಕೆಲವು ನಿರ್ದಿಷ್ಟ ಶ್ರೇಣಿಯ ಕೈದಿಗಳಿಗೆ ಮಧ್ಯಂತರ ಜಾಮೀನು ಅಥವಾ ಪರೋಲ್ ನೀಡುವುದನ್ನು ಪರಿಶೀಲಿಸುವಂತೆ ಆದೇಶಿಸಿತ್ತು.
ಕೈದಿಗಳ ಬಿಡುಗಡೆಗೆ ಸಂಬಂಧಿಸಿ ಉನ್ನತಾಧಿಕಾರ ಸಮಿತಿಗಳು ಅಂಗೀಕರಿಸಿರುವ ಮಾನದಂಡಗಳ ಕುರಿತಾಗಿ ವರದಿ ಸಲ್ಲಿಸುವಂತೆಯೂ ಶುಕ್ರವಾರ ನಡೆದ ವಿಚಾರಣೆಯ ಸಂದರ್ಭದಲ್ಲಿ ಸರ್ವೋಚ್ಚ ನ್ಯಾಯಾಲಯ ರಾಜ್ಯ ಸರಕಾರಗಳಿಗೆ ತಿಳಿಸಿತ್ತು.
ಪರೋಲ್ ಬಿಡುಗಡೆ ಸಂದರ್ಭದಲ್ಲಿ ವಯಸ್ಸು ಹಾಗೂ ಅಸ್ವಸ್ಥತೆಯಂತಹ ವಿಷಯಗಳ ಬಗ್ಗೆ ಪರಿಶೀಲಿಸಲಾಗಿದೆಯೇ ಎಂಬ ಬಗ್ಗೆ ವಿವರಗಳನ್ನು ನೀಡುವಂತೆಯೂ ನ್ಯಾಯಪೀಠವು ರಾಜ್ಯಗಳಿಗೆ ಸೂಚಿಸಿದೆ.
ನ್ಯಾಯಾಲಯದ ಆದೇಶದ ಅವಧಿಯನ್ನು ವಿಸ್ತರಿಸುವುದಕ್ಕೆ ತನ್ನ ಯಾವುದೇ ಆಕ್ಷೇಪವಿಲ್ಲವೆಂದು ಕೇಂದ್ರ ಸರಕಾರ ಸ್ಪಷ್ಟಪಡಿಸಿದೆ. ಕೊರೋನ ವೈರಸ್ನ ಮೂರನೆ ಅಲೆ ಅಪ್ಪಳಿಸುವ ಸಾಧ್ಯತೆಯ ಹಿನ್ನೆಲೆಯಲ್ಲಿ ಕೈದಿಗಳನ್ನು ಬಿಡುಗಡೆಗೊಳಿಸಬೇಕೆಂದು ಆ್ಯಮಿಕಸ್ ಕ್ಯೂರಿ ದುಶ್ಯಂತ್ ದವೆ ತಿಳಿಸಿದ್ದಾರೆ.ತತ್ಸಂಬಂಧ ಜುಲೈ23ರೊಳಗೆ ವರದಿಗಳನ್ನು ಸಲ್ಲಿಸುವಂತೆ ರಾಷ್ಟ್ರೀಯ ಕಾನೂನು ಸೇವಾ ಪ್ರಾಧಿಕಾರ ಹಾಗೂ ರಾಜ್ಯ ಸರಕಾರಗಳಿಗೆ ನ್ಯಾಯಾಲಯ ಆದೇಶಿಸಿದೆ.