ಭಾರತದಲ್ಲಿ ಶೀಘ್ರದಲ್ಲಿ ಡ್ರೋನ್ ಪ್ರತಿಬಂಧಕ ತಂತ್ರಜ್ಞಾನ: ಅಮಿತ್ ಶಾ
ಹೊಸದಿಲ್ಲಿ: ದೇಶಿ ಡ್ರೋನ್ ಪ್ರತಿಬಂಧಕ ತಂತ್ರಜ್ಞಾನ ಅಭಿವೃದ್ಧಿಪಡಿಸಲು ರಕ್ಷಣಾ ಸಂಶೋಧನಾ ಹಾಗೂ ಅಭಿವೃದ್ಧಿ ಸಂಸ್ಥೆ ಹಾಗೂ ಇತರ ಸಂಸ್ಥೆಗಳು ಜಂಟಿಯಾಗಿ ಕಾರ್ಯನಿರ್ವಹಿಸುತ್ತಿವೆ. ಈ ತಂತ್ರಜ್ಞಾನ ಶೀಘ್ರದಲ್ಲಿ ಲಭ್ಯವಾಗಲಿದೆ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಶನಿವಾರ ಹೇಳಿದ್ದಾರೆ.
ಜಮ್ಮುವಿನಲ್ಲಿರುವ ವಾಯು ಪಡೆ ನೆಲೆಯ ಮೇಲೆ ಕಳೆದ ತಿಂಗಳು ಡ್ರೋನ್ ದಾಳಿ ನಡೆದ ಕೆಲವು ದಿನಗಳ ಬಳಿಕ ಅಮಿತ್ ಶಾ ಅವರು ಈ ಹೇಳಿಕೆ ನೀಡಿದ್ದಾರೆ.
ಮಾದಕ ಪದಾರ್ಥ ಹಾಗೂ ಸ್ಫೋಟಗಳನ್ನು ಸುರಂಗ ಮಾರ್ಗ ಹಾಗೂ ಡ್ರೋನ್ ಮೂಲಕ ಸಾಗಾಟ ಮಾಡುತ್ತಿರುವುದು ಪ್ರಮುಖ ಸವಾಲು ಎಂದು ಉಲ್ಲೇಖಿಸಿದ ಅವರು, ಈ ಸವಾಲನ್ನು ಆದಷ್ಟು ಶೀಘ್ರದಲ್ಲಿ ಎದುರಿಸುವುದು ತುಂಬಾ ಮುಖ್ಯವಾದುದು ಎಂದಿದ್ದಾರೆ.
ಈ ಹೊಸ ಅಪಾಯವನ್ನು ಎದುರಿಸಲು ದೇಶಿ ತಂತ್ರಜ್ಞಾನದಿಂದ ಡ್ರೋನ್ ಪ್ರತಿಬಂಧಕ ಅಭಿವೃದ್ಧಿಪಡಿಸುವಲ್ಲಿ ಡಿಆರ್ಡಿಒ ಕಾರ್ಯ ನಿರ್ವಹಿಸುತ್ತಿದೆ. ಡ್ರೋನ್ ಪ್ರತಿಬಂಧಕದ ಸಂಶೋಧನೆ ಹಾಗೂ ಅಭಿವೃದ್ದಿ ಯೋಜನೆಗೆ ನಾವು ಎಲ್ಲ ರೀತಿಯ ಬೆಂಬಲ ನೀಡುತ್ತಿದ್ದೇವೆ ಎಂದು ಅಮಿತ್ ಶಾ ಅವರು 18ನೇ ಭದ್ರತಾ ಪಡೆ (ಬಿಎಸ್ಎಫ್) ಪದವಿ ಪ್ರದಾನ ಸಮಾರಂಭದಲ್ಲಿ ಹೇಳಿದ್ದಾರೆ.
ಶತ್ರುಗಳು ಹಾಗೂ ಭಯೋತ್ಪಾದಕರು ಬಳಸುವ ಕೃತಕ ಬುದ್ದಿ ಮತ್ತೆ ಹಾಗೂ ರೋಬೊಟಿಕ್ ತಂತ್ರಜ್ಞಾನವನ್ನು ಎದುರಿಸಲು ಭಾರತಕ್ಕೆ ನೆರವು ನೀಡಲು ತಜ್ಞರ ನೆರವಿನೊಂದಿಗೆ ನೂತನ ತಂತ್ರಜ್ಞಾನವನ್ನು ಸಂಶೋಧಿಸುವುದು ನಿಮ್ಮ ಜವಾಬ್ದಾರಿ ಎಂದು ಉನ್ನತ ಭದ್ರತಾ ಅಧಿಕಾರಿಗಳನ್ನು ಉಲ್ಲೇಖಿಸಿ ಅವರು ಹೇಳಿದರು.
ಭಾರತ ಶಾಂತಿ ಬಯಸುತ್ತದೆ. ಆದರೆ, ಭದ್ರತಾ ನೀತಿ ಶತ್ರುಗಳ ಅರ್ಥ ಮಾಡಿಕೊಳ್ಳುವ ಭಾಷೆಯಲ್ಲೇ ಸೂಕ್ತ ಉತ್ತರ ನೀಡಲಿದೆ ಎಂದು ಅಮಿತ್ ಶಾ ಹೇಳಿದರು.