ಪರಿಷ್ಕೃತ ದರದಲ್ಲಿ ಕೊವ್ಯಾಕ್ಸಿನ್, ಕೋವಿಶೀಲ್ಡ್ ಲಸಿಕೆಯ 66 ಕೋಟಿ ಡೋಸ್ ಪಡೆಯಲು ಕೇಂದ್ರದ ನಿರ್ಧಾರ

Update: 2021-07-17 19:16 GMT

ಹೊಸದಿಲ್ಲಿ: ಪರಿಷ್ಕೃತ ದರದಲ್ಲಿ ಪೂರೈಸಲು 66 ಕೋಟಿ ಡೋಸ್ ಹೆಚ್ಚುವರಿ ಕೋವಿಶೀಲ್ಡ್ ಮತ್ತು ಕೊವ್ಯಾಕ್ಸಿನ್ ಲಸಿಕೆಗಳಿಗೆ ಕಾರ್ಯಾದೇಶ(ಆರ್ಡರ್) ಸಲ್ಲಿಸಲಾಗಿದೆ ಎಂದು ಅಧಿಕೃತ ಮೂಲಗಳು ಹೇಳಿವೆ.

ಈ ವರ್ಷದ ಆಗಸ್ಟ್-ಡಿಸೆಂಬರ್ ಮಧ್ಯೆ ಈ ಲಸಿಕೆಗಳನ್ನು ಪೂರೈಸಲಾಗುತ್ತದೆ. ಕೋವಿಶೀಲ್ಡ್ ಗೆ ಪ್ರತೀ ಡೋಸ್ ಗೆ 205 ರೂ, ಕೊವ್ಯಾಕ್ಸಿನ್ಗೆ 215 ರೂ. ನಿಗದಿಗೊಳಿಸಲಾಗಿದೆ. ಇದರಲ್ಲಿ ಸೆರಂ ಸಂಸ್ಥೆಯಿಂದ 37.5 ಕೋಟಿ, ಭಾರತ್ ಬಯೊಟೆಕ್ನಿಂದ 28.5 ಕೋಟಿ ಡೋಸ್ ಲಸಿಕೆ ಪಡೆಯಲಾಗುವುದು. ತೆರಿಗೆ ಸೇರಿದರೆ ಅನುಕ್ರಮವಾಗಿ 215.25 ರೂ, ಮತ್ತು 225.75 ರೂ. ದರವಾಗುತ್ತದೆ ಎಂದು ಮೂಲಗಳು ಹೇಳಿವೆ.

ಇದೀಗ ಎರಡೂ ಲಸಿಕೆಗಳನ್ನು 150 ರೂ. ದರದಲ್ಲಿ ಖರೀದಿಸುತ್ತಿರುವ ಕೇಂದ್ರ ಆರೋಗ್ಯ ಇಲಾಖೆ, ಜೂನ್ 21ರಿಂದ ಹೊಸ ಕೋವಿಡ್ ಲಸಿಕೆ ಸಂಗ್ರಹಣೆ ನೀತಿ ಜಾರಿಗೆ ಬಂದಿರುವುದರಿಂದ ದರ ಪರಿಷ್ಕರಣೆಯಾಗಲಿದೆ ಎಂದು ಹೇಳಿತ್ತು. ಹೊಸ ನೀತಿಯನ್ವಯ, ಕೇಂದ್ರದಿಂದ ರಾಜ್ಯ/ಕೇಂದ್ರಾಡಳಿತ ಪ್ರದೇಶಗಳಿಗೆ ಪೂರೈಸಲಾಗುವ ಉಚಿತ ಲಸಿಕೆಯು ಜನಸಂಖ್ಯೆ, ಸೋಂಕಿನ ಪ್ರಮಾಣ ಮತ್ತು ಲಸಿಕೀಕರಣ ಅಭಿಯಾನದ ಪ್ರಗತಿಯ ಅನುಸಾರವಾಗಿರುತ್ತದೆ ಮತ್ತು 18 ವರ್ಷಕ್ಕಿಂತ ಮೇಲ್ಪಟ್ಟವರು ಉಚಿತ ಲಸಿಕೆ ಪಡೆಯಲಿದ್ದಾರೆ .

ಲಸಿಕೆಯ ವ್ಯರ್ಥಪ್ರಮಾಣ ಹಂಚಿಕೆ ಪ್ರಮಾಣದ ಮೇಲೆ ನಕಾರಾತ್ಮಕ ಪರಿಣಾಮ ಬೀರಲಿದೆ. ರಾಜ್ಯ/ಕೇಂದ್ರಾಡಳಿತ ಪ್ರದೇಶಗಳು ಸಣ್ಣ ಮತ್ತು ದೊಡ್ಡ ಆಸ್ಪತ್ರೆಗಳಿಗೆ ಸಮಾನವಾಗಿ ಲಸಿಕೆ ಹಂಚಿಕೆಯಾಗುವಂತೆ ಗಮನಹರಿಸಬೇಕು . ಖಾಸಗಿ ಆಸ್ಪತ್ರೆಗಳಿಗೆ ಪೂರೈಸುವ ಲಸಿಕೆಯ ದರವನ್ನು ಸಂಬಂಧಿತ ಸಂಸ್ಥೆ ನಿರ್ಧರಿಸಲಿದೆ ಮತ್ತು ಇದರಲ್ಲಿ ಯಾವುದೇ ಬದಲಾವಣೆಯಿದ್ದರೆ ಮುಂಚಿತವಾಗಿ ತಿಳಿಸಲಾಗುವುದು ಎಂದು ಹೊಸ ನೀತಿಯಲ್ಲಿ ಉಲ್ಲೇಖಿಸಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News