ಕೋವಿಡ್-19: ಜಾಗತಿಕ ಮಟ್ಟದಲ್ಲಿ ಭಾರತ ಎಲ್ಲಿದೆ ಗೊತ್ತೆ?

Update: 2021-07-18 04:24 GMT

ಹೊಸದಿಲ್ಲಿ, ಜು.18: ಕಳೆದ ಒಂದು ವಾರದಲ್ಲಿ ವರದಿಯಾದ ಹೊಸ ಕೋವಿಡ್-19 ಪ್ರಕರಣಗಳ ಪೈಕಿ ಭಾರತ ಜಾಗತಿಕ ಮಟ್ಟದಲ್ಲಿ ನಾಲ್ಕನೇ ಸ್ಥಾನದಲ್ಲಿದೆ. ಇಂಡೋನೇಶ್ಯ (3.24 ಲಕ್ಷ), ಬ್ರೆಝಿಲ್ (2.87 ಲಕ್ಷ), ಬ್ರಿಟನ್ (2.75 ಲಕ್ಷ) ಮೊದಲ ಮೂರು ಸ್ಥಾನಗಳಲ್ಲಿವೆ. ಇಂಡೋನೇಶ್ಯದಲ್ಲಿ ಹಿಂದಿನ ವಾರಕ್ಕೆ ಹೋಲಿಸಿದರೆ ಪ್ರಕರಣಗಳ ಪ್ರಮಾಣ ಶೇಕಡ 43ರಷ್ಟು ಹೆಚ್ಚಿದೆ ಎಂದು worldometers.info ವೆಬ್‌ಸೈಟ್ ವರದಿ ಮಾಡಿದೆ.

ಭಾರತದಲ್ಲಿ ಕಳೆದ ವಾರ ಪ್ರಕರಣಗಳ ಇಳಿಕೆ ಪ್ರಮಾಣ ಅಲ್ಪ ವೇಗ ಪಡೆದಿದ್ದು, ಏಳು ದಿನಗಳ ಅವಧಿಯಲ್ಲಿ 2.69 ಲಕ್ಷ ಪ್ರಕರಣಗಳು ವರದಿಯಾಗಿವೆ. ಇದು ಹಿಂದಿನ ವಾರ ದಾಖಲಾದ ಪ್ರಕರಣಗಳಿಗಿಂತ ಶೇಕಡ 8ರಷ್ಟು ಕಡಿಮೆ.

ಜಾಗತಿಕವಾಗಿ ಕಳೆದ ವಾರ ಒಟ್ಟು ಪ್ರಕರಣಗಳ ಸಂಖ್ಯೆ ಶೇಕಡ 16ರಷ್ಟು ಹೆಚ್ಚಿದ್ದು, ಇದು ಜಾಗತಿಕ ಮಟ್ಟದಲ್ಲಿ ಈ ಸಾಂಕ್ರಾಮಿಕದ ಮೂರನೇ ಅಲೆ ಹರಡುತ್ತಿರುವ ಸ್ಪಷ್ಟ ಸೂಚಕವಾಗಿದೆ. ಬ್ರಿಟನ್‌ನ ಹಲವು ದೇಶಗಳ ಹೊರತಾಗಿ ಆಗ್ನೇಯ ಏಶ್ಯ ದೇಶಗಳಲ್ಲಿ ಕೂಡಾ ಪ್ರಕರಣಗಳ ಸಂಖ್ಯೆ ಹೆಚ್ಚುತ್ತಿದೆ. ಇಂಡೋನೇಶ್ಯದಲ್ಲಿ 43% ಹೆಚ್ಚಳವಾಗಿರುವುದನ್ನು ಹೊರತುಪಡಿಸಿದರೆ, ಮಲೇಶ್ಯದಲ್ಲಿ 45%, ಥಾಯ್ಲೆಂಡ್ ನಲ್ಲಿ 38%, ಮ್ಯಾನ್ಮಾರ್‌ನಲ್ಲಿ 48% ಮತ್ತು ವಿಯೆಟ್ನಾಂನಲ್ಲಿ 130% ಏರಿಕೆ ಕಂಡುಬಂದಿದೆ,

ಈ ನಡುವೆ ಭಾರತದಲ್ಲಿ ಶನಿವಾರ ಈ ವಾರದಲ್ಲಿ ಎರಡನೇ ಬಾರಿಗೆ ಪ್ರಕರಣಗಳ ಸಂಖ್ಯೆ 40 ಸಾವಿರದ ಗಡಿ ದಾಟಿದೆ. ಶುಕ್ರವಾರ 38,019 ಪ್ರಕರಣಗಳು ವರದಿಯಾಗಿದ್ದರೆ, ಶನಿವಾರ 41,245 ಹೊಸ ಪ್ರಕರಣಗಳು ವರದಿಯಾಗಿವೆ. ಕೇರಳದಲ್ಲಿ 38 ದಿನಗಳಲ್ಲೇ ಗರಿಷ್ಠ ಅಂದರೆ 16,148 ಪ್ರಕರಣಗಳು ವರದಿಯಾಗಿವೆ. ಮಣಿಪುರದಲ್ಲಿ ಇದುವರೆಗಿನ ಗರಿಷ್ಠ ಅಂದರೆ 1171  ಪ್ರಕರಣಗಳು ವರದಿಯಾಗಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News