ಇಸ್ರೇಲ್‌ ಮೂಲದ ʼಪೆಗಾಸಸ್‌ʼ ವೈರಸ್‌ ಬಳಸಿ ಗಣ್ಯರ, ರಾಜಕಾರಣಿಗಳ, ಪತ್ರಕರ್ತರ ಮೊಬೈಲ್‌ ಹ್ಯಾಕ್‌

Update: 2021-07-18 18:17 GMT

ಇಸ್ರೇಲ್‌ ಮೂಲದ ವೈರಸ್‌ ಬಳಸಿ 40ಕ್ಕೂ ಹೆಚ್ಚು ಪತ್ರಕರ್ತರ, ರಾಜಕಾರಣಿಗಳ ಮೊಬೈಲ್‌ ಫೋನ್‌ ಗಳನ್ನು ಹ್ಯಾಕ್‌ ಮಾಡಲಾಗಿದೆ ಎಂಬ ವಿಸ್ತೃತ ಸರಣಿ ವರದಿಗಳನ್ನು thewire.in ಪ್ರಕಟಿಸಿದೆ. ದಿ ವೈರ್‌ ಜೊತೆಗೆ 16 ಅಂತಾರಾಷ್ಟ್ರೀಯ ಮಾಧ್ಯಮಗಳು ನಡೆಸಿದ ಕಾರ್ಯಾಚರಣೆಯಲ್ಲಿ ಈ ಮಾಹಿತಿಯು ಬಹಿರಂಗವಾಗಿದೆ. ಪೆಗಾಸಸ್‌ ಸ್ಪೈ ವೇರ್‌ ಬಳಸಿಕೊಂಡು ಅಪರಿಚಿತ ಏಜೆನ್ಸಿಯೊಂದು ಯಶಸ್ವಿಯಾಗಿ ಹ್ಯಾಕ್ ಮಾಡಿದೆ ಎಂದು ವರದಿ ತಿಳಿಸಿದೆ. 

ಬಹಿರಂಗಗೊಂಡ ಫೋನ್‌ ಸಂಖ್ಯೆಗಳಲ್ಲಿ ಕೆಲವು ಫೋನ್‌ ಗಳನ್ನು ವಿಧಿವಿಜ್ಞಾನ ಪರೀಕ್ಷೆಗೆ ಒಳಪಡಿಸಿದ ಸಂದರ್ಭದಲ್ಲಿ ಪೆಗಾಸಸ್‌ ಸ್ಪೈ ವೇರ್‌ ಅಳವಡಿಕೆಗೊಂಡಿರುವುದಾಗಿ ತಿಳಿದು ಬಂದಿದೆ. ಪರೀಕ್ಷೆಗೆ ಬಳಸಿದ 37 ಫೋನ್‌ ಗಳಲ್ಲಿ 10 ಫೋನ್‌ ಗಳು ಭಾರತದ್ದಾಗಿದ್ದವು ಎಂದು ವರದಿ ತಿಳಿಸಿದೆ. ಪೆಗಾಸಸ್‌ ಅನ್ನು ಮಾರಾಟ ಮಾಡುವ ಇಸ್ರೇಲ್‌ ಮೂಲದ ಎನ್‌ಎಸ್‌ಒ ಗ್ರೂಪ್‌ ತನ್ನ ಗ್ರಾಹಕರ ಕುರಿತು ಮಾಹಿತಿ ನೀಡಲು ನಿರಾಕರಿಸಿದೆ. 

ಸೋರಿಕೆಯಾಗಿರುವ ಈ ಮಾಹಿತಿಗಳನ್ನು ದಿ ವೈರ್‌ ನೊಂದಿಗೆ ಅಮ್ನೆಸ್ಟಿ ಇಂಟರ್‌ ನ್ಯಾಶನಲ್‌, ಪಾರ್ಬಿಡನ್‌ ಸ್ಟೋರೀಸ್‌, ಲಿ ಮೊಂಡೆ, ದಿ ಗಾರ್ಡಿಯನ್‌, ವಾಶಿಂಗ್ಟನ್‌ ಪೋಸ್ಟ್‌, ದಿ ಝೀಟ್‌ ಸೇರಿದಂತೆ ಇತರ ಹತ್ತು ಮೆಕ್ಸಿಕನ್‌ ಮತ್ತು ಅರಬ್‌, ಯುರೋಪಿಯನ್‌ ಮಾಧ್ಯಮಗಳು ಜಂಟಿಯಾಗಿ ಬಹಿರಂಗಪಡಿಸಿದೆ. 

ಡೇಟಾಬೇಸ್‌ನಲ್ಲಿರುವವರ ಸಂಖ್ಯೆಯಲ್ಲಿ 40 ಕ್ಕೂ ಹೆಚ್ಚು ಪತ್ರಕರ್ತರು, ಮೂರು ಪ್ರಮುಖ ಪ್ರತಿಪಕ್ಷಗಳ ನಾಯಕರು, ಒಬ್ಬ ಸಾಂವಿಧಾನಿಕ ಪ್ರಾಧಿಕಾರ ಹುದ್ದೆಯಲ್ಲಿರುವವರು, ನರೇಂದ್ರ ಮೋದಿ ಸರ್ಕಾರದಲ್ಲಿ ಸೇವೆ ಸಲ್ಲಿಸುತ್ತಿರುವ ಇಬ್ಬರು ಮಂತ್ರಿಗಳು,  ಭದ್ರತಾ ಸಂಸ್ಥೆಗಳ ಪ್ರಸ್ತುತ ಮತ್ತು ಮಾಜಿ ಮುಖ್ಯಸ್ಥರು ಹಾಗೂ ಅಧಿಕಾರಿಗಳು, ಹಲವಾರು ಉದ್ಯಮಿಗಳು ಸೇರಿದ್ದಾರೆಂದು ತಿಳಿದು ಬಂದಿದೆ.

ಈ ಕುರಿತು ಪ್ರತಿಕ್ರಿಯಿಸಿರುವ ಕೇಂದ್ರ ಸರಕಾರದ ಐಟಿ ಮತ್ತು ತಂತ್ರಜ್ಞಾನ ಇಲಾಖೆ ಸುದ್ದಿಯನ್ನು ಅಲ್ಲಗಳೆದಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News