ದಲಿತ ವರನ ಕುದುರೆ ಸವಾರಿ ತಡೆದ 9 ಮಂದಿಗೆ 5 ವರ್ಷ ಜೈಲು

Update: 2021-07-18 18:53 GMT

 ಅಹ್ಮದಾಬಾದ್,ಜು.18: ಗುಜರಾತ್ನ ಪರ್ಸಾ ಗ್ರಾಮದಲ್ಲಿ ಮದುವೆ ದಿಬ್ಬಣದಲ್ಲಿ ಕುದುರೆ ಸವಾರಿ ಮಾಡಿದ್ದಕ್ಕಾಗಿ ದಲಿತ ಯುವಕನೊಬ್ಬನನ್ನು ತಡೆದು ನಿಲ್ಲಿಸಿದ್ದ 9 ಮಂದಿಗೆ ಸ್ಥಳೀಯ ನ್ಯಾಯಾಲಯವು ಶನಿವಾರ ಐದು ವರ್ಷಗಳ ಜೈಲು ಶಿಕ್ಷೆ ವಿಧಿಸಿದೆ.

ನಟವರಸಿನ್ಹಾ ಪರಮಾರ್, ಕುಲದೀಪ್ ಸಿನ್ಹಾ ಚೌಹಾಣ್, ಅನಿರುದ್ದ್ ಸಿನ್ಹಾ ರಾಥೋಡ್, ದೇವೇಂದ್ರ ಸಿನ್ಹಾ ಚಾವ್ಡಾ, ವಿಜಯಸಿನ್ಹಾ ಚೌಹಾಣ್, ವಿಪುಲ್ ಚೌಹಾಣ್, ಜಿಗರ್ಸಿನ್ಹಾ ಚೌಹಾಣ್, ನರೇಶ್ ಚೌಹಾಣ್, ದೋಷಿಗಳೆಂದು ನ್ಯಾಯಾಲಯ ತೀರ್ಪು ನೀಡಿದೆ.

ಮದುವೆ ದಿಬ್ಬಣದಲ್ಲಿದ್ದ ಜನರಿಗೆ ಬೆದರಿಕೆಯೊಡ್ಡಿದ ಹಾಗೂ ದಲಿತ ದೌರ್ಜನ್ಯ ಕಾಯ್ದೆ ಯಡಿ ಆರೋಪಗಳಿಗೆ ಸಂಬಂಧಿಸಿ ಅವರಿಗೆ ಐದು ವರ್ಷಗಳ ಜೈಲು ಶಿಕ್ಷೆ ಘೋಷಿಸಿದೆ ಹಾಗೂ ತಲಾ 10 ಸಾವಿರ ರೂ.ಗಳ ದಂಡ ವಿಧಿಸಿದೆ.

2018ರ ಜೂನ್ 17ರಂದು ಮೆಹ್ಸಾನಾ ನಗರದ ದಲಿತ ಯುವಕ ಪ್ರಶಾಂತ್ ಸೋಲಂಕಿಯು ಮದುವೆ ದಿಬ್ಬಣದಲ್ಲಿ ಕುದುರೆ ಸವಾರಿ ಮಾಡುತ್ತಿದ್ದಾಗ, ಆತನನ್ನು ಆರೋಪಿಗಳು ತಡೆದು ನಿಲ್ಲಿಸಿ, ಬೆದರಿಕೆಯೊಡ್ಡಿದ್ದರು. ಸೋಲಂಕಿಯು ದಲಿತನಾಗಿರುವುದರಿಂದ ಆತ ಕುದುರೆ ಸವಾರಿ ಮಾಡಬಾರದೆಂದು, ತಮ್ಮ ‘ಶೂರ’ ಸಮುದಾಯಗಳ ಜನರು ಮಾತ್ರವೇ ಅದಕ್ಕೆ ಅರ್ಹರೆಂದು ಆರೋಪಿಗಳು ನಿಂದಿಸಿದ್ದರು. ಆಗ ದಲಿತ ಕುಟುಂಬಿಕರು ಪೊಲೀಸರ ನೆರವನ್ನು ಯಾಚಿಸಿದ್ದರು. ಆನಂತರ ಪೊಲೀಸರ ಕಾವಲಿನಲ್ಲಿ ವಿವಾಹ ದಿಬ್ಬಣ ನೆರವೇರಿತ್ತು.

ಪ್ರಕರಣಕ್ಕೆ ಸಂಬಂಧಿಸಿ ಈ ಒಂಭತ್ತು ಆರೋಪಿಗಳನ್ನು ವಿಚಾರಣೆಗೊಳಪಡಿಸಲಾಗಿತ್ತು ಹಾಗೂ 18 ಮಂದಿ ಸಾಕ್ಷಿಗಳ ಹೇಳಿಕೆಗಳನ್ನು ದಾಖಲಿಸಲಾಗಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News