ಸೋಮವಾರದಿಂದ ಸಂಸತ್ ನ ಮುಂಗಾರು ಅಧಿವೇಶನ

Update: 2021-07-18 19:42 GMT

ಹೊಸದಿಲ್ಲಿ: ಸಂಸತ್ ನಲ್ಲಿ ಸಕಾರಾತ್ಮಕ ಹಾಗೂ ರಚನಾತ್ಮಕ ಚರ್ಚೆಯ ಅಗತ್ಯವನ್ನು ಇಂದು ಒತ್ತಿ ಹೇಳಿರುವ ಪ್ರಧಾನಿ ನರೇಂದ್ರ ಮೋದಿಯವರು, ಸದನದ ನಿಯಮಗಳ ವ್ಯಾಪ್ತಿಗೆ ಬರುವ ಯಾವುದೇ ವಿಷಯದ ಬಗ್ಗೆ ಚರ್ಚಿಸಲು ಸರಕಾರ ಸಿದ್ಧವಿದೆಯೆಂದು ತಿಳಿಸಿದ್ದಾರೆ.

ಸಂಸತ್ ನ ಮುಂಗಾರು ಅಧಿವೇಶನ ಸೋಮವಾರ ಆರಂಭಗೊಳ್ಳಲಿರುವ ಹಿನ್ನೆಲೆಯಲ್ಲಿ ಸರ್ವಪಕ್ಷಗಳ ಸಭೆಯನ್ನುದ್ದೇಶಿಸಿ ಅವರು ಮಾತನಾಡುತ್ತಿದ್ದರು. ರಕ್ಷಣಾ ಸಚಿವರಾದ ರಾಜನಾಥ್ ಸಿಂಗ್, ಕೇಂದ್ರ ಸಚಿವ ಹಾಗೂ ರಾಜ್ಯಸಭೆಯಲ್ಲಿನ ಸದನ ನಾಯಕ ಪಿಯೂಶ್ ಗೋಯಲ್ ಹಾಗೂ ಸಂಸದೀಯ ವ್ಯವಹಾರಗಳ ಸಚಿವ ಪ್ರಹ್ಲಾದ್ ಜೋಷಿ ಸಭೆಯಲ್ಲಿ ಉಪಸ್ಥಿತರಿದ್ದರು.

33ಕ್ಕೂ ಅಧಿಕ ರಾಜಕೀಯ ಪಕ್ಷಗಳ ಸದನ ನಾಯಕರು ಸಭೆಯಲ್ಲಿ ಪಾಲ್ಗೊಂಡಿದ್ದರು.

ಕ್ರಮವಾಗಿ ರಾಜ್ಯಸಭೆ ಹಾಗೂ ಲೋಕಸಭೆಗಳಲ್ಲಿ ಕಾಂಗ್ರೆಸ್ ಪಕ್ಷದ ಸದನ ನಾಯಕರಾದ ಮಲ್ಲಿಕಾರ್ಜುನ ಖರ್ಗೆ ಹಾಗೂ ಅಧೀರ್ ರಂಜನ್ ಚೌಧರಿ ಪಾಲ್ಗೊಂಡಿದ್ದರು.

ತೃಣಮೂಲ ಕಾಂಗ್ರೆಸ್ ನ ಡೆರೆಕ್ ಓ ಬ್ರಿಯಾನ್,ಡಿಎಂಕೆಯ ತಿರುಚಿ ಸಿವಾ, ಸಮಾಜವಾದಿ ಪಕ್ಷದ ನಾಯಕ ರಾಮ್ ಗೋಪಾಲ್ ಯಾದವ್ ಹಾಗೂ ಬಿಎಸ್ಪಿಯ ಸತೀಶ್ ಮಿಶ್ರಾ ಸೇರಿದಂತೆ ಪ್ರಮುಖ ಪ್ರತಿಪಕ್ಷಗಳ ಸದನ ನಾಯಕರು ಸಭೆಯಲ್ಲಿ ಉಪಸ್ಥಿತರಿದ್ದರು.

ಎನ್ಡಿಎ ಮೈತ್ರಿಕೂಟದ ಅಂಗಪಕ್ಷವಾದ ಅಪ್ನಾದಳದ ನಾಯಕಿ ಅನುಪ್ರಿಯಾ ಪಟೇಲ್ ಹಾಗೂ ಎಲ್ಜೆಪಿ ನಾಯಕ ಪಶುಪತಿ ಪಾರಸ್ ಕೂಡಾ ಭಾಗವಹಿಸಿದ್ದರು.

ಸದನದಲ್ಲಿ ಯಾವುದೇ ವಿಷಯದ ಕುರಿತ ಚರ್ಚೆಯಿಂದ ವಿಮುಖನಾಗುವುದಿಲ್ಲವೆಂದು ಕೇಂದ್ರ ಸರಕಾರ ಈಗಾಗಲೇ ಸ್ಪಷ್ಟಪಡಿಸಿದೆ. ಈ ಬಾರಿಯ ಮುಂಗಾರು ಅಧಿವೇಶನದಲ್ಲಿ ಮೋದಿ ಸರಕಾರವು 30 ವಿಧೇಯಕಗಳನ್ನು ಮಂಡಿಸಲು ಉದ್ದೇಶಿಸಿದೆ.

ಹಣದುಬ್ಬರ ಹಾಗೂ ಸರಕಾರದಿಂದ ಕೋವಿಡ್ ಎರಡನೆ ಅಲೆಯ ನಿರ್ವಹಣೆ ಕುರಿತ ವಿಷಯಗಳು ಮುಂಗಾರು ಅಧಿವೇಶನದಲ್ಲಿ ಪ್ರಮುಖ ಚರ್ಚೆಯ ವಿಷಯಗಳಾಗುವ ಸಾಧ್ಯತೆಯಿದೆ. ಕೋವಿಡ್ ನಿರ್ವಹಣೆಯಲ್ಲಿ ಕೇಂದ್ರ ಸರಕಾರವು ದಯನೀಯವಾಗಿ ವೈಫಲ್ಯವಾಗಿದೆಯೆಂದು ರಾಹುಲ್ ಗಾಂಧಿ ಸೇರಿದಂತೆ ಪ್ರತಿಪಕ್ಷಗಳ ನಾಯಕರು ಸರಕಾರದ ವಿರುದ್ಧ ಈಗಾಗಲೇ ವಾಗ್ದಾಳಿ ನಡೆಸಿದ್ದು, ಸಂಸತ್ ಕಲಾಪದಲ್ಲೂ ಅದನ್ನು ತೀವ್ರಗೊಳಿಸುವ ನಿರೀಕ್ಷೆಯಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News