ಕೇಂದ್ರದ ಭಾರತ್ ನೆಟ್ ಯೋಜನೆಯಲ್ಲಿ ಆರ್ಥಿಕ ಅವ್ಯವಹಾರ: ಕಾಂಗ್ರೆಸ್ ಆರೋಪ
ಹೊಸದಿಲ್ಲಿ: ಕೇಂದ್ರ ಸರಕಾರದ ಭಾರತ್ನೆಟ್ ಯೋಜನೆಯಡಿ ನಿರ್ವಹಿಸಿರುವ ಆಪ್ಟಿಕಲ್ ಫೈಬರ್ ಕೇಬಲ್ ಅಳವಡಿಸುವ ಕಾರ್ಯದಲ್ಲಿ ಅವ್ಯವಹಾರ ನಡೆದಿರುವುದಾಗಿ ನಿಯಂತ್ರಕರು ಮತ್ತು ಮಹಾಲೆಕ್ಕಪರಿಶೋಧಕರ (ಸಿಎಜಿ) ವರದಿಯಲ್ಲಿ ಉಲ್ಲೇಖಿಸಲಾಗಿದೆ ಎಂದು ಹೇಳಿರುವ ಕಾಂಗ್ರೆಸ್, ಈ ಬಗ್ಗೆ ಸ್ವತಂತ್ರ ಮತ್ತು ಅವಧಿಬದ್ಧ ತನಿಖೆ ನಡೆಯಬೇಕು ಎಂದು ಆಗ್ರಹಿಸಿದೆ.
ಮಾಹಿತಿ ಮತ್ತು ತಂತ್ರಜ್ಞಾನ ಸಚಿವಾಲಯವು ಕಾಮನ್ ಸರ್ವಿಸ್ ಸೆಂಟರ್(ಸಿಎಸ್ಸಿ)ಗಳಿಗೆ 2019ರ ಜುಲೈಯಿಂದ 2020ರ ಡಿಸೆಂಬರ್ ವರೆಗೆ ಭಾರೀ ಮೊತ್ತದ ಪಾವತಿ ಮಾಡಿರುವುದಾಗಿ ಸಿಎಜಿ ಪ್ರಾಥಮಿಕ ವರದಿಯಲ್ಲಿ ಉಲ್ಲೇಖಿಸಲಾಗಿದೆ ಎಂದು ಕಾಂಗ್ರೆಸ್ ವಕ್ತಾರ ಪವನ್ ಖೇರಾ ಹೇಳಿದ್ದಾರೆ.
ಸೇವೆಯ ಕುರಿತ ಒಪ್ಪಂದ ಇರದ ಕಾರಣ ಸಿಎಸ್ಸಿಗಳ ಕಾರ್ಯ ಪೂರ್ಣಗೊಳಿಸಲು ಸಮಯ ನಿಗದಿಗೊಳಿಸಿಲ್ಲ. ಆದ್ದರಿಂದ ವಿಳಂಬಿತ ಕಾರ್ಯದ ಹಿನ್ನೆಲೆಯಲ್ಲಿ ಸಿಎಸ್ಸಿಗಳಿಗೆ ದಂಡ ವಿಧಿಸಲು ಯುನಿವರ್ಸಲ್ ಸರ್ವಿಸ್ ಆಬ್ಲಿಗೇಷನ್ ಫಂಡ್(ಯುಎಸ್ಒಎಫ್)ಗೆ ಸಾಧ್ಯವಾಗಿಲ್ಲ ಎಂದು ಸಿಎಜಿ ವರದಿಯಲ್ಲಿ ತಿಳಿಸಲಾಗಿದೆ. ಇದು ತೆರಿಗೆ ಪಾವತಿದಾರರ ಕೋಟ್ಯಂತರ ಮೊತ್ತವನ್ನು ಒಳಗೊಂಡ ಪ್ರಕರಣವಾದ್ದರಿಂದ ಮಾಹಿತಿ ಮತ್ತು ತಂತ್ರಜ್ಞಾನ ಇಲಾಖೆಯ ಕಾರ್ಯವೈಖರಿಯ ಬಗ್ಗೆ ಹಾಲಿ ನ್ಯಾಯಾಧೀಶರಿಂದ ಸ್ವತಂತ್ರ , ಉನ್ನತ ಮಟ್ಟದ ಮತ್ತು ಅವಧಿಬದ್ಧ ತನಿಖೆ ನಡೆಸಬೇಕು . ಎಂದು ಖೇರಾ ಆಗ್ರಹಿಸಿದ್ದಾರೆ.
ದೂರಸಂಪರ್ಕ ಇಲಾಖೆಯು ಯೋಜನೆಗಳನ್ನು ಸಿಎಸ್ಸಿ-ಎಸ್ಪಿವಿ ಮೂಲಕ ಪರೋಕ್ಷವಾಗಿ ಖಾಸಗಿ ಸಂಸ್ಥೆಗಳಿಗೆ ನೀಡುತ್ತಿದೆ ಎಂದು ಆರೋಪಿಸಿರುವ ಅವರು, ಸಿಎಜಿ ಪ್ರಾಥಮಿಕ ವರದಿಯಲ್ಲಿ ಬೆಟ್ಟು ಮಾಡಿರುವ ಅವ್ಯವಹಾರಗಳು ಕೇಂದ್ರದ ಮಾಹಿತಿ ತಂತ್ರಜ್ಞಾನ ಸಚಿವರನ್ನು ಪದಚ್ಯುತಗೊಳಿಸಲು ಸಾಕಾಗುವುದಿಲ್ಲವೇ? ಎಂದವರು ಪ್ರಶ್ನಿಸಿದ್ದಾರೆ. ಸಿಎಜಿ ವರದಿ ಬೃಹತ್ ಅವ್ಯವಹಾರವನ್ನು ಬಯಲಿಗೆಳೆದಿದೆ ಎಂದು ಕಾಂಗ್ರೆಸ್ ಮುಖ್ಯ ವಕ್ತಾರ ರಣದೀಪ್ ಸುರ್ಜೆವಾಲಾ ಹೇಳಿದ್ದಾರೆ.