ನಾಯಕರ ಅತಿ ಆತ್ಮವಿಶ್ವಾಸದಿಂದ ಬಿಜೆಪಿಗೆ ಬಂಗಾಳದಲ್ಲಿ ಸೋಲು: ಸುವೇಂದು ಅಧಿಕಾರಿ
ಕೊಲ್ಕತ್ತಾ: ಪಶ್ಚಿಮ ಬಂಗಾಳ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ 170ಕ್ಕೂ ಹೆಚ್ಚು ಸ್ಥಾನಗಳನ್ನು ಗೆಲ್ಲಲಿದೆ ಎಂಬ ಪಕ್ಷದ ಮುಖಂಡರ ಅತಿಯಾದ ಆತ್ಮವಿಶ್ವಾಸದಿಂದಾಗಿ ಪಕ್ಷ ಸೋಲು ಅನುಭವಿಸಬೇಕಾಯಿತು ಎಂದು ವಿಧಾನಸಭೆ ವಿರೋಧ ಪಕ್ಷದ ನಾಯಕ ಸುವೇಂದು ಅಧಿಕಾರಿ ಹೇಳಿದ್ದಾರೆ.
ಪರ್ಬಾ ಮೇದಿನಿಪುರ ಜಿಲ್ಲೆಯ ಚಂಡೀಪುರದಲ್ಲಿ ಪಕ್ಷದ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿದ ಅವರು, "ಅತಿಯಾದ ನೆಮ್ಮದಿ ಮತ್ತು ಅತಿಯಾದ ಆತ್ಮವಿಶ್ವಾಸದಿಂದಾಗಿ ತಳಹಂತದಲ್ಲಿ ರೂಪುಗೊಳ್ಳುತ್ತಿದ್ದ ಪರಿಸ್ಥಿತಿ ಅರ್ಥ ಮಾಡಿಕೊಳ್ಳುವುದು ಅಸಾಧ್ಯವಾಯಿತು" ಎಂದು ಅವರು ವಿಶ್ಲೇಷಿಸಿದರು.
"ಮೊದಲ ಎರಡು ಹಂತಗಳಲ್ಲಿ ನಾವು ಉತ್ತಮ ಸಾಧನೆ ಮಾಡಿದ ಕಾರಣದಿಂದ ನಮ್ಮ ನಾಯಕರು ಅತಿ ಸಂತುಷ್ಟರಾದರು ಹಾಗೂ ಅತಿಯಾದ ಆತ್ಮವಿಶ್ವಾಸ ಹೊಂದಿದರು. ಬಿಜೆಪಿ 170-180 ಸ್ಥಾನಗಳನ್ನು ಈ ಚುನಾವಣೆಯಲ್ಲಿ ಗೆಲ್ಲುತ್ತದೆ ಎಂದು ನಂಬಿದರು. ಆದರೆ ತಳಹಂತದದ ಕಾರ್ಯವನ್ನು ಮರೆತಿದ್ದರಿಂದ ನಮಗೆ ಅದು ದುಬಾರಿಯಾಗಿ ಪರಿಣಮಿಸಿತು" ಎಂದು ಹೇಳಿದರು.
ವಾಸ್ತವ ಗುರಿ ನಿಗದಿಪಡಿಸುವ ಜತೆಗೆ ತಳಹಂತದಲ್ಲಿ ಕಠಿಣ ಪರಿಶ್ರಮದಿಂದ ಕಾರ್ಯ ನಿರ್ವಹಿಸುವುದು ಕೂಡಾ ಅಗತ್ಯ ಎಂದು ಅವರು ಪ್ರತಿಪಾದಿಸಿದರು.