ಆಝಂ ಖಾನ್ ಆರೋಗ್ಯದಲ್ಲಿ ಏರುಪೇರು: ಲಕ್ನೋ ಆಸ್ಪತ್ರೆಗೆ ದಾಖಲು

Update: 2021-07-19 14:17 GMT

ಸೀತಾಪುರ(ಉತ್ತರಪ್ರದೇಶ): ಸೀತಾಪುರ ಜೈಲಿನಲ್ಲಿರುವ ಹಿರಿಯ ಸಮಾಜವಾದಿ ಪಕ್ಷದ ಮುಖಂಡ ಆಝಂ ಖಾನ್ ಅವರ ಆರೋಗ್ಯ ಸ್ಥಿತಿ ಸೋಮವಾರ ಬೆಳಿಗ್ಗೆ ಹದಗೆಟ್ಟಿದ್ದು, ನಂತರ ಅವರನ್ನು ಲಕ್ನೋದ ಆಸ್ಪತ್ರೆಗೆ ಕರೆದೊಯ್ಯಲಾಗಿದೆ ಎಂದು ಜೈಲಿನ ಅಧಿಕಾರಿಗಳು ತಿಳಿಸಿದ್ದಾರೆ.

ಬೆಳಿಗ್ಗೆ ಉಸಿರಾಟದ ತೊಂದರೆ ಇದೆ ಎಂದು ಖಾನ್  ಹೇಳಿದ್ದಾರೆ. ಜಿಲ್ಲಾ ಆಸ್ಪತ್ರೆಯ ವೈದ್ಯರ ತಂಡವು ಕೂಡಲೇ ತಪಾಸಣೆ ನಡೆಸಿದೆ ಎಂದು ಸೀತಾಪುರ ಜಿಲ್ಲಾ ಜೈಲಿನ ಜೈಲರ್ ಆರ್.ಎಸ್. ಯಾದವ್ ತಿಳಿಸಿದ್ದಾರೆ.

ಪ್ರಾಥಮಿಕ ತಪಾಸಣೆಯಲ್ಲಿ ಖಾನ್ ಅವರ ಆಮ್ಲಜನಕದ ಮಟ್ಟ ಕಡಿಮೆ ಕಂಡುಬಂದಿದೆ ಹಾಗೂ ಲಕ್ನೋದ ಆಸ್ಪತ್ರೆಯಲ್ಲಿ ಉತ್ತಮ ಚಿಕಿತ್ಸೆ ನೀಡಲು ಸೂಚಿಸಲಾಗಿದೆ ಎಂದು ಅವರು ಹೇಳಿದರು. ಖಾನ್ ಅವರನ್ನು ತಕ್ಷಣವೇ ಮೇದಾಂತ ಆಸ್ಪತ್ರೆಗೆ ಲಕ್ನೋಗೆ ಕರೆದೊಯ್ಯಲಾಯಿತು, ಇತ್ತೀಚೆಗೆ ಕೋವಿಡ್ -19 ಚಿಕಿತ್ಸೆಯ ನಂತರ ಅವರನ್ನು ಇದೇ ಆಸ್ಪತ್ರೆಯಿಂದ ಬಿಡುಗಡೆ ಮಾಡಲಾಗಿತ್ತು ಎಂದು ಜೈಲಿನ ಅಧಿಕಾರಿ ತಿಳಿಸಿದ್ದಾರೆ.

ಪೊಲೀಸರ ಬೆಂಗಾವಲಿನಲ್ಲಿ ಆ್ಯಂಬುಲೆನ್ಸ್‌ ಮೂಲಕ ಮಧ್ಯಾಹ್ನ 2 ಗಂಟೆ ಸುಮಾರಿಗೆ ಖಾನ್ ಅವರನ್ನು ಲಕ್ನೋಗೆ ಕಳುಹಿಸಲಾಗಿದೆ ಎಂದು ಅವರು ಹೇಳಿದರು.

ವಂಚನೆ ಹಾಗೂ  ಇತರ ಹಲವು ಪ್ರಕರಣಗಳಿಗೆ ಸಂಬಂಧಿಸಿದಂತೆ ಜೈಲು ಪಾಲಾಗಿದ್ದ ಸಮಾಜವಾದಿ ಪಕ್ಷದ ನಾಯಕ ಕೋವಿಡ್ -19 ಸೋಂಕಿಗೆ ಒಳಗಾದ ಕಾರಣ ಮೇ ತಿಂಗಳಲ್ಲಿ ಲಕ್ನೋದ ಮೇದಾಂತ ಆಸ್ಪತ್ರೆಗೆ ದಾಖಲಿಸಲಾಗಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News