ಜಮ್ಮು ಕಾಶ್ಮೀರ: ಇಬ್ಬರು ಉಗ್ರರ ಹತ್ಯೆ

Update: 2021-07-19 17:59 GMT

ಶ್ರೀನಗರ, ಜು.19: ಜಮ್ಮು-ಕಾಶ್ಮೀರದ ಶೋಫಿಯಾನ್ ಜಿಲ್ಲೆಯಲ್ಲಿ ರವಿವಾರ ರಾತ್ರಿ ಭದ್ರತಾ ಪಡೆಗಳು ನಡೆಸಿದ ಕಾರ್ಯಾಚರಣೆಯಲ್ಲಿ ಲಷ್ಕರೆ ತೈಯಬ ಸಂಘಟನೆಯ ಉನ್ನತ ಕಮಾಂಡರ್ ಸಹಿತ ಇಬ್ಬರು ಉಗ್ರರು ಹತರಾಗಿದ್ದಾರೆ ಎಂದು ಪೊಲೀಸರು ಹೇಳಿದ್ದಾರೆ. ‌

ಶೋಫಿಯಾನ್ ನ ಚೆಖಿ ಸಿದ್ಧಿಕ್ ಖಾನ್ ಪ್ರದೇಶದಲ್ಲಿ ಉಗ್ರರ ಚಲನವಲನದ ಬಗ್ಗೆ ದೊರೆತ ಖಚಿತ ಮಾಹಿತಿಯನ್ವಯ ಅಲ್ಲಿಗೆ ಧಾವಿಸಿದ ಭದ್ರತಾ ಪಡೆಗಳು ಸ್ಥಳದಲ್ಲಿ ನಾಕಾಬಂಧಿ ನಡೆಸಿ ಶೋಧ ಕಾರ್ಯಾಚರಣೆ ಆರಂಭಿಸಿವೆ. ಆಗ ಉಗ್ರರ ಅಡಗುದಾಣ ಪತ್ತೆಯಾಗಿದ್ದು ಅಲ್ಲಿದ್ದ ಉಗ್ರರಿಗೆ ಶರಣಾಗಲು ಹಲವು ಅವಕಾಶ ನೀಡಿದರೂ ಅವರು ಸ್ಪಂದಿಸದೆ ಭದ್ರತಾ ಪಡೆಯತ್ತ ಗುಂಡಿನ ದಾಳಿ ಆರಂಭಿಸಿದ್ದಾರೆ. 

ಇದಕ್ಕೆ ಪ್ರತಿಯಾಗಿ ಭದ್ರತಾ ಪಡೆ ನಡೆಸಿದ ಗುಂಡಿನ ದಾಳಿಯಲ್ಲಿ ಲಷ್ಕರೆ ತೈಯಬ(ಎಲ್ಇಟಿ)ದ ಇಬ್ಬರು ಉಗ್ರರು ಮೃತರಾಗಿದ್ದಾರೆ. ಮೃತರಲ್ಲಿ ಒಬ್ಬನನ್ನು ಎಲ್ಇಟಿಯ ಕಮಾಂಡರ್ ಇಷ್ಫಾಕ್ ದಾರ್ ಆಲಿಯಾಸ್ ಅಬು ಅಕ್ರಮ್ ಎಂದು ಗುರುತಿಸಲಾಗಿದೆ. 2017ರಿಂದ ಉಗ್ರರ ಗುಂಪಿನಲ್ಲಿ ಸಕ್ರಿಯನಾಗಿರುವ ಈತ ಪೊಲೀಸರು, ಭದ್ರತಾ ಪಡೆಯವರು ಹಾಗೂ ನಾಗರಿಕರ ಹತ್ಯೆಗೈದ ಹಲವು ಪ್ರಕರಣಗಳಲ್ಲಿ ಪಾಲ್ಗೊಂಡಿದ್ದ ಎಂದು ಪೊಲೀಸರು ಹೇಳಿದ್ದಾರೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News