ಕೋವಿಡ್ ಮಾರ್ಗಸೂಚಿ ಜಾರಿಗೊಳಿಸಿ ದ.ಕ. ಜಿಲ್ಲಾಧಿಕಾರಿ ಆದೇಶ: ಜು.26ರಿಂದ ಕಾಲೇಜುಗಳು ಪುನರಾರಂಭ

Update: 2021-07-20 13:50 GMT

ಮಂಗಳೂರು, ಜು.20: ಕೋವಿಡ್ ಸಮುಚಿತ ವರ್ತನೆ ಮತ್ತು ಸಂಬಂಧಪಟ್ಟ ಇಲಾಖೆಗಳು ಹೊರಡಿಸುವ ಎಸ್‌ಒಪಿಗಳನ್ನು ಕಡ್ಡಾಯವಾಗಿ ಪಾಲಿಸುವ ಷರತ್ತಿಗಳಪಟ್ಟು ಉನ್ನತ ಶಿಕ್ಷಣ ಇಲಾಖೆಗೆ ಸಂಬಂಧಿಸಿದ ಕಾಲೇಜುಗಳು ಮತ್ತು ಸಂಸ್ಥೆಗಳನ್ನು ಜು.26ರಿಂದ ಮರು ಪ್ರಾರಂಭಿಸಲು ಅನುಮತಿಸಲಾಗಿದೆ ಎಂದು ಜಿಲ್ಲಾಧಿಕಾರಿ ಡಾ.ಕೆ.ವಿ. ರಾಜೇಂದ್ರ ತಿಳಿಸಿದ್ದಾರೆ.

ಪರಿಷ್ಕೃತ ಕೋವಿಡ್ ಮಾರ್ಗಸೂಚಿ ಜಾರಿಗೊಳಿಸಿರುವ ಜಿಲ್ಲಾಧಿಕಾರಿ, ಕೋವಿಡ್-19 ಲಸಿಕೆಯ ಕನಿಷ್ಠ ಒಂದು ಡೋಸ್ ಪಡೆದ ವಿದ್ಯಾರ್ಥಿಗಳು, ಬೋಧಕ ಮತ್ತು ಬೋಧಕೇತರ ಸಿಬ್ಬಂದಿಗೆ ಮಾತ್ರ ಕಾಲೇಜು, ಸಂಸ್ಥೆಗಳಿಗೆ ಹಾಜರಾಗಲು ಅನುಮತಿ ನೀಡಲಾಗಿದೆ.

ವಿದ್ಯಾರ್ಥಿಗಳ ಹಾಜರಾತಿಯು ಐಚ್ಛಿಕವಾಗಿರುತ್ತದೆ. ದೀರ್ಘಾವಧಿಯ ತಾಂತ್ರಿಕ ಕೋರ್ಸ್‌ಗಳನ್ನು ಒಳಗೊಂಡಂತೆ ಎಲ್ಲ ಕೌಶಲ್ಯ ಅಭಿವೃದ್ಧಿ ತರಬೇತಿಗಳಿಗೆ ಅನುಮತಿಸಲಾಗಿದೆ ಎಂದಿದ್ದಾರೆ.

ಜಿಲ್ಲೆಯಾದ್ಯಂತ ಈಗಾಗಲೇ ಅಸ್ತಿತ್ವದಲ್ಲಿರುವ ಮಾರ್ಗಸೂಚಿಗಳ ಪ್ರಕಾರ ರಾತ್ರಿ 10 ಗಂಟೆಯಿಂದ ಬೆಳಿಗ್ಗೆ 5 ಗಂಟೆಯವರೆಗೆ ರಾತ್ರಿ ಕರ್ಫ್ಯೂ ವಿಧಿಸಲಾಗುವುದು. ಸಿನೆಮಾ ಹಾಲ್‌ಗಳು, ಮಲ್ಟಿಪ್ಲೆಕ್ಸ್‌ಗಳು, ಚಿತ್ರಮಂದಿರಗಳು, ರಂಗಮಂದಿರಗಳು, ಸಭಾಂಗಣಗಳು ಮತ್ತು ಸಭಾಂಗಣದಂತಹ ಇತರ ಸ್ಥಳಗಳಿಗೆ ಆಸನ ಸಾಮರ್ಥ್ಯದ ಶೇ.50ರೊಂದಿಗೆ ಕಾರ್ಯನಿರ್ವಹಿಸಲು ಅನುಮತಿ ನೀಡಲಾಗಿದೆ.

ನೆರೆಯ ರಾಜ್ಯ ಕೇರಳದಿಂದ ದ.ಕ. ಜಿಲ್ಲೆಗೆ ಬರುವ ವ್ಯಕ್ತಿಗಳ ಮೇಲಿನ ವಿಶೇಷ ಕಣ್ಗಾವಲು ಕ್ರಮಗಳು ಮುಂದಿನ ಆದೇಶದವರೆಗೆ ಅನ್ವಯಿಸಲಿದೆ ಎಂದರು.

ಜಿಲ್ಲೆಯಲ್ಲಿ ಕೋವಿಡ್-19 ನಿಯಂತ್ರಣಕ್ಕೆ ಸರಕಾರವು ಕಾಲಕಾಲಕ್ಕೆ ಹೊರಡಿಸುವ ಎಲ್ಲ ಅಗತ್ಯ ಕ್ರಮಗಳನ್ನು ಕೈಗೊಳ್ಳುತ್ತಿದೆ. ಕಟ್ಟುನಿಟ್ಟಿನ ನಿರ್ಬಂಧಗಳ ಪರಿಣಾಮಕಾರಿ ಅನುಷ್ಠಾನದಿಂದಾಗಿ ಕೋವಿಡ್ ಪ್ರಕರಣಗಳ ಸಂಖ್ಯೆಯಲ್ಲಿ ಇಳಿಮುಖವಾಗಿದೆ ಎಂದು ಜಿಲ್ಲಾಧಿಕಾರಿ ಡಾ.ಕೆ.ವಿ. ರಾಜೇಂದ್ರ ಪ್ರಕಟನೆಯಲ್ಲಿ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News