ಪಿಎಂ-ಕಿಸಾನ್ ಯೋಜನೆ ಅಡಿಯಲ್ಲಿ 42 ಲಕ್ಷ ಅನರ್ಹ ರೈತರಿಗೆ ವರ್ಗಾಯಿಸಿದ್ದ 3,000 ಕೋ. ರೂ. ವಸೂಲಿ

Update: 2021-07-20 17:42 GMT

ಹೊಸದಿಲ್ಲಿ, ಜು. 20: ಪ್ರಧಾನ ಮಂತ್ರಿ ಕಿಸಾನ್ ಯೋಜನೆ ಅಡಿಯಲ್ಲಿ 42 ಲಕ್ಷಕ್ಕೂ ಅಧಿಕ ಅನರ್ಹ ರೈತರಿಗೆ ವರ್ಗಾವಣೆ ಮಾಡಲಾಗಿದ್ದ ಸುಮಾರು 3,000 ಕೋಟಿ ರೂಪಾಯಿಯನ್ನು ವಸೂಲಿ ಮಾಡಲಾಗುತ್ತಿದೆ ಎಂದು ಸಂಸತ್ತಿನಲ್ಲಿ ಕೇಂದ್ರ ಸರಕಾರ ತಿಳಿಸಿತು. ‌

ಪ್ರಧಾನ ಮಂತ್ರಿ ಕಿಸಾನ್ ಯೋಜನೆ ಅಡಿಯಲ್ಲಿ ಕೇಂದ್ರ ಸರಕಾರ ದೇಶಾದ್ಯಂತ ಪ್ರತಿವರ್ಷ ತಲಾ 6,000 ರೂಪಾಯಿಯನ್ನು ರೈತರಿಗೆ ವರ್ಗಾವಣೆ ಮಾಡುತ್ತದೆ. ಈ ಯೋಜನೆ ಫಲಾನುಭವಿಗಳಾಗಲು ತೆರಿಗೆ ಪಾವತಿಸದ ರೈತರು ಮಾತ್ರ ಅರ್ಹರು. ಸಂಸತ್ತಿನಲ್ಲಿ ಮಂಗಳವಾರ ಪ್ರಶ್ನೆಯೊಂದಕ್ಕೆ ಉತ್ತರಿಸಿದ ಕೃಷಿ ಸಚಿವ ನರೇಂದ್ರ ಸಿಂಗ್ ತೋಮರ್, ಪ್ರಧಾನ ಮಂತ್ರಿ ಕಿಸಾನ್ ಯೋಜನೆಯಲ್ಲಿ ಪಲಾನುಭವಿಗಳಾದ 42.16 ಲಕ್ಷ ಅನರ್ಹ ರೈತರಿಂದ 2,999 ಕೋಟಿ ರೂಪಾಯಿಯನ್ನು ವಸೂಲು ಮಾಡಲಾಗುತ್ತಿದೆ ಎಂದು ಹೇಳಿದರು. 

ಪ್ರಧಾನ ಮಂತ್ರಿ ಕಿಸಾನ್ ಯೋಜನೆಯ ಅನರ್ಹ ಫಲಾನುಭವಿ ರೈತರಲ್ಲಿ ಗರಿಷ್ಠ ಸಂಖ್ಯೆಯಲ್ಲಿ ಅಸ್ಸಾಂ (8.35 ಲಕ್ಷ), ತಮಿಳುನಾಡು (7.22 ಲಕ್ಷ), ಪಂಜಾಬ್ (6,62 ಲಕ್ಷ), ಮಹಾರಾಷ್ಟ್ರ (4,45 ಲಕ್ಷ), ಉತ್ತರಪ್ರದೇಶ (2.65 ಲಕ್ಷ), ಗುಜರಾತ್ (2.36)ನಲ್ಲಿ ಇದ್ದಾರೆ ಎಂದು ಅವರು ತಿಳಿಸಿದರು. ಅಸ್ಸಾಂನಿಂದ 554 ಕೋಟಿ ರೂಪಾಯಿ, ಪಂಜಾಬ್ನಿಂದ 437 ಕೋಟಿ ರೂಪಾಯಿ, ಮಹಾರಾಷ್ಟ್ರದಿಂದ 358 ಕೋಟಿ ರೂಪಾಯಿ, ತಮಿಳುನಾಡಿನಿಂದ 340 ಕೋಟಿ ರೂಪಾಯಿ, ಉತ್ತರಪ್ರದೇಶದಿಂದ 258 ಕೋಟಿ ರೂಪಾಯಿ ಹಾಗೂ ಗುಜರಾತ್ನಿಂದ 220 ಕೋಟಿ ರೂಪಾಯಿ ವಸೂಲಿ ಮಾಡಲಾಗುವುದು ಎಂದು ಅವರ ಸಂಸತ್ತಿನಲ್ಲಿ ತಿಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News