ಕರಾವಳಿಯಲ್ಲಿ ‘ಬಕ್ರೀದ್’ ಆಚರಣೆ

Update: 2021-07-21 03:54 GMT

ಮಂಗಳೂರು, ಜು.21: ಪ್ರವಾದಿ ಇಬ್ರಾಹೀಂ (ಅ) ಮತ್ತು ಅವರ ಪುತ್ರ ಇಸ್ಮಾಯೀಲ್ (ಅ) ಅವರ ತ್ಯಾಗ ಮತ್ತು ಬಲಿದಾನದ ಸಂಕೇತವಾದ ಬಕ್ರೀದ್ ಹಬ್ಬವನ್ನು ಬುಧವಾರ ಕರಾವಳಿಯಲ್ಲಿ ಆಚರಿಸಲಾಯಿತು.

ಕೋವಿಡ್-19 ಹಿನ್ನೆಲೆಯಲ್ಲಿ ಸರಕಾರ ಹೊರಡಿಸಿದ ಹೊಸ ಮಾರ್ಗಸೂಚಿಯಂತೆ ದ.ಕ. ಮತ್ತು ಉಡುಪಿ ಹಾಗೂ ಕಾಸರಗೋಡು ಜಿಲ್ಲೆಯಾದ್ಯಂತ ಹಬ್ಬವನ್ನು ಆಚರಿಸಲಾಗುತ್ತಿದೆ. ಬೆಳಗ್ಗೆ 6:30ಕ್ಕೆ ಕೆಲವು ಮಸೀದಿಗಳಲ್ಲಿ ಈದ್ ನಮಾಝ್ ಮತ್ತು ಖುತ್ಬಾ ಆರಂಭಗೊಂಡಿದೆ. ಕಳೆದ ಬಾರಿಯೂ ಕೋವಿಡ್-19 ಹಿನ್ನೆಲೆಯಲ್ಲಿ ಸರಕಾರ ಕೆಲವೊಂದು ನಿರ್ಬಂಧ ಹೇರಿದ್ದರಿಂದ ಹಬ್ಬದ ಸಂಭ್ರಮವಿರಲಿಲ್ಲ. ಆದರೆ ಈ ಬಾರಿ ಹೊಸ ಮಾರ್ಗಸೂಚಿಯನ್ನು ಪಾಲಿಸುವುದರೊಂದಿಗೆ ತುಸು ಸಂಭ್ರಮ ಕಂಡು ಬಂತು.

ಆಯಾ ಮಸೀದಿಗಳಲ್ಲಿ ಸೇರುವ ಜನರ ಸಾಮರ್ಥ್ಯಕ್ಕೆ ಅನುಗುಣವಾಗಿ ಶೇ.50ನ್ನು ಮೀರದಂತೆ ಹಂತ ಹಂತವಾಗಿ ಸಾಮೂಹಿಕ ನಮಾಝ್, ಈದ್ ಖುತ್ಬಾ ನೆರವೇರಿಸಬೇಕು ಎಂದು ರಾಜ್ಯ ಸರಕಾರ ಸೂಚಿಸಿದ ಮೇರೆಗೆ ಎಲ್ಲಾ ಮಸೀದಿಗಳಲ್ಲಿ ಅದನ್ನು ಪಾಲಿಸಲಾಯಿತು.

65 ವರ್ಷ ಪ್ರಾಯ ಮೇಲ್ಪಟ್ಟವರು ಮತ್ತು 10 ವರ್ಷ ಕಡಿಮೆ ವಯಸ್ಸಿನ ಮಕ್ಕಳು ಮಸೀದಿಗೆ ಪ್ರವೇಶಿರಲಿಲ್ಲ. ಉಳಿದಂತೆ ಮಸೀದಿಗೆ ಪ್ರವೇಶಿಸುವ ಮುನ್ನ ಎಲ್ಲರ ದೇಹದ ತಾಪಮಾನ ತಪಾಸಣೆ ಮಾಡಲಾಗಿತ್ತು. ಕೈಗಳನ್ನು ಸ್ಯಾನಿಟೈಝರ್‌ನಿಂದ ಶುಚಿಗೊಳಿಸಲು ವ್ಯವಸ್ಥೆ ಕಲ್ಪಿಸಲಾಗಿತ್ತು. ಮಾಸ್ಕನ್ನು ಧರಿಸಿದ್ದರು. ನಮಾಝ್ ವೇಳೆ ಸುರಕ್ಷಿತ ಅಂತರವನ್ನು ಕಾಪಾಡಲಾಗಿತ್ತು. ಮನೆಯಿಂದ ಕೊಂಡೊಯ್ದ ಮುಸಲ್ಲಾ ಹಾಸಿ ನಮಾಝ್ ನಿರ್ವಹಿಸಲಾಯಿತು. ಹಸ್ತಲಾಘವ ಮತ್ತು ಆಲಿಂಗನಕ್ಕೆ ಅವಕಾಶವಿರಲಿಲ್ಲ.

ನಗರದ ಬಾವುಟಗುಡ್ಡೆಯ ಈದ್ಗಾ ಜುಮಾ ಮಸೀದಿಯಲ್ಲಿ ಖತೀಬ್ ಸ್ವದಕತುಲ್ಲಾ ನದ್ವಿ ಮತ್ತು ಮಂಗಳೂರು ಬಂದರ್‌ನ ಝೀನತ್ ಬಕ್ಷ್ ಕೇಂದ್ರ ಜುಮ್ಮಾ ಮಸೀದಿಯಲ್ಲಿ ಖತೀಬ್ ಅಲ್‌ಹಾಜ್ ಅಬುಲ್ ಅಕ್ರಮ್ ಮುಹಮ್ಮದ್ ಬಾಖವಿ ಹಾಗೂ ಉಳ್ಳಾಲ ಕೇಂದ್ರ ಜುಮಾ ಮಸೀದಿಯಲ್ಲಿ ಖತೀಬ್ ಅನ್ವರ್ ಅಲಿ ದಾರಿಮಿಯ ನೇತೃತ್ವದಲ್ಲಿ ಈದ್ ನಮಾಝ್ ಮತ್ತು ಖುತ್ಬಾ ಪಾರಾಯಣ ನಡೆಯಿತು.

ಸರಕಾರದ ಸೂಚನೆಯ ಮೇರೆಗೆ ಮಸೀದಿ ಹೊರತುಪಡಿಸಿ ಯಾವುದೇ ಈದ್ಗಾಗಳಲ್ಲಿ ನಮಾಝ್ ನಿರ್ವಹಿಸಲಿಲ್ಲ. ಸಾಮಾನ್ಯವಾಗಿ ನಗರದ ಈದ್ಗಾ ಜುಮಾ ಮಸೀದಿಯಲ್ಲಿ ಸಾಮೂಹಿಕವಾಗಿ ನಮಾಝ್ ನಿರ್ವಹಿಸಲಾಗುತ್ತಿತ್ತು. ಆದರೆ ಈ ಬಾರಿ ಈದ್ಗಾದಲ್ಲಿ ಸ್ಥಳೀಯರಷ್ಟೇ ನಮಾಝ್ ನಿರ್ವಹಿಸಿದರು. ಉಳಿದಂತೆ ನಗರದ ಪಂಪ್‌ವೆಲ್ ಮಸ್ಜಿದುತ್ತಖ್ವಾ, ಕಂಕನಾಡಿಯ ರಹ್ಮಾನಿಯಾ ಜುಮಾ ಮಸ್ಜಿದ್, ವಾಸ್‌ಲೇನ್‌ನ ಇಹ್ಸಾನ್ ಮಸ್ಜಿದ್, ಪಾಂಡೇಶ್ವರ ಪೊಲೀಸ್‌ಲೇನ್‌ನ ಫೌಝಿಯಾ ಜುಮಾ ಮಸ್ಜಿದ್, ಹಂಪನಕಟ್ಟೆಯ ಮಸ್ಜಿದುನ್ನೂರ್, ಅತ್ತಾವರ ಕಾಪ್ರಿಗುಡ್ಡ ಜುಮಾ ಮಸ್ಜಿದ್, ಪಡೀಲ್ ಮಸ್ಜಿದುರ್ರಹ್ಮಾನ್ ಸುನ್ನೀ ಜಮಾಅತ್, ಬಂದರ್ ಕಚ್ಚಿ ಮೆಮನ್ ಮಸ್ಜಿದ್, ಬಂದರ್ ಕಂದುಕದ ಬದ್ರಿಯಾ ಜುಮಾ ಮಸ್ಜಿದ್, ಬಂದರ್ ಕಸೈಗಲ್ಲಿ ಮಸ್ಜಿದ್, ಬಂದರ್ ಬೂಬುಕಾ ಜುಮಾ ಮಸ್ಜಿದ್, ಕುದ್ರೋಳಿ ಜಾಮಿಯಾ ಮಸ್ಜಿದ್, ಜೋಡುಪಳ್ಳಿ ಮಸ್ಜಿದ್, ನಡುಪಳ್ಳಿ ಮಸ್ಜಿದ್, ಮೊಯ್ದೀನ್ ಮಸ್ಜಿದ್, ಕಂಡತ್‌ಪಳ್ಳಿ ಮಸ್ಜಿದ್ ಮತ್ತಿತರ ಎಲ್ಲಾ ಮಸೀದಿಗಳಲ್ಲಿ ಈದ್ ನಮಾಝ್ ನಿರ್ವಹಿಸಲಾಯಿತು.

ಜಿಲ್ಲೆಯ ಪ್ರಮುಖ ಪಟ್ಟಣ ಹಾಗೂ ಗ್ರಾಮಾಂತರ ಪ್ರದೇಶಗಳಲ್ಲೂ ಕೂಡ ಕೋವಿಡ್ ಮಾರ್ಗಸೂಚಿ ಪಾಲಿಸಿ ಈದ್ ನಮಾಝ್ ನಿರ್ವಹಿಸಲಾಯಿತು. ಮುಂಜಾನೆ ಎದ್ದು ಹೊಸ ಬಟ್ಟೆಬರೆ ಧರಿಸಿ ‘ಅಲ್ಲಾಹು ಅಕ್ಬರ್’ ಎಂಬ ಘೋಷಣೆ ಮೊಳಗಿಸಿ ಮಸೀದಿಗೆ ತೆರಳಿ ಅಲ್ಲಿ ನಮಾಝ್ ನಿರ್ವಹಿಸಿದ ಬಳಿಕ ದಫನ ಭೂಮಿಗೆ ತೆರಳಿ ಅಗಲಿದ ಕುಟುಂಬದ ಸದಸ್ಯರಿಗೆ ವಿಶೇಷ ಪ್ರಾರ್ಥನೆ, ಕುಟುಂಬದ, ಸ್ನೇಹಿತರ ಮನೆಗೆ ಸೌಹಾರ್ದ ಭೇಟಿ ನೀಡುವ ದೃಶ್ಯ ಕಂಡು ಬಂತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News