ಉಡುಪಿ ಜಿಲ್ಲೆಯಾದ್ಯಂತ ಸರಳವಾಗಿ ಬಕ್ರೀದ್ ಹಬ್ಬ ಆಚರಣೆ

Update: 2021-07-21 05:55 GMT

ಉಡುಪಿ, ಜು.21: ಕೋವಿಡ್ ಭೀತಿಯ ಮಧ್ಯೆ ಎಲ್ಲ ರೀತಿಯ ಸುರಕ್ಷತಾ ಕ್ರಮಗಳೊಂದಿಗೆ ಉಡುಪಿ ಜಿಲ್ಲೆಯ ಮಸೀದಿಗಳಲ್ಲಿ ಜು.21ರಂದು ವಿಶೇಷ ನಮಾಝ್‌ ನಿರ್ವಹಿಸುವ ಮೂಲಕ  ಬಕ್ರೀದ್ ಹಬ್ಬ(ಈದುಲ್ ಅಝಾ) ಸರಳವಾಗಿ ಆಚರಿಸಲಾಯಿತು.

 ಉಡುಪಿ ಜಾಮೀಯ ಮಸೀದಿಯಲ್ಲಿ ಖತೀಬ್ ಮೌಲಾನ ರಶೀದ್ ಅಹ್ಮದ್ ನದ್ವಿ ಉಮ್ರಿ ಹಾಗೂ ಮೂಳೂರು ಜುಮಾ ಮಸೀದಿಯಲ್ಲಿ ಖತೀಬ್ ಅಲ್‌ಹಾಜ್ ಅಬ್ದುರ್ರಹ್ಮಾನ್ ಮದನಿ ನೇತೃತ್ವದಲ್ಲಿ ಈದ್ ನಮಾಝ್ ಹಾಗೂ ಖುತ್ಬಾ ಪಾರಾಯಣ ನಡೆಯಿತು.

ಅದೇ‌ರೀತಿ ಉಡುಪಿ, ಕುಂದಾಪುರ, ಕಾರ್ಕಳ, ಬ್ರಹ್ಮಾವರ, ಹೆಬ್ರಿ, ಕಾಪು, ಬೈಂದೂರು ತಾಲೂಕುಗಳಲ್ಲಿ ವಕ್ಫ್ ನೋಂದಾಯಿತ 138 ಸೇರಿದಂತೆ ಜಿಲ್ಲೆಯ ಒಟ್ಟು 180ಕ್ಕೂ ಅಧಿಕ ಮಸೀದಿಗಳಲ್ಲಿ ಅಲ್ಲಿನ ಸಾಮರ್ಥ್ಯಕ್ಕೆ ಅನುಗುಣವಾಗಿ ಶೇ.50ರಷ್ಟು ಮಂದಿ ಮಾಸ್ಕ್ ಧರಿಸಿ ಸುರಕ್ಷಿತ ಅಂತರ ಕಾಪಾಡಿಕೊಂಡು ಸಾಮೂಹಿಕ ಈದ್ ನಮಾಝ್ ನಿರ್ವಹಿಸಿದರು.

ಉಡುಪಿ ಹಾಶಿಮಿ ಮಸೀದಿಯಲ್ಲಿ ರಾಜ್ಯ ಆಡಳಿತ ಹೊರಡಿಸಿದ ಮಾರ್ಗಸೂಚಿಗಳೊಂದಿಗೆ ಈದ್ ನಮಾಜ್ ನೆರವೇರಿಸಲಾಯಿತು. ಸಾಮೂಹಿಕ ಪ್ರಾರ್ಥನೆ ನಂತರ ಮೌಲಾನಾ ಹಾಶಿಮ್ ಉಮ್ರಿ ಅವರು ಈದ್ ಅಲ್ ಅಝಾದ ಮಹತ್ವವನ್ನು ಹೇಳಿದರು

ಇದೇ ವೇಳೆ ಮುಸ್ಲಿಂ ಬಾಂಧವರು ಸಾಮಾಜಿಕ ದೂರವನ್ನು ಕಾಪಾಡಿಕೊಂಡು ಮುಖವಾಡ ಧರಿಸಿ ಈದ್ ಶುಭಾಶಯಗಳನ್ನು ವಿನಿಮಯ ಮಾಡಿಕೊಂಡರು.
ಸರಕಾರದ ನಿಯಮದ ಪ್ರಕಾರ 10 ವರ್ಷಕ್ಕಿಂತ ಕೆಳಗಿನ 65 ವರ್ಷಕ್ಕಿಂತ ಮೇಲ್ಪಟ್ಟವರಿಗೆ ಮಸೀದಿಗೆ ಪ್ರವೇಶಿಸುವ ಅವಕಾಶ ಈ ಬಾರಿ ನೀಡಲಾಗಿಲ್ಲ‌. ಜಿಲ್ಲೆಯ ಸೂಕ್ಷ್ಮ ಪ್ರದೇಶಗಳಲ್ಲಿರುವ ಮಸೀದಿ ವಠಾರಗಳಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ಒದಗಿಸಲಾಗಿದೆ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News