ಕೋವಿಡ್‌-19 ಗೆ ಹೆದರಿ 15 ತಿಂಗಳ ಕಾಲ ಗುಡಿಸಲಿನೊಳಗೆ ಬಂಧಿಯಾಗಿದ್ದ ಕುಟುಂಬ!

Update: 2021-07-22 05:55 GMT
photo: ANI

ಪೂರ್ವ ಗೋದಾವರಿ (ಆಂಧ್ರಪ್ರದೇಶ): ಕೋವಿಡ್-19  ಸೋಂಕಿಗೆ ಒಳಗಾಗಬಹುದೆಂಬ ಭಯದಿಂದ ಸುಮಾರು 15 ತಿಂಗಳ ಕಾಲ ಗುಡಿಸಲಿನಲ್ಲಿ ಸೀಮಿತಗೊಳಿಸಿಕೊಂಡಿದ್ದ ಆಂಧ್ರಪ್ರದೇಶದ ಕಡಾಲಿ ಗ್ರಾಮದ ಕುಟುಂಬವೊಂದನ್ನು ಆಂಧ್ರಪ್ರದೇಶ ಪೊಲೀಸರು ಬುಧವಾರ ರಕ್ಷಿಸಿದ್ದಾರೆ.

ಕಡಾಲಿ ಗ್ರಾಮದ ಸರಪಂಚ್ ಚೊಪ್ಪಳ ಗುರುನಾಥ್ ಅವರ ಪ್ರಕಾರ, ಋತಮ್ಮ( 50 ವರ್ಷ) ಕಾಂತಮಣಿ(32,)ಹಾಗೂ  ರಾಣಿ(30) ಸುಮಾರು 15 ತಿಂಗಳ ಹಿಂದೆ ತಮ್ಮ ನೆರೆಹೊರೆಯವರೊಬ್ಬರು ಕೋವಿಡ್-19 ನಿಂದ ಸಾವನ್ನಪ್ಪಿದ ಬಳಿಕ ತಮ್ಮನ್ನು ತಾವು ಗೃಹಬಂಧನದಲ್ಲಿ ಇರಿಸಿಕೊಂಡರು ಎಂದು ವರದಿಯಾಗಿದೆ.

ಹಳ್ಳಿಯ ಸ್ವಯಂಸೇವಕರೊಬ್ಬರು ಸರಕಾರಿ ಯೋಜನೆಯಡಿ  ಈ ಕುಟುಂಬಕ್ಕೆ ವಸತಿ ಜಮೀನು ಮಂಜೂರಾಗಿದ್ದಕ್ಕಾಗಿ ಅವರ ಹೆಬ್ಬೆಟ್ಟು ಗುರುತು  ಪಡೆಯಲು ಹೋದಾಗ ಈ ವಿಷಯ ಬೆಳಕಿಗೆ ಬಂದಿತು. ಸ್ವಯಂಸೇವಕರು ಈ ವಿಷಯವನ್ನು ಗ್ರಾಮದ ಸರಪಂಚ್  ಹಾಗೂ  ಇತರರಿಗೆ ತಿಳಿಸಿದರು.

"ಚುಟ್ಟುಗಲ್ಲಾ ಬೆನ್ನಿ, ಅವರ ಪತ್ನಿ ಹಾಗೂ ಇಬ್ಬರು ಮಕ್ಕಳು ಇಲ್ಲಿ ವಾಸಿಸುತ್ತಿದ್ದಾರೆ. ಅವರು ಕೊರೋನಗೆ ಹೆದರುತ್ತಿದ್ದರು. ಆದ್ದರಿಂದ ಅವರು ಸುಮಾರು 15 ತಿಂಗಳ ಕಾಲ ಮನೆಯಲ್ಲಿ ಬೀಗ ಹಾಕಿಕೊಂಡಿದ್ದರು.  ಆ ಮನೆಗೆ ಹೋದ ಯಾವುದೇ ಸ್ವಯಂಸೇವಕ ಅಥವಾ ಆಶಾ ಕಾರ್ಯಕರ್ತೆಯರಿಗೆ ಯಾರೂ ಪ್ರತಿಕ್ರಿಯಿಸದ ಕಾರಣ ವಾಪಸ್ ಆಗಿದ್ದರು. ಮೂವರು ಆ ಮನೆಯಲ್ಲಿ ಸ್ವಯಂ ಬೀಗ ಹಾಕಿಕೊಂಡಿದ್ದಾರೆ . ಅವರ ಆರೋಗ್ಯವು ಕೆಟ್ಟ ಸ್ಥಿತಿಯಲ್ಲಿದೆ ಎಂದು  ಅವರ ಕೆಲವು ಸಂಬಂಧಿಕರು ನಮಗೆ ಮಾಹಿತಿ ನೀಡಿದ್ದರು'' ಎಂದು  ಎಎನ್‌ಐಯೊಂದಿಗೆ ಮಾತನಾಡಿದ ಗುರುನಾಥ್ ಹೇಳಿದ್ದಾರೆ.

ವಿಷಯ ತಿಳಿದ ಬಳಿಕ  ನಾವು ಆ ಸ್ಥಳಕ್ಕೆ ಧಾವಿಸಿ ಪೊಲೀಸರಿಗೆ ಮಾಹಿತಿ ನೀಡಿದ್ದೇವೆ. ರಾಜೋಲ್ ಸಬ್ ಇನ್ಸ್‌ಪೆಕ್ಟರ್ ಕೃಷ್ಣಮಾಚಾರಿ ಹಾಗೂ  ತಂಡ ಬಂದು ಅವರನ್ನು ರಕ್ಷಿಸಿತು. ಅವರು ಹೊರಗೆ ಬಂದಾಗ ಅವರ ಸ್ಥಿತಿ ತುಂಬಾ ಕರುಣಾಜನಕವಾಗಿತ್ತು. ಅವರು ಅನೇಕ ದಿನಗಳವರೆಗೆ ಸ್ನಾನ ಮಾಡಿರಲಿಲ್ಲ. ಇನ್ನೆರಡು ದಿನ ತಡವಾಗಿದ್ದರೆ ಸಾಯುವ ಸಾಧ್ಯತೆಯಿತ್ತು. ನಾವು ತಕ್ಷಣ ಅವರನ್ನು ಸರಕಾರಿ ಆಸ್ಪತ್ರೆಗೆ ಸಾಗಿಸಿದೆವು. ಈಗ ಅವರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ” ಎಂದು ಅವರು ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News