ಕೋವಿಡ್ ಎರಡನೇ ಅಲೆಯ ಸಂದರ್ಭದಲ್ಲಿ 13,000 ವೆಂಟಿಲೇಟರ್ ಗಳನ್ನು ಕೇಂದ್ರ ಬಳಸಿರಲೇ ಇಲ್ಲ!
ಹೊಸದಿಲ್ಲಿ,ಜು.22: ವಿನಾಶಕಾರಿ ಕೋವಿಡ್ ಎರಡನೇ ಅಲೆಯ ಸಂದರ್ಭದಲ್ಲಿ ಭಾರತದಲ್ಲಿ ಆರೋಗ್ಯ ಮೂಲಸೌಕರ್ಯ ಸಮರ್ಪಕವಾಗಿದ್ದರೆ ನೂರಾರು ಜೀವಗಳನ್ನು ಉಳಿಸಬಹುದಿತ್ತು. ದೇಶಾದ್ಯಂತ ವೆಂಟಿಲೇಟರ್ ಹಾಸಿಗೆಗಳಿಗೆ ಬೇಡಿಕೆ ಮುಗಿಲು ಮುಟ್ಟಿದ್ದು, ಹಲವಾರು ರಾಜ್ಯಗಳಲ್ಲಿ ಐಸಿಯುಗಳು ಅಥವಾ ವೆಂಟಿಲೇಟರ್ ಹಾಸಿಗೆಗಳ ಬಗ್ಗೆ ಹಲವಾರು ಮಾಧ್ಯಮಗಳು ಆದ್ಯತೆಯಲ್ಲಿ ವರದಿ ಮಾಡಿದ್ದವು. ಆದರೆ ವೆಂಟಿಲೇಟರ್ಗಳ ಪೂರೈಕೆಯಲ್ಲಿ ನಿಜವಾಗಿಯೂ ಕೊರತೆ ಇತ್ತೇ? ಕೇಂದ್ರವು ಖರೀದಿಸಿದ್ದ ಸುಮಾರು 13,000 ವೆಂಟಿಲೇಟರ್ ಗಳನ್ನು ರಾಜ್ಯಗಳಿಗೆ ವಿತರಿಸದೆ ಮೂಲೆಗುಂಪು ಮಾಡಲಾಗಿತ್ತು ಎನ್ನುವುದನ್ನು ಜು.8ರಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯವು ಉದ್ಯಮಿ ನಿಲೇಶ ಜಿ.ಪ್ರಭು ಅವರಿಗೆ ನೀಡಿರುವ ಆರ್ಟಿಐ ಉತ್ತರವನ್ನು ಉಲ್ಲೇಖಿಸಿ ಸುದ್ದಿ ಜಾಲತಾಣ thequint.com ತನ್ನ ತನಿಖಾ ವರದಿಯಲ್ಲಿ ತಿಳಿಸಿದೆ.
ಕೋವಿಡ್ ಎರಡನೇ ಅಲೆಯು ಉತ್ತುಂಗದಲ್ಲಿದ್ದಾಗಲೂ ಸುಮಾರು 13,000 ವೆಂಟಿಲೇಟರ್ಗಳನ್ನು ಏಕೆ ವಿತರಿಸಿರಲಿಲ್ಲ ಎನ್ನುವುದು ಪ್ರಶ್ನೆ.
ಎರಡನೇ ಅಲೆಯ ಸಂದರ್ಭದಲ್ಲಿ ಖಾಸಗಿ ಮತ್ತು ಸರಕಾರಿ ಆಸ್ಪತ್ರೆಗಳಲ್ಲಿ ವೆಂಟಿಲೇಟರ್ ಹಾಸಿಗೆಗಳಿಗೆ ಬೇಡಿಕೆ ನಿರಂತರವಾಗಿ ಏರುತ್ತಲೇ ಇತ್ತು. ಸರಕಾರದ ಬಳಿ ವೆಂಟಿಲೇಟರ್ಗಳ ದಾಸ್ತಾನು ಇದ್ದೂ ಅವುಗಳನ್ನು ಸ್ಥಾಪಿಸಿರದಿದ್ದರೆ ಅದು ನಿಜಕ್ಕೂ ವಿಷಾದನೀಯ. ಇವುಗಳನ್ನು ಸ್ಥಾಪಿಸಿ ನಿರ್ವಹಿಸುವಲ್ಲಿ ಮತ್ತು ಇವುಗಳ ಬಳಕೆಗಾಗಿ ವೈದ್ಯರಿಗೆ ತರಬೇತಿ ನೀಡುವಲ್ಲಿ ನಮ್ಮ ದೇಶದ ಸಾಮರ್ಥ್ಯದಲ್ಲಿ ಕೊರತೆಯಿಂದಾಗಿ ಹಲವಾರು ಜೀವಗಳು ಬಲಿಯಾದವು ಎನ್ನುತ್ತಾರೆ ಭಾರತೀಯ ವೈದ್ಯಕೀಯ ಸಾಧನಗಳ ಕೈಗಾರಿಕಾ ಸಂಘ (ಐಮೆಡ್)ನ ಫೋರಂ ಕೋಆರ್ಡಿನೇಟರ್ ರಾಜೀವನಾಥ್.
ನಿಸ್ಸಂಶಯವಾಗಿ ಈ 13,000 ವೆಂಟಿಲೇಟರ್ಗಳನ್ನು ಸಕಾಲದಲ್ಲಿ ವಿತರಿಸಿದ್ದರೆ ಮತ್ತು ಆಸ್ಪತ್ರೆಗಳಲ್ಲಿ ಸ್ಥಾಪಿಸಿದ್ದರೆ ಹಲವಾರು ಜೀವಗಳು ಉಳಿಯುತ್ತಿದ್ದವು ಎಂದು thequint.com ವರದಿ ಮಾಡಿದೆ.
2020,ಜೂನ್ ವೇಳೆಗೆ ಆರೋಗ್ಯ ಸಚಿವಾಲಯವು 59,873 ವೆಂಟಿಲೇಟರ್ಗಳನ್ನು ಖರೀದಿಸಿತ್ತು ಮತ್ತು 2021,ಜೂ.1ರವರೆಗೆ 46,900 ವೆಂಟಿಲೇಟರ್ಗಳನ್ನು 36 ರಾಜ್ಯಗಳಿಗೆ ಮತ್ತು ಕೇಂದ್ರ ಸರಕಾರದ ಅಧೀನದ ಆಸ್ಪತ್ರೆಗಳಿಗೆ ವಿತರಿಸಲಾಗಿತ್ತು ಎಂದು ಆರ್ಟಿಐ ಉತ್ತರದಲ್ಲಿ ತಿಳಿಸಲಾಗಿದೆ. ಗುಜರಾತ್ ಅತ್ಯಧಿಕ (5,600) ವೆಂಟಿಲೇಟರ್ಗಳನ್ನು ಪಡೆದಿದ್ದರೆ, ಮಹಾರಾಷ್ಟ್ರಕ್ಕೆ 5,555 ಮತ್ತು ಉತ್ತರ ಪ್ರದೇಶಕ್ಕೆ 5,316 ವೆಂಟಿಲೇಟರ್ಗಳು ಲಭಿಸಿದ್ದವು. ಸಿಕ್ಕಿಮ್ ಗೆ ಕನಿಷ್ಠ ಪ್ರಮಾಣದಲ್ಲಿ (ಕೇವಲ 10) ವೆಂಟಿಲೇಟರ್ಗಳನ್ನು ಪೂರೈಸಲಾಗಿತ್ತು. ಅಂದರೆ ಸುಮಾರು 13,000 ವೆಂಟಿಲೇಟರ್ಗಳು ಕೇಂದ್ರದ ಬಳಿ ಉಳಿದುಕೊಂಡಿದ್ದವು ಮತ್ತು ಅವುಗಳ ಬಳಕೆಯಾಗಿರಲಿಲ್ಲ ಎಂದು thequint.com ವರದಿ ಮಾಡಿದೆ.
ಆರ್ಟಿಐ ಉತ್ತರದಲ್ಲಿ ಹೇಳಲಾಗಿರುವ ಕೇಂದ್ರದ ಅಧೀನದ ಆಸ್ಪತ್ರೆಗಳಲ್ಲಿ ಸೇನಾ ಮತ್ತು ಕೇಂದ್ರೀಯ ಸಶಸ್ತ್ರ ಪೊಲೀಸ್ ಪಡೆಗಳ (ಸಿಎಪಿಎಫ್) ಆಸ್ಪತ್ರೆಗಳೂ ಸೇರಿವೆಯೇ ಎಂಬ (thequint)ನ ಪ್ರಶ್ನೆಗೆ ಆರೋಗ್ಯ ಸಚಿವಾಲಯವು ಉತ್ತರಿಸಿಲ್ಲ. ಆದರೆ ಎಲ್ಲ 13,000 ವೆಂಟಿಲೇಟರ್ಗಳನ್ನು ಸೇನಾ ಮತ್ತು ಸಿಎಪಿಎಫ್ ಆಸ್ಪತ್ರೆಗಳಿಗೆ ವಿತರಿಸಿರಲು ಖಂಡಿತವಾಗಿಯೂ ಸಾಧ್ಯವಿಲ್ಲ.
ನಿಲೇಶ ಪ್ರಭು ಅವರು 2020 ಎಪ್ರಿಲ್ ನಿಂದ 2021 ಜೂನ್ ವರೆಗಿನ ದತ್ತಾಂಶಗಳನ್ನು ಕೋರಿದ್ದರಿಂದ ಆರೋಗ್ಯ ಸಚಿವಾಲಯವು ಸುಮಾರು 13,000 ವೆಂಟಿಲೇಟರ್ಗಳನ್ನು ಜೂನ್ನಲ್ಲಿಯೇ ಖರೀದಿಸಿರಬಹುದು ಮತ್ತು ಇದೇ ಕಾರಣದಿಂದ ಈ ವೆಂಟಿಲೇಟರ್ಗಳನ್ನು ಯಾವ ರಾಜ್ಯಗಳಿಗೆ ಪೂರೈಸಲಾಗಿದೆ ಎನ್ನುವುದನ್ನು ತಿಳಿಸಲು ಅದಕ್ಕೆ ಸಾಧ್ಯವಾಗಿರಲಿಕ್ಕಿಲ್ಲ ಎಂದು ಯಾರಾದರೂ ವಾದಿಸಬಹುದು. ಹೀಗಿದ್ದರೆ ಕೇಂದ್ರವು ಮೇ 2020ರಲ್ಲಿ ತಯಾರಕರಿಗೆ ವೆಂಟಿಲೇಟರ್ಗಳಿಗಾಗಿ ಬೇಡಿಕೆ ಸಲ್ಲಿಸಿದ್ದರೂ ಅವುಗಳನ್ನು ಸ್ವಾಧೀನಕ್ಕೆ ತೆಗೆದುಕೊಳ್ಳುವಲ್ಲಿ ವಿಳಂಬವಾಗಿದ್ದು ಏಕೆ ಎಂಬ ಇನ್ನೂ ಹೆಚ್ಚು ಗಂಭೀರವಾದ ಪ್ರಶ್ನೆ ಏಳುತ್ತದೆ.
2020 ಮೇ 1ರ ಸರಕಾರದ ಹೇಳಿಕೆಯಂತೆ 2020 ಜೂನ್ವರೆಗೆ 75,000 ವೆಂಟಿಲೇಟರ್ಗಳಿಗೆ ಬೇಡಿಕೆಯನ್ನು ಅದು ಅಂದಾಜಿಸಿತ್ತು ಮತ್ತು 60,884 ವೆಂಟಿಲೇಟರ್ಗಳಿಗೆ ಬೇಡಿಕೆಯನ್ನು ಸಲ್ಲಿಸಿತ್ತು. ಜೂನ್ ತಿಂಗಳಲ್ಲಿ ಈ ಬೇಡಿಕೆ ಇನ್ನಷ್ಟು ಹೆಚ್ಚಬಹುದು ಎನ್ನುವುದನ್ನು ಗಮನದಲ್ಲಿಟ್ಟುಕೊಂಡು ಕೇಂದ್ರವು ಮೇ 2020ರಲ್ಲಿ 60,000ಕ್ಕೂ ಅಧಿಕ ವೆಂಟಿಲೇಟರ್ಗಳಿಗೆ ಬೇಡಿಕೆಯನ್ನು ಸಲ್ಲಿಸಿತ್ತು. ಅಂದಾಜು ಬೇಡಿಕೆಯನ್ನು ಆಧರಿಸಿ ತಾಂತ್ರಿಕವಾಗಿ 2020 ಜೂನ್ ವೇಳೆಗೆ 60,000ಕ್ಕೂ ಅಧಿಕ ವೆಂಟಿಲೇಟರ್ಗಳು ಸರಕಾರಕ್ಕೆ ಪೂರೈಕೆಯಾಗಬೇಕಿತ್ತಾದರೂ ಆಗಿರಲಿಲ್ಲ.
ಆರೋಗ್ಯ ಸಚಿವಾಲಯವು ರಾಜ್ಯಸಭೆಯಲ್ಲಿ ನೀಡಿದ್ದ ಉತ್ತರದಂತೆ ಸೆಪ್ಟೆಂಬರ್ 2020ರವರೆಗೆ ಕೇಂದ್ರವು 32,863 ವೆಂಟಿಲೇಟರ್ಗಳನ್ನು ರಾಜ್ಯಗಳಿಗೆ ವಿತರಿಸಿದ್ದು, ಈ ಪೈಕಿ ಸುಮಾರು 20,000 ವೆಂಟಿಲೇಟರ್ಗಳು ಆಸ್ಪತ್ರೆಗಳಲ್ಲಿ ಸ್ಥಾಪನೆಗೊಂಡಿದ್ದವು. 2010,ಸೆ.15ರಿಂದ 2021 ಜೂ.1ರವರೆಗಿನ ಎಂಟು ತಿಂಗಳುಗಳಲ್ಲಿ ಸರಕಾರವು ಕೇವಲ 14,000 ವೆಂಟಿಲೇಟರ್ಗಳನ್ನು ವಿತರಿಸಿತ್ತು. 2020 ಮೇ ಮತ್ತು ಸೆಪ್ಟೆಂಬರ್ ನಡುವೆ 32,000ಕ್ಕೂ ಕೊಂಚ ಹೆಚ್ಚು ವೆಂಟಿಲೇಟರ್ಗಳನ್ನು ವಿತರಿಸಲಾಗಿತ್ತು.
2021 ಮೇ 6ರಂದು thequint.com ತನ್ನ ತನಿಖಾ ವರದಿಯಲ್ಲಿ ಹಣಪಾವತಿಯಾಗದ ಹಿನ್ನೆಲೆಯಲ್ಲಿ ಚೆನ್ನೈನ ಟ್ರಿವಿಟ್ರಾನ್ ಹೆಲ್ತ್ ಕೇರ್ ಸುಮಾರು 9,000 ವೆಂಟಿಲೇಟರ್ಗಳ ಪೂರೈಕೆಯನ್ನು ತಡೆಹಿಡಿದಿತ್ತು ಎನ್ನುವುದನ್ನು ಬಹಿರಂಗಗೊಳಿಸಿತ್ತು. ಇತರ ತಯಾರಕರು ಪೂರೈಕೆಯನ್ನು ವಿಳಂಬಿಸಿದ್ದರೇ ಮತ್ತು ಕೇಂದ್ರದಿಂದ ಹಣಪಾವತಿಯಾಗದ್ದು ಇದಕ್ಕೆ ಕಾರಣವಾಗಿತ್ತೇ ಎನ್ನುವುದು ಗೊತ್ತಾಗಿಲ್ಲ.
ಗಮನಾರ್ಹವೆಂದರೆ ಕೋವಿಡ್ ರೋಗಿಗಳ ಸಾವಿನ ಪ್ರಮಾಣ ಕಡಿಮೆಯಾಗುತ್ತಿದೆ ಎಂಬ ಕಾರಣ ನೀಡಿ ಕೇಂದ್ರವು 2020 ಆಗಸ್ಟ್ ನಲ್ಲಿ ವೆಂಟಿಲೇಟರ್ಗಳ ರಫ್ತಿಗೆ ಅನುಮತಿಯನ್ನು ನೀಡಿತ್ತು. ತಯಾರಕರು ಸರಕಾರದ ಬೇಡಿಕೆಯನ್ನು ಸಂಪೂರ್ಣವಾಗಿ ಪೂರೈಸಿದ ಬಳಿಕವೇ ರಫ್ತಿಗೆ ಅನುಮತಿ ನೀಡಬೇಕಿತ್ತು ಎನ್ನುತ್ತಾರೆ ತಜ್ಞರು.
ಮೂರನೇ ಅಲೆಗೆ ತಯಾರಾಗಿರಲು ವೆಂಟಲೇಟರ್ಗಳನ್ನು ಸ್ಥಾಪಿಸಲು ಮತ್ತು ನಿರ್ವಹಿಸಲು ನುರಿತ ಸಿಬ್ಬಂದಿಗಳನ್ನು ತಕ್ಷಣ ನಿಯೋಜಿಸಬೇಕು. ಈ ಉಪಕರಣಗಳನ್ನು ನಿರ್ವಹಿಸಲು ವೈದ್ಯರು ಮತ್ತು ಅರೆವೈದ್ಯಕೀಯ ಸಿಬ್ಬಂದಿಗಳಿಗೆ ತರಬೇತಿ ನೀಡುವುದು ನಮ್ಮ ಸಾಮರ್ಥ್ಯಕ್ಕೆ ದೊಡ್ಡ ಸವಾಲಾಗಲಿದೆ ಎನ್ನುತ್ತಾರೆ ರಾಜೀವನಾಥ್.
ಮೂರನೇ ಕೋವಿಡ್ ಅಲೆಯು ಸನ್ನಿಹಿತವಾಗಿದ್ದು, ಈ ವೆಂಟಿಲೇಟರ್ಗಳನ್ನು ಆಸ್ಪತ್ರೆಗಳಲ್ಲಿ ಸ್ಥಾಪಿಸಲು ಮತ್ತು ಸಿಬ್ಬಂದಿಗಳನ್ನು ತರಬೇತುಗೊಳಿಸಲು ಸಾಕಷ್ಟು ಸಮಯಾವಕಾಶ ದೊರೆಯುವಂತೆ ಅವುಗಳನ್ನು ಕೇಂದ್ರವು ಸಕಾಲದಲ್ಲಿ ವಿತರಿಸುತ್ತದೆಯೇ ಎನ್ನುವುದು ಈಗಿನ ದೊಡ್ಡ ಪ್ರಶ್ನೆಯಾಗಿದೆ.