ಕೇಂದ್ರ ಸಚಿವ ಹರ್ದೀಪ್ ಸಿಂಗ್ ಪುರಿ ನನ್ನ ಮೇಲೆ ದೈಹಿಕ ಹಲ್ಲೆಗೆ ಮುಂದಾಗಿದ್ದರು: ಸಂತನು ಸೇನ್ ಆರೋಪ

Update: 2021-07-22 16:05 GMT
photo: twitter

ಹೊಸದಿಲ್ಲಿ:ರಾಜ್ಯಸಭೆಯಲ್ಲಿ ಗುರುವಾರ ಭಾರೀ ಗದ್ದಲದ ಕಾರಣಕ್ಕೆ ಸದನವು ಮುಂದೂಡಲ್ಪಟ್ಟ ಬಳಿಕ ಕೇಂದ್ರ ಸಚಿವ ಹರ್ದೀಪ್ ಸಿಂಗ್ ಪುರಿ ಅವರು  ನನಗೆ ಬೆದರಿಕೆ ಹಾಕಿದ್ದಲ್ಲದೆ ಮೌಖಿಕವಾಗಿ ನಿಂದಿಸಿದ್ದಾರೆ. ಸಚಿವರು ನನ್ನ ಮೇಲೆ ದೈಹಿಕವಾಗಿ ಹಲ್ಲೆಗೂ ಮುಂದಾಗಿದ್ದು, ಆಗ ನನ್ನ ಸಹೋದ್ಯೋಗಿಗಳು ನನ್ನನ್ನು ರಕ್ಷಿಸಿದ್ದಾರೆ ಎಂದು ತೃಣಮೂಲ ಕಾಂಗ್ರೆಸ್ (ಟಿಎಂಸಿ) ಸಂಸದ ಸಂತನು ಸೇನ್ ಆರೋಪಿಸಿದ್ದಾರೆ ಎಂದು India Today ವರದಿ ಮಾಡಿದೆ.

"ಸದನವನ್ನು ಮುಂದೂಡಿದ ನಂತರ ನನ್ನನ್ನು ಹರ್ದೀಪ್ ಪುರಿ ಅವರು ತುಂಬಾ ಕೆಟ್ಟ ರೀತಿಯಲ್ಲಿ ಕರೆದರು. ಆದಾಗ್ಯೂ ನಾನು ಅವರ ಬಳಿಗೆ ಹೋಗಿದ್ದೆ.  ಆದರೆ ಅವರು  ನನಗೆ ಬೆದರಿಕೆ ಹಾಕಲು ಪ್ರಾರಂಭಿಸಿದರು. ನನ್ನನ್ನು ನಿಂದಿಸಿದರು. ನನ್ನ ಮೇಲೆ  ದೈಹಿಕವಾಗಿ ಹಲ್ಲೆ ಗೆ ಮುಂದಾಗಿದ್ದರು. ನಾನು ಬಹುತೇಕ ಘೇರಾವ್ ಆಗಿದ್ದೆ. ದೇವರ ದಯೆಯಿಂದ ನನ್ನ ಸಹೋದ್ಯೋಗಿಗಳು ಇದನ್ನು ಗಮನಿಸಿ ನನ್ನನ್ನು ರಕ್ಷಿಸಿದರು. ಇದು ಸಂಪೂರ್ಣವಾಗಿ ದುರದೃಷ್ಟಕರ"ಎಂದು ಸಂತನು ಸೇನ್ ಘಟನೆಯ ನಂತರ ಮಾಧ್ಯಮಗಳೊಂದಿಗೆ ಮಾತನಾಡುತ್ತಾ ಹೇಳಿದರು.

ಹರ್ದೀಪ್ ಸಿಂಗ್ ಪುರಿ ನನ್ನೊಂದಿಗೆ ಅಸಭ್ಯವಾಗಿ ವರ್ತಿಸಿದ್ದಾರೆ. ಪಕ್ಷವು ಈ ವಿಷಯದ ಬಗ್ಗೆ ಉಪ ಸಭಾಪತಿ ಹರಿವಂಶ್ ಅವರಿಗೆ ದೂರು ನೀಡಿತು ಎಂದು ಟಿಎಂಸಿ ಸಂಸದ ಸೇನ್ ಹೇಳಿದರು.

ಇದಕ್ಕೂ ಮೊದಲು  ಸಂತನು ಸೇನ್ ಅವರು ರಾಜ್ಯಸಭೆಯಲ್ಲಿ ವಿವಾದವನ್ನು ಸೃಷ್ಟಿಸಿದರು. ಪೆಗಾಸಸ್ ಸ್ನೂಪಿಂಗ್ ವಿವಾದದ ಬಗ್ಗೆ ಐಟಿ ಸಚಿವ ಅಶ್ವಿನಿ ವೈಷ್ಣವ್ ಅವರು ರಾಜ್ಯಸಭೆಯಲ್ಲಿ ಮಾತನಾಡುತ್ತಿದ್ದಾಗ ಅವರಿಗೆ ಅಡ್ಡಿಪಡಿಸಿದ್ದರು. ಸಚಿವರ ಕೈಯಲ್ಲಿದ್ದ ಕಾಗದಪತ್ರವೊಂದನ್ನು ಕಸಿದು ಹರಿದು ಬಿಸಾಡಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News