ಬಳಕೆದಾರರ ಡಾಟಾ ನಿರ್ವಹಣೆಗಾಗಿ ಟ್ವಿಟರ್‌ನ ಪರಿಷ್ಕೃತ ಗೌಪ್ಯತೆ ನೀತಿ ಆ.29ರಿಂದ ಜಾರಿ

Update: 2021-07-22 16:22 GMT

 ಹೊಸದಿಲ್ಲಿ, ಜು.22: ಕಳೆದ ಕೆಲವು ತಿಂಗಳುಗಳಲ್ಲಿ ಹಲವಾರು ಹೊಸ ವೈಶಿಷ್ಟಗಳು ಮತ್ತು ಸೇವೆಗಳನ್ನು ಪರಿಚಯಿಸಿರುವ ಟ್ವಿಟರ್ ಈಗ ಬಳಕೆದಾರರಿಗೆ ತನ್ನ ನೀತಿಗಳ ಅಪ್‌ಡೇಟ್‌ಗಳ ಬಗ್ಗೆ ಮಾಹಿತಿಗಳನ್ನು ಒದಗಿಸಲು ತನ್ನ ಸೇವಾ ನಿಬಂಧನೆಗಳು ಮತ್ತು ಗೌಪ್ಯತೆ ನೀತಿಯನ್ನು ಪರಿಷ್ಕರಿಸಿದೆ. ಟ್ವಿಟರ್ ತನ್ನ ಹೊಸ ಬ್ಲಾಗ್‌ನಲ್ಲಿ ತನ್ನ ಗೌಪ್ಯತೆ ನೀತಿಯ ಪರಿಷ್ಕರಣೆಯ ಬಗ್ಗೆ ಮಾಹಿತಿಯನ್ನು ನೀಡಿದೆ. ಬದಲಾವಣೆಗಳು ಟ್ವಿಟರ್ ಸ್ಪೇಸ್‌ಗಳು,ಟ್ವಿಟರ್ ಬ್ಲೂ,ಅದರ ಪಾವತಿಗಳು ಮತ್ತು ಇತರ ವೈಶಿಷ್ಟಗಳಿಗೆ ಸಂಬಂಧಿಸಿವೆ. ಅಪ್‌ಡೇಟ್ ಮಾಡಲಾದ ಸೇವಾ ನಿಬಂಧನೆಗಳು ಮತ್ತು ಗೌಪ್ಯತೆ ನೀತಿ 2021,ಆ.19ರಿಂದ ಜಾರಿಗೊಳ್ಳಲಿವೆ. ಗೌಪ್ಯತೆ ನೀತಿಗಳ ಅಪ್‌ಡೇಟ್ ಮುಖ್ಯವಾಗಿ ಟ್ವಿಟರ್ ಸ್ಪೇಸ್‌ಗಳಿಗೆ ಸಂಬಂಧಿಸಿದೆ. ಟ್ವಿಟರ್‌ನ ಸೋಷಿಯಲ್ ಆಡಿಯೊ ಸ್ಪೇಸ್ ತನ್ನ ಗ್ರಾಹಕರ ನಡುವೆ ಧ್ವನಿ ಆಧಾರಿತ ಸಂಭಾಷಣೆಗಳನ್ನು ಸಾಧ್ಯಗೊಳಿಸುತ್ತದೆ. ಕಂಪನಿಯು ಈಗ ತನ್ನ ನೀತಿಗಳಿಗೆ ಅನುಗುಣವಾಗಿ ಈ ಡಾಟಾವನ್ನು ತಾನು ಹೇಗೆ ಬಳಸುತ್ತೇನೆ ಎನ್ನುವುದನ್ನು ವಿವರಿಸಿದೆ.

ಸ್ಪೇಸ್‌ಗಳಲ್ಲಿ ನಡೆಯುತ್ತಿರುವ ಸಂಭಾಷಣೆಗಳ ಆಡಿಯೊ ಲಿಪ್ಯಂತರಗಳನ್ನು ಸಿದ್ಧಗೊಳಿಸಲಾಗುತ್ತದೆ ಮತ್ತು ಟ್ವಿಟರ್ ನಿಯಮಗಳ ಸಂಭಾವ್ಯ ಉಲ್ಲಂಘನೆಗಳನ್ನು ಪರಿಶೀಲಿಸಲು ಈ ಪಠ್ಯವನ್ನು ಪುನರ್‌ಪರಿಶೀಲಿಸಲಾಗುತ್ತದೆ. ಕಾರ್ಯವಿಧಾನದಲ್ಲಿ ಸುಧಾರಣೆಗಳನ್ನು ತರಲು ಕಂಪನಿಯು ಈ ಪಠ್ಯವನ್ನು ಸಹ ಬಳಸಿಕೊಳ್ಳುತ್ತದೆ ಎಂದು ಬ್ಲಾಗ್‌ನಲ್ಲಿ ತಿಳಿಸಲಾಗಿದೆ.

ಸ್ಪೇಸ್‌ಗಳಲ್ಲಿಯ ಎಲ್ಲ ಸಂಭಾಷಣೆಗಳು ಈಗ ಸಾರ್ವಜನಿಕವಾಗಿರುವುದರಿಂದ ಹೇಗಿದ್ದರೂ ಡಾಟಾ ಗೌಪ್ಯವಾಗಿ ಉಳಿದಿಲ್ಲ ಎಂದು ನೆನಪಿಸಿರುವ ಟ್ವಿಟರ್,ಹೀಗಾಗಿ ಆಡಿಯೊ ಲಿಪ್ಯಂತರಗಳು ಬಳಕೆದಾರರ ಗೌಪ್ಯತೆಯನ್ನು ಉಲ್ಲಂಘಿಸುತ್ತಿಲ್ಲ ಎಂದು ಹೇಳಿದೆ.

ನೀತಿಯಲ್ಲಿನ ಇನ್ನೊಂದು ಅಪ್‌ಡೇಟ್ ಸದ್ಯ ಕೆನಡಾ ಮತ್ತು ಆಸ್ಟ್ರೇಲಿಯಾಕ್ಕೆ ಸೀಮಿತವಾಗಿರುವ ಟ್ವಿಟರ್ ಬ್ಲೂಗೆ ಸಂಬಂಧಿಸಿದೆ.

ಕಂಪನಿಯು ತನ್ನ ಹೊಸ ಆಟೋಪ್ಲೇ ಫೀಚರ್ ಬಗ್ಗೆಯೂ ಮಾಹಿತಿ ನೀಡಿದೆ. ಇತರ ಸಾಮಾಜಿಕ ಮಾಧ್ಯಮಗಳ ಮೂಲಕ ಹೆಚ್ಚಿನವರಿಗೆ ಈ ಬಗ್ಗೆ ಗೊತ್ತಿದೆಯಾದರೂ ಅಂತರ್ಗತವಾಗಿರುವ ಕೆಲವು ನೀತಿಗಳು ಸರಿಯಾಗಿ ತಿಳಿದಿಲ್ಲ.

ಬಳಕೆದಾರರ ಫೀಡ್‌ನಲ್ಲಿ ಸ್ವಯಂ ಆಗಿ ಪ್ರದರ್ಶನಗೊಳ್ಳುವ ವೀಡಿಯೊಗಳು ಹೆಚ್ಚಿನ ಸಂದರ್ಭಗಳಲ್ಲಿ ತನ್ನ ಥರ್ಡ್ ಪಾರ್ಟಿ ಪಾಲುದಾರರಿಂದ ತಯಾರಾಗಿರುತ್ತವೆ ಎಂದು ವಿವರಿಸಿರುವ ಟ್ವಿಟರ್,ಬಳಕೆದಾರರು ಈ ಪಾಲುದಾರರಿಂದ ಇಂತಹ ವೀಡಿಯೊಗಳನ್ನು ವೀಕ್ಷಿಸಿದಾಗ ಅಥವಾ ಸಂವಾದಿಸಿದಾಗ ಅವು ತಮ್ಮ ಗೌಪ್ಯತೆ ನೀತಿಯಲ್ಲಿ ವಿವರಿಸಿರುವಂತೆ ಕೆಲವು ಡಾಟಾವನ್ನು ಸ್ವೀಕರಿಸಿ ಸಂಸ್ಕರಿಸಬಹುದು. ಇದನ್ನು ತಪ್ಪಿಸಲು ಬಯಸುವ ಬಳಕೆದಾರರು ತಮ್ಮ ಟ್ವಿಟರ್ ಸೆಟಿಂಗ್ ಮೂಲಕ ಈ ವೈಶಿಷ್ಟವನ್ನು ಸ್ಥಗಿತಗೊಳಿಸಬಹುದು ಎಂದು ತಿಳಿಸಿದೆ.

ಬಳಕೆದಾರರ ವೈಯಕ್ತಿಕ ಮಾಹಿತಿಗಳನ್ನು ತಾನು ಯಾರಿಗೂ ಮಾರಾಟ ಮಾಡುವುದಿಲ್ಲ ಎಂದು ಮತ್ತೊಮ್ಮೆ ಸ್ಪಷ್ಟಪಡಿಸಿರುವ ಟ್ವಿಟರ್,ಬಳಕೆದಾರರ ಡಾಟಾ ಹೊರದೇಶಕ್ಕೆ ವರ್ಗಾವಣೆಗೊಂಡಾಗ ಅದು ಹೇಗೆ ರಕ್ಷಿಸಲ್ಪಡುತ್ತದೆ ಎನ್ನುವುದನ್ನು ನೂತನ ಗೌಪ್ಯತೆ ನೀತಿಯಲ್ಲಿ ಸೂಚಿಸಿದೆ. ಬಳಕೆದಾರರು ಈ ಅಪ್‌ಡೇಟ್‌ಗಳ ಬಗ್ಗೆ ಶೀಘ್ರವೇ ಇನ್-ಆ್ಯಪ್ ನೋಟಿಸ್‌ನ್ನು ನೋಡುವ ಸಾಧ್ಯತೆಯಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News