ಪ್ರತಿಭಟನೆ ನಡೆಸುವವರು ರೈತರಲ್ಲ, ಗೂಂಡಾಗಳು ಎಂದ ಕೇಂದ್ರ ಸಚಿವೆ ಮೀನಾಕ್ಷಿ ಲೇಖಿ

Update: 2021-07-22 18:10 GMT
photo: ANI

ಹೊಸದಿಲ್ಲಿ: ದಿಲ್ಲಿಯಲ್ಲಿ  ಪ್ರತಿಭಟನೆ ನಡೆಸುವವರು ರೈತರಲ್ಲ, ಅವರು ಗೂಂಡಾಗಳು ಎಂದು ಭಾರತೀಯ ಜನತಾ ಪಕ್ಷದ (ಬಿಜೆಪಿ) ಸಂಸದೆ ಹಾಗೂ ಕೇಂದ್ರ ಸಚಿವೆ ಮೀನಾಕ್ಷಿ ಲೇಖಿ ಗುರುವಾರ ಪತ್ರಿಕಾಗೋಷ್ಠಿಯಲ್ಲಿ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.

"ಅವರನ್ನು ರೈತರು ಎಂದು ಕರೆಯಬೇಡಿ, ಅವರು ಗೂಂಡಾಗಳು. ಜನವರಿ 26 ರಂದು ಏನಾಯಿತು ಎಂದು ದೇಶಕ್ಕೆ ತಿಳಿದಿದೆ" ಎಂದು ದಿಲ್ಲಿ  ಕ್ಷೇತ್ರದ ಬಿಜೆಪಿ ಸಂಸದೆ ಮೀನಾಕ್ಷಿ ಹೇಳಿದರು.

"ಇವು ಕ್ರಿಮಿನಲ್ ಕೃತ್ಯಗಳು. ಜನವರಿ 26 ರಂದು ನಡೆದದ್ದು ನಾಚಿಕೆಗೇಡಿನ ಅಪರಾಧಿಗಳ ಚಟುವಟಿಕೆಗಳು. ಪ್ರತಿಪಕ್ಷಗಳು ಇಂತಹ ಚಟುವಟಿಕೆಗಳನ್ನು ಉತ್ತೇಜಿಸಿದ್ದವು" ಎಂದು ಮೀನಾಕ್ಷಿ ಲೇಖಿ ಆರೋಪಿಸಿದರು.

ಪ್ರತಿಭಟನಾ ನಿರತ ರೈತರ ವಿರುದ್ಧದ ಟೀಕೆಗಳಿಗೆ ತೃಣಮೂಲ ಕಾಂಗ್ರೆಸ್ ಸಂಸದ ಡೆರೆಕ್ ಒ 'ಬ್ರಿಯಾನ್  ಅವರು ಮೀನಾಕ್ಷಿ ವಿರುದ್ಧ ವಾಗ್ದಾಳಿ ನಡೆಸಿದರು.

“ನೀವು ಬಿಜೆಪಿ ಪತ್ರಿಕಾಗೋಷ್ಠಿಯಲ್ಲಿ ಏನು ಬೇಕಾದರೂ ಹೇಳಬಹುದು. ಜನರು ಮತ ಚಲಾಯಿಸಿದಾಗ ನಿಮ್ಮನ್ನು ಕೆಳಕ್ಕೆ ಇಳಿಸುತ್ತಾರೆ’’ ಎಂದರು.

ದಿಲ್ಲಿ ಗಡಿಯಲ್ಲಿ ತಿಂಗಳುಗಟ್ಟಲೆ ಬೀಡುಬಿಟ್ಟಿರುವ ಪ್ರತಿಭಟನಾನಿರತ ರೈತರು ಗುರುವಾರ ದಿಲ್ಲಿಯ ಜಂತರ್ ಮಂತರ್ ತಲುಪಿದ್ದು ಕೃಷಿ ಕಾನೂನುಗಳ ವಿರುದ್ಧ ತಮ್ಮ ಆಂದೋಲನವನ್ನು ಇನ್ನಷ್ಟು ತೀವ್ರಗೊಳಿಸಿದ್ದಾರೆ.

ಸಿಂಘು  ಗಡಿಯಿಂದ 200ರಷ್ಟಿದ್ದ ರೈತರ ಗುಂಪು ಪೊಲೀಸ್ ಬೆಂಗಾವಲಿನೊಂದಿಗೆ ಬಸ್‌ಗಳಲ್ಲಿ ಬಂದಿತು.

ಮೀನಾಕ್ಷಿ ಲೇಖಿ ಸ್ಪಷ್ಟನೆ:  ತನ್ನ ಹೇಳಿಕೆಯನ್ನು ತಪ್ಪಾಗಿ ಅರ್ಥೈಸಲಾಗಿದೆ. ನನ್ನ ಹೇಳಿಕೆ ಯಾರಿಗಾದರೂ ನೋವುಂಟು ಮಾಡಿದ್ದರೆ ನನ್ನ ಮಾತನ್ನು ಹಿಂದಕ್ಕೆ ಪಡೆಯುವೆ. ಜನವರಿ 26ರಂದು ನಡೆದ ಕೆಂಪುಕೋಟೆ ಹಿಂಸಾಚಾರ ಹಾಗೂ ಇಂದು ರೈತರ ಸಂಸತ್ ನಲ್ಲಿ ಮಾಧ್ಯಮದವರ ಮೇಲೆ ದಾಳಿ ನಡೆಸಿದ ಘಟನೆಗೆ ಸಂಬಂಧಿಸಿ ಕೇಳಿದ ಪ್ರಶ್ನೆಗೆ ನಾನು ಉತ್ತರಿಸಿದ್ದೆ. ಇಂತಹ ಕೆಲಸವನ್ನು ಗೂಂಡಾಗಳು ಮಾಡುತ್ತಾರೆಯೇ ಹೊರತು ರೈತರಲ್ಲ ಎಂದು ಹೇಳಿರುವುದಾಗಿ ಇತ್ತೀಚೆಗಷ್ಟೇ ನಡೆದ ಕೇಂದ್ರ ಸಂಪುಟ ವಿಸ್ತರಣೆ ವೇಳೆ ವಿದೇಶಾಂಗ ವ್ಯವಹಾರ ಹಾಗೂ ಸಂಸ್ಕೃತಿ ಇಲಾಖೆಯ ರಾಜ್ಯ ಸಚಿವೆಯಾಗಿ ಸೇರಿರುವ ಮೀನಾಕ್ಷಿ ಲೇಖಿ ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News