ಮೌನ ಜಾಥಾ ನಡೆಸಿದ ಉ.ಪ್ರ. ಕಾಂಗ್ರೆಸ್ ವರಿಷ್ಠ, ನಾಯಕರು ವಶಕ್ಕೆ

Update: 2021-07-22 18:16 GMT

ಲಕ್ನೋ, ಜು. 22: ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರ ಮೇಲೆ ಬೇಹುಗಾರಿಕೆ ನಡೆಸಲಾಗಿದೆ ಎಂಬ ಕುರಿತು ಮೌನ ಜಾಥಾ ನಡೆಸಲು ಪ್ರಯತ್ನಿಸಿದ ಉತ್ತರಪ್ರದೇಶ ಕಾಂಗ್ರೆಸ್ ಅಧ್ಯಕ್ಷ ಅಜಯ್ ಕುಮಾರ್ ಲಲ್ಲು ಹಾಗೂ ಪಕ್ಷದ ಇತರ ನಾಯಕರನ್ನು ಪೊಲೀಸರು ವಶಕ್ಕೆ ತೆಗೆದುಕೊಂಡಿದ್ದಾರೆ.

 ರಾಹುಲ್ ಗಾಂಧಿ ಅವರ ಮೇಲೆ ಬೇಹುಗಾರಿಕೆ ನಡೆಸಲಾಗಿದೆ ಎಂಬ ಕುರಿತು ಇಲ್ಲಿನ ಸ್ವಾಸ್ಥ ಭವನದಿಂದ ರಾಜಭವನದ ವರೆಗೆ ಮೌನ ಜಾಥಾ ನಡೆಸಲಾಗುವುದು ಹಾಗೂ ಮನವಿ ಸಲ್ಲಿಸಲಾಗುವುದು ಎಂದು ಲಲ್ಲು ಅವರು ಕರೆ ನೀಡಿದ್ದರು. ಬುಧವಾರ ರಾತ್ರಿ ಲಲ್ಲು ಹಾಗೂ ಇತರ ನಾಯಕರನ್ನು ಪೊಲೀಸರು ಗೃಹಬಂಧನದಲ್ಲಿ ಇರಿಸಿದ್ದರು ಎಂದು ಪಕ್ಷದ ವಕ್ತಾರ ಅಶೋಕ್ ಸಿಂಗ್ ತಿಳಿಸಿದ್ದಾರೆ. ಲಲ್ಲು ಅವರು ಗುರುವಾರ ಬೆಳಗ್ಗೆ ತನ್ನ ನಿವಾಸದಿಂದ ಹೊರಗೆ ಬಂದಿದ್ದಾರೆ. ಅವರು ಸ್ವಾಸ್ಥ ಭವನಕ್ಕೆ ತೆರಳುವ ಸೂಚನೆ ಅರಿತು ಪೊಲೀಸರು ದುರ್ವರ್ತನೆ ತೋರಿದ್ದಾರೆ. ಮೌನ ಜಾಥಾ ನಡೆಸಲು ನಿಮಗೆ ಅನುಮತಿ ನೀಡಿಲ್ಲ ಎಂದು ತಡೆದಿದ್ದಾರೆ ಎಂದು ಸಿಂಗ್ ತಿಳಿಸಿದ್ದಾರೆ. ಕಾಂಗ್ರೆಸ್ ನಾಯಕರು ಘೋಷಣೆಗಳನ್ನು ಕೂಗುತ್ತಾ ಮೌನ ಜಾಥ ನಡೆಸುವ ಸೂಚನೆ ನೀಡಿದಾಗ ಯುಪಿಸಿಸಿ ಅಧ್ಯಕ್ಷ ಹಾಗೂ ಇತರ ನಾಯಕರನ್ನು ಪೊಲೀಸರು ಬಂಧಿಸಿದರು ಎಂದು ಅವರು ತಿಳಿಸಿದ್ದಾರೆ.

ಬುಧವಾರ ರಾತ್ರಿಯಿಂದ ಗೃಹ ಬಂಧನದಲ್ಲಿ ಇರಿಸಲಾಗಿದ್ದ ನಾಯಕರಲ್ಲಿ ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕ ಆರಾಧನಾ ಮಿಶ್ರಾ ಮೋನಾ, ಹಿರಿಯ ನಾಯಕ ನಸೀಮುದ್ದೀನ್ ಸಿದ್ದೀಕ್, ದೀಪಕ್ ಮಿಶ್ರಾ ಹಾಗೂ ಇತರರು ಸೇರಿದ್ದಾರೆ ಎಂದು ಸಿಂಗ್ ತಿಳಿಸಿದ್ದಾರೆ. ಸರಕಾರ ಖಾಸಗಿ ಹಕ್ಕಿಗೆ ಗೌರವ ನೀಡುತ್ತಿಲ್ಲ. ವ್ಯಕ್ತಿಯ ಸ್ವಾತಂತ್ರದ ಮೇಲೆ ದಾಳಿ ಮಾಡುವುದನ್ನು ಸಮರ್ಥಿಸಿಕೊಳ್ಳಲು ಸಾಧ್ಯವಿಲ್ಲ ಎಂದು ಸಿಂಗ್ ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News