"ಊಟಕ್ಕಾಗಿ ಪ್ರತ್ಯೇಕ ತಟ್ಟೆ, ಲೋಟ": ಕ್ರಿಕೆಟ್‌ ನಲ್ಲಿ ಮಿಂಚಿದ್ದ ಮೊತ್ತಮೊದಲ ದಲಿತ ಕ್ರಿಕೆಟಿಗ ಪಲ್ವಂಖರ್‌ ಬಾಲು

Update: 2021-07-23 12:32 GMT
Photo: Thebetterindia

ಚೆನ್ನೈ: ಹಲವು ವರ್ಷಗಳ ಹಿಂದೆ ಕ್ರಿಕೆಟ್ ಕ್ಷೇತ್ರದಲ್ಲಿ ಮಿಂಚಿದ್ದ ಭಾರತದ ಪ್ರಥಮ ದಲಿತ ಕ್ರಿಕೆಟಿಗ ಪಲ್ವಂಕರ್ ಬಾಲೂ ಅವರ ಬಗ್ಗೆ ಹೆಚ್ಚಿನವರಿಗೆ ತಿಳಿದಿಲ್ಲ. ಇಲ್ಲಿದೆ ಅವರ ಸಂಕ್ಷಿಪ್ತ ಪರಿಚಯ.

19ನೇ ಶತಮಾನದಲ್ಲಿ ಭಾರತದಲ್ಲಿ  ಜಾತಿ ಆಧರಿತ ತಾರತಮ್ಯ ವ್ಯಾಪಕವಾಗಿದ್ದಂತಹ ಸಂದರ್ಭದಲ್ಲಿ 1892ರಲ್ಲಿ ಪಲ್ವಂಖರ್ ಬಾಲೂ ಪೂನಾ ಕ್ಲಬ್ ನಲ್ಲಿ ತಿಂಗಳಿಗೆ ರೂ 4 ವೇತನಕ್ಕೆ ಕೆಲಸಕ್ಕೆ ಸೇರಿಕೊಂಡಿದ್ದರು. ಆಗ ಆ ಕ್ಲಬ್‍ನಲ್ಲಿ ಕೇವಲ ಬ್ರಿಟಿಷ್ ಕ್ರಿಕೆಟಿಗರು ಆಡುತ್ತಿದ್ದರು. ಬಾಲೂಗೆ ಪಿಚ್ ಮತ್ತು ನೆಟ್ ಅನ್ನು ಅಭ್ಯಾಸಕ್ಕಾಗಿ ಸಿದ್ಧಪಡಿಸಿ ನಿರ್ವಹಿಸುವ ಜವಾಬ್ದಾರಿ ನೀಡಲಾಗಿತ್ತು. ಆತ ತನ್ನ ಕೆಲಸವನ್ನು ನಿರ್ವಹಿಸುತ್ತಿರುವಾಗ ಆತನಲ್ಲಿದ್ದ ಕ್ರಿಕೆಟ್ ಪ್ರತಿಭೆಯನ್ನು ಬ್ರಿಟಿಷರು ಗಮನಿಸಿದ್ದರು.

ಆ ಕ್ಲಬ್‍ನಲ್ಲಿ ಬ್ಯಾಟಿಂಗ್ ಕೇವಲ ಬ್ರಿಟಿಷರಿಗೆ ಮೀಸಲಾಗಿದ್ದರಿಂದ ಬಾಲೂಗೆ ಬೌಲಿಂಗ್ ಮಾಡುವ ಅವಕಾಶ ದೊರಕಿತು. ಆತ ಒಬ್ಬ ಉತ್ತಮ ಬೌಲರ್ ಆಗಿದ್ದ ಹಾಗೂ ಪೂನಾ ಕ್ಲಬ್‍ನಲ್ಲಿ ಗಂಟೆಗಟ್ಟಲೆ ಅಭ್ಯಾಸ ಮಾಡಿ ಸ್ಪಿನ್ ತಂತ್ರಗಾರಿಕೆ ಕಲಿತಿದ್ದ.

ಬ್ರಿಟಿಷರ ಆಡಳಿತದ ವೇಳೆ ವಿವಿಧ ಧರ್ಮಗಳು ತಮ್ಮದೇ ಆದ ಕ್ರಿಕೆಟ್ ಕ್ಲಬ್‍ಗಳನ್ನು ಹೊಂದಿದ್ದವು. ಪುಣೆಯಲ್ಲಿದ್ದ ಹಿಂದುಗಳ ಕ್ರಿಕೆಟ್ ಕ್ಲಬ್‍ಗೆ ಯುರೋಪಿಯನ್ ಕ್ಲಬ್ ಅನ್ನು ಸೋಲಿಸಲು ಬಾಲೂ ಅಗತ್ಯವಿತ್ತು. ಆದರೆ  ಆತನೊಬ್ಬ ದಲಿತನಾಗಿದ್ದುದರಿಂದ ಆತನನ್ನು ತಂಡಕ್ಕೆ ಸೇರಿಸಬೇಕೇ ಅಥವಾ ಬೇಡವೇ ಎಂಬ ಕುರಿತು ಗೊಂದಲವಿತ್ತು. ಕೊನೆಗೂ ಆತನ ಪ್ರತಿಭೆಯನ್ನು ಗಮನಿಸಿ ಆತನಿಗೆ ಅವಕಾಶ ನೀಡಲಾಯಿತು. ಉತ್ತಮ ಬೌಲಿಂಗ್‍ನಿಂದಲೇ  ಈ ಕ್ಲಬ್ ಮುಂದೆ ಪಂದ್ಯಗಳನ್ನು ಗೆದ್ದಿತ್ತು.

ಮೈದಾನದಲ್ಲಿ ಎಲ್ಲರೂ ಒಟ್ಟಿಗೆ ಆಡುತ್ತಿದ್ದರೂ ನಂತರ ಬಾಲೂಗೆ ಊಟಕ್ಕಾಗಿ ಪ್ರತ್ಯೇಕ ತಟ್ಟೆ ಹಾಗೂ ಚಹಕ್ಕಾಗಿ ಪ್ರತ್ಯೇಕ ಕಪ್ ಇರುತ್ತಿತ್ತು. ಆಗ ಪ್ಲೇಗ್ ಮಹಾಮಾರಿ ಭೀತಿ ಇದ್ದುದರಿಂದ ಉತ್ತಮ ಅವಕಾಶ ಅರಸಿ ಬಾಲೂ ಪುಣೆ ಬಿಟ್ಟು ಮುಂಬೈಗೆ ತೆರಳಿದ ನಂತರ ಅಲ್ಲಿನ ಹಿಂದು ಜಿಮ್ಖಾನ ತಂಡದಲ್ಲಿ ಆತ ಆಯ್ಕೆಯಾದ. 1906ರಲ್ಲಿ ಆತನ ಉತ್ತಮ ಬೌಲಿಂಗ್ ನಿಂದಾಗಿ ಆತನ ಹಿಂದು ತಂಡ ಬ್ರಿಟಿಷ್ ತಂಡವನ್ನು ಸೋಲಿಸಿತ್ತು.

ಮುಂದೆ ಭಾರತ ತಂಡ 1911ರಲ್ಲಿ ಮೊದಲ ಬಾರಿ ಇಂಗ್ಲೆಂಡ್ ಪ್ರವಾಸಕ್ಕೆ ತೆರಳಿದಾಗ ಬಾಲೂ ಕೂಡ ತಂಡದ ಭಾಗವಾಗಿದ್ದರು.  ತಂಡ ಸೋತರೂ ಬಾಲೂ ನಿರ್ವಹಣೆ ಅತ್ಯುತ್ತಮವಾಗಿತ್ತು.

ಇಂಗ್ಲೆಂಡ್‍ನ ಹಲವಾರು ಕೌಂಟಿ ತಂಡಗಳು ಬಾಲೂಗೆ ಆಹ್ವಾನ ನೀಡಿದ್ದವು. ಆದರೆ ತಾನು ಕೇವಲ ಭಾರತಕ್ಕೆ ಆಡುವುದಾಗಿ ಆತ ಹೇಳಿದ್ದರು. ಲೋಕಮಾನ್ಯ ತಿಲಕ್ ಹಾಗೂ ಬಾಬಾ ಸಾಹೇಬ್ ಅಂಬೇಡ್ಕರ್ ಕೂಡ ಬಾಲು ಪ್ರತಿಭೆಯನ್ನು ಶ್ಲಾಘಿಸಿದ್ದರು. ಆದರೆ ಪ್ರತಿಭೆಯ ಹೊರತಾಗಿ ಆತ ದಲಿತನೆಂಬ ಕಾರಣಕ್ಕೆ ತಂಡವನ್ನು ಮುನ್ನಡೆಸುವ ಅವಕಾಶ ದೊರಕಿರಲಿಲ್ಲ. ಆದರೂ ದೇಶಕ್ಕಾಗಿ ಆಡಿದ ಮೊದಲ ದಲಿತ ಕ್ರಿಕೆಟಿಗನೆಂದು  ಬಾಲು ಈಗಲೂ ಸ್ಮರಣಾರ್ಹರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News