ದೇಶದಲ್ಲಿ 1000ದಲ್ಲಿ 116 ಜನರಿಗೆ ಸಾಂಕ್ರಾಮಿಕವಲ್ಲದ ರೋಗ: ವರದಿ

Update: 2021-07-23 18:27 GMT

ಹೊಸದಿಲ್ಲಿ, ಜು. 23: ದೇಶದಲ್ಲಿ 1000ದಲ್ಲಿ 116 ಜನರು ಸಾಂಕ್ರಾಮಿಕವಲ್ಲದ ರೋಗದಿಂದ ಬಳಲುತ್ತಿದ್ದಾರೆ ಎಂದು ಅಸೊಚಾಮ್ನ ಸಮೀಕ್ಷಾ ವರದಿ ಶುಕ್ರವಾರ ಬಹಿರಂಗಪಡಿಸಿದೆ. ಭಾರತದಲ್ಲಿ ಸಾಂಕ್ರಾಮಿಕವಲ್ಲದ ರೋಗದಿಂದ ಬಳಲುತ್ತಿರುವವರಲ್ಲಿ ಮೂರನೇ ಎರಡು ಭಾಗಕ್ಕಿಂತ ಹೆಚ್ಚು ಜನರು ಅತ್ಯಧಿಕ ಉತ್ಪಾದಕತಾ ವಯೋಗುಂಪಾದ 26ರಿಂದ 59 ಪ್ರಾಯ ಗುಂಪಿನವರು ಎಂದು ಕೂಡ ವರದಿ ತಿಳಿಸಿದೆ.

ದೇಶದ ಜನಸಂಖ್ಯೆಯಲ್ಲಿ 35 ವರ್ಷಕ್ಕಿಂತ ಕೆಳಗಿನ ಪ್ರಾಯದ ಶೇ. 65 ಜನರು ಸಾಕ್ರಾಮಿಕವಲ್ಲದ ರೋಗಕ್ಕೆ ದೀರ್ಘಕಾಲ ತುತ್ತಾಗುತ್ತಿರುವುದು ಕಳವಳಕಾರಿ ವಿಚಾರ ಎಂದು ಅದು ಹೇಳಿದೆ. ಸಾಕ್ರಾಮಿಕವಲ್ಲದ ರೋಗಗಳು ವ್ಯಕ್ತಿಗಳಲ್ಲಿ 18 ವರ್ಷಗಳ ಬಳಿಕ ಹೆಚ್ಚುತ್ತಿವೆ. 35 ವರ್ಷದ ಬಳಿಕ ದೊಡ್ಡ ಪ್ರಮಾಣದಲ್ಲಿ ಏರಿಕೆಯಾಗುತ್ತದೆ ಎಂದು ಅದು ತಿಳಿಸಿದೆ. ಸಾಂಕ್ರಾಮಿಕವಲ್ಲದ ರೋಗಗಳಲ್ಲಿ ಮೊದಲ ಸ್ಥಾನಗಳಲ್ಲಿ ಜೀರ್ಣಕ್ಕೆ ಸಂಬಂಧಿಸಿದ ರೋಗ, ಸಕ್ಕರೆ ಕಾಯಿಲೆ ಹಾಗೂ ಹೈಪರ್ಟೆನ್ಸ್ನ್ ಅನ್ನು ಗುರುತಿಸಲಾಗಿದೆ.

ಅನಂತರ ಸ್ಥಾನಗಳಲ್ಲಿ ಶ್ವಾಸಕೋಶದ ರೋಗಗಳು, ಮೆದುಳು/ನರರೋಗ, ಹೃದ್ರೋಗ/ಸಿವಿಡಿ, ಮೂತ್ರಕೋಶ ಸಮಸ್ಯೆ ಹಾಗೂ ಕ್ಯಾನ್ಸರ್ ಅನ್ನು ಗುರುತಿಸಲಾಗಿದೆ. ಸಕ್ಕರೆ ಕಾಯಿಲೆ ಹಾಗೂ ಹೈಪರ್ಟೆನ್ಸನ್ 50 ವರ್ಷ ಹಾಗೂ ಅದಕ್ಕಿಂತ ಮೇಲ್ಪಟ್ಟ ವಯೋಮಾನದವರಲ್ಲಿ ಹೆಚ್ಚು ಕಂಡು ಬಂದಿದೆ. ಮೆದುಳು/ನರರೋಗಕ್ಕೆ ಸಂಬಂಧಿಸಿ ಸಮಸ್ಯೆಗಳು 35 ವರ್ಷ ಹಾಗೂ ಅದಕ್ಕಿಂತ ಕೆಳಗಿನ ವಯೋಮಾನದವರಲ್ಲಿ ಕಂಡು ಬಂದಿದೆ. ಭಾರತದಲ್ಲಿ ಸಾಂಕ್ರಾಮಿಕವಲ್ಲದ ರೋಗಗಳ ಪ್ರಾಥಮಿಕ ಆರೋಗ್ಯ ಸೇವೆ ಸಮೀಕ್ಷೆಯ ವರದಿ ರಾಜ್ಯದ 2,33,672 ಜನರು ಹಾಗೂ 673 ಸಾರ್ವಜನಿಕ ಆರೋಗ್ಯ ಕಚೇರಿಗಳನ್ನು ಒಳಗೊಂಡಿದೆ. ಅಲ್ಲದೆ ಈ ವರದಿಯನ್ನು ‘ಥಾಟ್ ಆರ್ಬಿಟ್ರೇಜ್ ರಿಸರ್ಚ್ ಇನ್ಸ್ಟಿಟ್ಯೂಟ್’ ಸಿದ್ಧಪಡಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News