×
Ad

100ಕ್ಕೂ ಹೆಚ್ಚು ಮಸೀದಿ ನಿರ್ಮಿಸಿದ ಮಾಜಿ ಕರಸೇವಕ ಅಮೀರ್‌ ನಿಗೂಢ ಮೃತ್ಯು: ಪೊಲೀಸರು ಹೇಳಿದ್ದೇನು?

Update: 2021-07-24 11:19 IST
Photo: Mumbai mirror

ಹೈದರಾಬಾದ್:‌ ಬಾಬರಿ ಮಸೀದಿಯನ್ನು ಧ್ವಂಸಗೈದ ಕರಸೇವಕರಲ್ಲೊಬ್ಬನಾಗಿದ್ದ ಬಲ್ಬೀರ್‌ ಸಿಂಗ್‌ ಎಂಬಾತ ಬಳಿಕ ಉಂಟಾದ ಪಶ್ಚಾತ್ತಾಪದಿಂದ ಇಸ್ಲಾಂ ಧರ್ಮ ಸ್ವೀಕರಿಸಿ ನೂರಕ್ಕೂ ಹೆಚ್ಚು ಮಸೀದಿಗಳನ್ನು ನಿರ್ಮಿಸಿದ್ದರು ಹಾಗೂ ನವೀಕರಣಗೈದಿದ್ದರು. ಮುಹಮ್ಮದ್‌ ಅಮೀರ್‌ ಎಂದು ತಮ್ಮ ಹೆಸರು ಬದಲಾಯಿಸಿದ್ದ ಅವರು ಹೈದರಾಬಾದ್‌ ನ ಹಾಫಿಝ್‌ ಬಾಬಾ ನಗರ ಪ್ರದೇಶದ ತಮ್ಮ ಮನೆಯಲ್ಲಿ ನಿಗೂಢವಾಗಿ ಮೃತಪಟ್ಟ ರೀತಿಯಲ್ಲಿ ಪತ್ತೆಯಾಗಿದ್ದಾರೆ.

ಅವರ ಬಾಡಿಗೆ ಮನೆಯೊಳಗಿನಿಂದ ಕೊಳೆತ ವಾಸನೆ ಬರುತ್ತಿರುವುದನ್ನು ಗಮನಿಸಿದ ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿದ್ದರು. ಬಳಿಕ ಸ್ಥಳಕ್ಕೆ ಆಗಮಿಸಿದ ಪೊಲೀಸರು ಅಲ್ಲಿನ ಸ್ಥಳೀಯರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ ಎಂದು ತಿಳಿದು ಬಂದಿದೆ.

ಬಳಿಕ ಈ ಕುರಿತು ಮಾತನಾಡಿದ ಪೊಲೀಸರು, "ಇವರ ಸಾವಿಗೆ ಸಮರ್ಪಕ ಕಾರಣವನ್ನು ಈಗ ಹೇಳಲು ಸಾಧ್ಯವಿಲ್ಲ. ಅವರ ಕುಟುಂಬಸ್ಥರಿಂದ ಈ ಮರಣದಲ್ಲಿ ಸಂಶಯವಿದೆ ಎಂಬ ದೂರನ್ನು ನಾವು ಸ್ವೀಕರಿಸಿದರೆ ಬಳಿಕ ಈ ಕುರಿತು ಕೂಲಂಕಷ ತನಿಖೆ ನಡೆಸಬಹುದಾಗಿದೆ. ದೇಹವನ್ನು ಪೋಸ್ಟ್‌ ಮಾರ್ಟಮ್‌ ನಡೆಸಿದ ಬಳಿಕ ಪ್ರಕರಣ ದಾಖಲು ಮಾಡಬಹುದಾಗಿದೆ" ಎಂದು ಕಾಂಚನಭಾಗ್‌ ಪೊಲೀಸ್‌ ಠಾಣೆಯ ಇನ್‌ ಸ್ಪೆಕ್ಟರ್‌ ವೆಂಕಟ್‌ ರೆಡ್ಡಿ ತಿಳಿಸಿದ್ದಾರೆ.

ಮುಹಮ್ಮದ್‌ ಅಮೀರ್‌ ಹಾಫಿಝ್‌ ಬಾಬಾ ನಗರದ ಸಿ ಬ್ಲಾಕ್ ನಲ್ಲಿನ ಬಾಡಿಗೆ ಮನೆಯೊಂದರಲ್ಲಿ ವಾಸವಾಗಿದ್ದರು. ಅವರು ೧೯೯೨ರ ಬಾಬರಿ ಮಸೀದಿ ಧ್ವಂಸ ಕಾರ್ಯದಲ್ಲಿ ಭಾಗಿಯಾಗಿದ್ದರು ಮತ್ತು ಅವರು ಹಿಂತಿರುಗಿದ ವೇಳೆ ಅವರ ಊರಿನಲ್ಲಿ ಬೃಹತ್‌ ಸ್ವಾಗತ ಕಾರ್ಯಕ್ರಮ ಏರ್ಪಡಿಸಲಾಗಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News