'ದಿ ವೈರ್‌ʼ ಮಾಧ್ಯಮ ಕಚೇರಿಗೆ ಭೇಟಿ ನೀಡಿ ಪತ್ರಕರ್ತರ ಬಗ್ಗೆ ವಿಚಾರಿಸಿದ ದಿಲ್ಲಿ ಪೊಲೀಸ್‌

Update: 2021-07-24 07:36 GMT
photo: twitter/svaradarajan

ಹೊಸದಿಲ್ಲಿ:  ರಾಜಧಾನಿಯಲ್ಲಿರುವ ದಿ ವೈರ್ ಸುದ್ದಿ ತಾಣದ ಕಚೇರಿಗೆ ಶುಕ್ರವಾರ ದಿಲ್ಲಿ ಪೊಲೀಸ್ ಕಾನ್‍ಸ್ಟೇಬಲ್ ಒಬ್ಬರು ಭೇಟಿ ನೀಡಿ ಸಂಸ್ಥೆಗೆ ಕೆಲಸ ಮಾಡುವ ಕೆಲ ಪತ್ರಕರ್ತರುಗಳ ಬಗ್ಗೆ ವಿಚಾರಿಸಿದ್ದಾರೆಂದು ಸಂಸ್ಥೆಯ ಸ್ಥಾಪಕ ಸಂಪಾದಕರಲ್ಲೊಬ್ಬರಾಗಿರುವ ಸಿದ್ಧಾರ್ಥ್ ವರದರಾಜನ್ ಹೇಳಿದ್ದಾರೆ.

ಸುಮಾರು 18-20 ನಿಮಿಷ ಅವಧಿ ತನಕ  ಕಾನ್‍ಸ್ಟೇಬಲ್ ಕಚೇರಿಯಲ್ಲಿದ್ದರು ಅವರ ಈ ಭೇಟಿ `ವಿಚಿತ್ರ'ವಾಗಿದೆ ಎಂದು ಟ್ವಿಟ್ಟರ್‍ನಲ್ಲಿ ತಮ್ಮ ಪೋಸ್ಟ್ ಒಂದರಲ್ಲಿ ವರದರಾಜನ್ ಬರೆದಿದ್ದಾರೆ. ಕಚೇರಿಯ ಬಾಡಿಗೆ ಒಪ್ಪಂದ ತೋರಿಸುವಂತೆ ಪೊಲೀಸ್ ಪೇದೆ ಕೇಳಿದ್ದರೆಂದು ವರದರಾಜನ್ ಹೇಳಿದ್ದಾರೆ. ದಿ ವೈರ್ ಕಚೇರಿಗೆ ಭೇಟಿ ಕೊಟ್ಟಿದ್ದನ್ನು ದೃಢೀಕರಿಸಿರುವ ದಿಲ್ಲಿ ಪೊಲೀಸರು, ಸ್ವಾತಂತ್ರ್ಯ ದಿನಾಚರಣೆಯ ಹಿನ್ನೆಲೆಯಲ್ಲಿ ಇದೊಂದು  ಸಾಮಾನ್ಯ ಪರಿಶೀಲನೆ ಎಂದು ಹೇಳಿದ್ದಾರೆ. ದಿ ವೈರ್ ಕಚೇರಿಗೆ ನಾಮಫಲಕವಿರಲಿಲ್ಲ ಎಂದು ದಿಲ್ಲಿ ಪೊಲೀಸರು ಹೇಳಿದ್ದು ಇದನ್ನು ವರದರಾಜನ್ ನಿರಾಕರಿಸಿದ್ದಾರೆ.

ಇಸ್ರೇಲಿ ಸ್ಪೈವೇರ್ ಪೆಗಾಸಸ್ ಸೇವೆ ಪಡೆದು ಭಾರತೀಯ ಏಜನ್ಸಿಯೊಂದು ಹಲವು ಮಂದಿಯ  ಮೇಲೆ ಬೇಹುಗಾರಿಕೆ ನಡೆಸಿದೆ ಎಂಬ  ಸ್ಫೋಟಕ ಮಾಹಿತಿಯನ್ನು ದಿ ವೈರ್ ಸೇರಿದಂತೆ ಹಲವಾರು ಅಂತರಾಷ್ಟ್ರೀಯ ಸುದ್ದಿ ಸಂಸ್ಥೆಗಳು ಇತ್ತೀಚೆಗೆ ಬಹಿರಂಗಗೊಳಿಸಿದ ನಂತರ ನಡೆದ ಈ ಬೆಳವಣಿಗೆ ಸಾಕಷ್ಟು ಕುತೂಹಲ ಮೂಡಿಸಿದೆ.

ಕಚೇರಿಯಲ್ಲಿದ್ದ ಸಿಬ್ಬಂದಿ ಜತೆ ಮಾತನಾಡಿದ ಕಾನ್‍ಸ್ಟೇಬಲ್, ಸಂಸ್ಥೆಗೆ ಲೇಖನಗಳನ್ನು ಬರೆಯುವ ಪತ್ರಕರ್ತ ವಿನೋದ್ ದುವಾ ಕುರಿತು  ಹಾಗೂ ಪತ್ರಕರ್ತೆ ಅರ್ಫಾ ಶೇರ್ವಾಣಿ ಮತ್ತು ಮೋದಿ ಸರಕಾರವನ್ನು ಬಹಿರಂಗವಾಗಿ ಟೀಕಿಸುವ ನಟಿ ಸ್ವರ ಭಾಸ್ಕರ್ ಅವರ ಕುರಿತು ವಿಚಾರಿಸಿದ್ದರು. ಅಷ್ಟೇ ಅಲ್ಲದೆ ಆಸಿಫ್ ಖಾನ್  ಎಂಬ ವ್ಯಕ್ತಿಯ ಕುರಿತೂ ವಿಚಾರಿಸಿದ ಪೊಲೀಸ್ ಸಿಬ್ಬಂದಿ `ಕಾನ್ಪುರ್ ಕೇಸ್' ಎಂದು ಗೊಣಗಿದ್ದೂ ಕೇಳಿಸಿದೆ ಎಂದು ವರದರಾಜನ್ ಹೇಳಿದ್ದಾರೆ.

ಆದರೆ ಪೊಲೀಸರು ಈ ಕುರಿತು ನೀಡಿದ ಹೇಳಿಕೆಗೂ ಆ ಕಾನ್‍ಸ್ಟೇಬಲ್ ಕೇಳಿದ ಪ್ರಶ್ನೆಗಳಿಗೂ ತಾಳೆಯಾಗುತ್ತಿಲ್ಲ. ಕಚೇರಿಯ ಹೊರಗಡೆ ನಾಮಫಲಕವಿಲ್ಲ ಎಂಬುದನ್ನು ನಿರಾಕರಿಸಿದ ಅವರು `ಕಚೇರಿ ಬಾಡಿಗೆಗಿದೆ' ಎಂಬ ಸೂಚನಾಫಲಕ ಬೀಗ ಹಾಕಲ್ಪಟ್ಟಿರುವ ಪಕ್ಕದ ಕಟ್ಟಡಕ್ಕೆ ಸಂಬಂಧಿಸಿದ್ದು, ನಮ್ಮ ಕಟ್ಟಡ ಪ್ರವೇಶಿಸುತ್ತಿದ್ದಂತೆ ದಿ ವೈರ್ ಎಂದು ಪ್ರವೇಶದ್ವಾರದಲ್ಲಿ ಬರೆದಿದೆ," ಎಂದು ಅವರು ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News