×
Ad

ಮಹಾರಾಷ್ಟ್ರ: ಮಳೆ ಸಂಬಂಧಿತ ಘಟನೆಗೆ 138 ಮಂದಿ ಮೃತ್ಯು, 90,000 ಜನರು ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರ

Update: 2021-07-24 13:47 IST
 Photo: PTI

ಮುಂಬೈ: ಮಹಾರಾಷ್ಟ್ರದಲ್ಲಿ ಅನೇಕ ಕಡೆ ಭೂಕುಸಿತಗಳು ಸೇರಿದಂತೆ ಮಳೆ ಸಂಬಂಧಿತ ಘಟನೆಗಳಲ್ಲಿ ಕನಿಷ್ಠ 138 ಜನರು ಸಾವನ್ನಪ್ಪಿದ್ದಾರೆ. ರಾಜ್ಯ ರಾಜಧಾನಿ ಮುಂಬೈನಿಂದ 70 ಕಿ.ಮೀ. ದೂರದಲ್ಲಿರುವ ಕರಾವಳಿ ರಾಯಗಡ್ ಜಿಲ್ಲೆಯ ಭೂಕುಸಿತದಲ್ಲಿ 36 ಮಂದಿ ಸಾವನ್ನಪ್ಪಿದ್ದಾರೆ.

ಹಲವಾರು ಜಿಲ್ಲೆಗಳು  ಮುಖ್ಯವಾಗಿ ಕೊಂಕಣ ಪ್ರದೇಶ ದಲ್ಲಿ ಕಳೆದ ಕೆಲವು ದಿನಗಳಿಂದ ನಿರಂತರ ಮಳೆಯಾಗುತ್ತಿದ್ದು, ಸಾವಿರಾರು ಜನರು ಪ್ರವಾಹ ಹಾಗೂ  ಭೂಕುಸಿತದಲ್ಲಿ ಸಿಲುಕಿದ್ದಾರೆ.

"ಮಳೆ ಹಾಗೂ  ಮುಂಗಾರು ಸಂಬಂಧಿತ ಇತರ ಘಟನೆಗಳಿಂದಾಗಿ ಮಹಾರಾಷ್ಟ್ರದಲ್ಲಿ 138 ಆಕಸ್ಮಿಕ ಸಾವುಗಳು ವರದಿಯಾಗಿವೆ" ಎಂದು ಮಹಾರಾಷ್ಟ್ರದ ಪರಿಹಾರ ಹಾಗೂ  ಪುನರ್ವಸತಿ ಸಚಿವ ವಿಜಯ್ ವಾಡೆಟ್ಟಿವಾರ್ ಹೇಳಿದ್ದಾರೆ.

ಕೊಲ್ಹಾಪುರ ಜಿಲ್ಲೆಯ 40,000 ಕ್ಕೂ ಹೆಚ್ಚು ಜನರನ್ನು ಒಳಗೊಂಡಂತೆ ಕನಿಷ್ಠ 84,452 ಜನರನ್ನು ಪಶ್ಚಿಮ ಮಹಾರಾಷ್ಟ್ರದ ಪುಣೆ ವಿಭಾಗದ ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. 2019 ರಲ್ಲಿ ಪ್ರವಾಹದ ಉತ್ತುಂಗದಲ್ಲಿದ್ದಕ್ಕಿಂತಲೂ ಹೆಚ್ಚಿನ ಮಟ್ಟದಲ್ಲಿ ಪಂಚಗಂಗಾ ನದಿ ಹರಿಯುತ್ತಿರುವ ಕೊಲ್ಹಾಪುರದಲ್ಲಿ ಕನಿಷ್ಠ 54 ಗ್ರಾಮಗಳು ಪ್ರವಾಹದಿಂದ ಸಂಪೂರ್ಣ ಹಾನಿಗೊಳಗಾಗಿದ್ದರೆ, 821 ಭಾಗಶಃ ಬಾಧಿತವಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಪಶ್ಚಿಮ ಮಹಾರಾಷ್ಟ್ರದ ಸತಾರಾ ಜಿಲ್ಲೆಯೂ ಮಳೆಯಿಂದ ಹಾನಿಯಾಗಿದೆ ಹಾಗೂ  ಹಲವಾರು ಜನರು ಪ್ರವಾಹದ ನೀರಿನಿಂದ ಕೊಚ್ಚಿ ಹೋಗಿದ್ದಾರೆ ಎಂದು ಅಧಿಕಾರಿಯೊಬ್ಬರು ಸುದ್ದಿ ಸಂಸ್ಥೆ ಪಿಟಿಐ ತಿಳಿಸಿದೆ. ಸತಾರಾದಲ್ಲಿ ಸಾವಿನ ಸಂಖ್ಯೆ 27 ಕ್ಕೆ ಏರಿಕೆಯಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News