×
Ad

ಹೆದ್ದಾರಿ ಅಭಿವೃದ್ಧಿ ವೇಳೆ ಧಾರ್ಮಿಕ ಕೇಂದ್ರಗಳಿಗೆ ತೊಂದರೆಯಾದರೆ ದೇವರು ನಮ್ಮನ್ನು ಕ್ಷಮಿಸುತ್ತಾನೆ: ಕೇರಳ ಹೈಕೋರ್ಟ್

Update: 2021-07-24 14:40 IST

ಕೊಚ್ಚಿ : "ರಾಜ್ಯದಲ್ಲಿ ರಾಷ್ಟ್ರೀಯ ಹೆದ್ದಾರಿಗಳ ಅಭಿವೃದ್ಧಿಗಾಗಿ ಧಾರ್ಮಿಕ ಸಂಸ್ಥೆಗಳು ಬಾಧಿತವಾದರೆ, ದೇವರು ನಮ್ಮನ್ನು ಕ್ಷಮಿಸುತ್ತಾನೆ" ಎಂದು ಕೇರಳ ಹೈಕೋರ್ಟ್ ಶುಕ್ರವಾರ ಹೇಳಿದೆ.

ಧಾರ್ಮಿಕ ಸಂಸ್ಥೆಗಳನ್ನು ಬಾಧಿಸುತ್ತಿದೆ ಎಂಬ ಕಾರಣ ನೀಡಿ ಕೊಲ್ಲಂ ಜಿಲ್ಲೆಯಲ್ಲಿ ರಾಷ್ಟ್ರೀಯ ಹೆದ್ದಾರಿಗೆ  ಭೂಸ್ವಾಧೀನ ಪ್ರಕ್ರಿಯೆಗೆ ತಡೆ ಹೇರಬೇಕೆಂದು ಕೋರಿ ಸಲ್ಲಿಸಲಾಗಿದ್ದ ಹಲವು ಅಪೀಲುಗಳ ವಿಚಾರಣೆ ವೇಳೆ ಶುಕ್ರವಾರ ನ್ಯಾಯಾಲಯ ಮೇಲಿನಂತೆ ಹೇಳಿದೆ.

"ಕೆಲವು ನಾಗರಿಕರಿಗೆ ಅನಾನುಕೂಲವಾಗದೆ ದೇಶದಲ್ಲಿ ಯಾವುದೇ ಅಭಿವೃದ್ಧಿ  ಚಟುವಟಿಕೆಗಳನ್ನು ಜಾರಿಗೊಳಿಸಲು ಸಾಧ್ಯವಿಲ್ಲ. ಕಷ್ಟಗಳು ಅಭಿವೃದ್ಧಿಯ ಒಂದು ಭಾಗ. ದೇಶದ ಅಭಿವೃದ್ಧಿಯೇ ಮುಖ್ಯ ಉದ್ದೇಶವಾಗಿರುವಾಗ ನಾಗರಿಕರು ಅಲ್ಪ ಕಷ್ಟವನ್ನು ನಿರ್ಲಕ್ಷ್ಯಿಸಬೇಕು" ಎಂದು ನ್ಯಾಯಾಲಯ ಹೇಳಿದೆ.

ಕೊಲ್ಲಂ ಜಿಲ್ಲೆಯ ಉಮಯನಲ್ಲೊರ್, ತಝತ್ತುಲ ಮತ್ತು ಕೆಲ ಸುತ್ತಲಿನ ಗ್ರಾಮಗಳಲ್ಲಿ ರಾಷ್ಟ್ರೀಯ ಹೆದ್ದಾರಿ 66ರ ಅಗಲೀಕರಣಕ್ಕಾಗಿ ಭೂಸ್ವಾಧೀನವನ್ನು ವಿರೋಧಿಸಿ ಅಪೀಲುಗಳನ್ನು ಸಲ್ಲಿಸಲಾಗಿತ್ತು. ಧಾರ್ಮಿಕ ಸಂಸ್ಥೆಗಳನ್ನು ರಕ್ಷಿಸುವ ಉದ್ದೇಶದಿಂದ ಕೇರಳ ಸರಕಾರ ರಸ್ತೆ ಕಾಮಗಾರಿಯಲ್ಲಿ ಸ್ವಲ್ಪ ಬದಲಾವಣೆಗಳನ್ನು ಸೂಚಿಸಿದ್ದರೂ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಅದನ್ನು ನಿರ್ಲಕ್ಷ್ಯಿಸಿದೆ ಎಂದು ಅಪೀಲುದಾರರು ಆರೋಪಿಸಿದ್ದಾರೆ.

ಒಂದು ಖಾಸಗಿ ಮಸೀದಿಯನ್ನು ಉಳಿಸಲು ರಾಷ್ಟ್ರೀಯ ಹೆದ್ದಾರಿ ಯೋಜನೆಯಲ್ಲಿ ಮಾರ್ಪಾಡು ಮಾಡಲಾಗಿದೆ ಹಾಗೂ ಹೆಚ್ಚು ಭೂಸ್ವಾಧೀನ  ಹೆದ್ದಾರಿಯ ಉತ್ತರದ ಭಾಗದಲ್ಲಿ ನಡೆಸಲಾಗುತ್ತಿದೆ, ಇಲ್ಲಿ ಅಪೀಲುದಾರರು ವಾಸಿಸುತ್ತಿದ್ದಾರೆ ಹಾಗೂ ಕೆಲ ಧಾರ್ಮಿಕ ಸಂಸ್ಥೆಗಳಿವೆಯೆನ್ನಲಾಗಿದೆ.

"ರಾಷ್ಟ್ರೀಯ ಹೆದ್ದಾರಿ ಅಗಲೀಕರಣ ಸ್ಥಳದಲ್ಲಿ ವಸತಿ ಕಟ್ಟಡ, ದೇವಸ್ಥಾನ, ಮಸೀದಿ ಅಥವಾ ಮಸಣಭೂಮಿಯಿದ್ದರೂ ಸಾರ್ವಜನಿಕ ಉದ್ದೇಶಕ್ಕಾಗಿ ಭೂಸ್ವಾಧೀನ ಪ್ರಕ್ರಿಯೆ ಕೈಬಿಡಲು ಇದು ಕಾರಣವಾಗುವುದಿಲ್ಲ" ಎಂದು ಜಸ್ಟಿಸ್ ಪಿ ವಿ ಕುಂಞಕೃಷ್ಣನ್ ಹೇಳಿದರು.

"ದೇವರು ಅಪೀಲುದಾರರನ್ನು, ಪ್ರಾಧಿಕಾರಗಳನ್ನು ಹಾಗೂ ಈ ತೀರ್ಪು ಬರೆದವರನ್ನು ರಕ್ಷಿಸುತ್ತಾರೆ. ದೇವರು ನಮ್ಮ ಜತೆಗಿರುತ್ತಾರೆ," ಎಂದೂ ನ್ಯಾಯಾಲಯ ಹೇಳಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News