×
Ad

ರಾಷ್ಟ್ರೀಯ ಭದ್ರತಾ ಕಾಯ್ದೆಯಡಿ ಯಾರನ್ನೂ ಬಂಧಿಸುವ ಅಧಿಕಾರ ಪಡೆದ ದಿಲ್ಲಿ ಪೊಲೀಸ್‌ ಆಯುಕ್ತರು !

Update: 2021-07-24 19:03 IST
ದಿಲ್ಲಿ ಪೊಲೀಸ್ ಆಯುಕ್ತ ಬಾಲಾಜಿ ಶ್ರೀವಾಸ್ತವ, photo: Twitter

ಹೊಸದಿಲ್ಲಿ: ದಿಲ್ಲಿ ಪೊಲೀಸ್ ಆಯುಕ್ತರು ಈಗ ಅಕ್ಟೋಬರ್ 18 ರವರೆಗೆ ರಾಷ್ಟ್ರೀಯ ಭದ್ರತಾ ಕಾಯ್ದೆ (ಎನ್‌ಎಸ್‌ಎ) ಅಡಿಯಲ್ಲಿ ಯಾರನ್ನೂ ಬಂಧಿಸಬಹುದು ಎಂದು ಲೆಫ್ಟಿನೆಂಟ್ ಗವರ್ನರ್ ಅನಿಲ್ ಬೈಜಾಲ್ ಹೊರಡಿಸಿದ ಅಧಿಸೂಚನೆಯಲ್ಲಿ ತಿಳಿಸಲಾಗಿದೆ.

ಸ್ವಾತಂತ್ರ್ಯ ದಿನಾಚರಣೆಗಿಂತ ಮೊದಲು ಹಾಗೂ  ಕೇಂದ್ರದ ಮೂರು ಕೃಷಿ ಕಾನೂನುಗಳನ್ನು ವಿರೋಧಿಸುತ್ತಿರುವ ರೈತರು ಮಧ್ಯ ದಿಲ್ಲಿಯ ಜಂತರ್ ಮಂತರ್‌ನಲ್ಲಿ ‘ಕಿಸಾನ್ ಸಂಸದ್ ನಡೆಯುತ್ತಿರುವಾಗ ಈ ಅಧಿಸೂಚನೆಬಂದಿದೆ.  ಇದು ವಾಡಿಕೆಯ ಆದೇಶವಾಗಿದ್ದು, ಇದನ್ನು ನಿಯಮಿತವಾಗಿ ನೀಡಲಾಗುತ್ತದೆ ಎಂದು ದಿಲ್ಲಿ ಪೊಲೀಸರು ತಿಳಿಸಿದ್ದಾರೆ.

ವ್ಯಕ್ತಿಯು ರಾಷ್ಟ್ರೀಯ ಭದ್ರತೆ ಹಾಗೂ  ಕಾನೂನು ಸುವ್ಯವಸ್ಥೆಗೆ ಬೆದರಿಕೆಯಾಗಿದ್ದಾನೆಂದು ಅಧಿಕಾರಿಗಳು ಭಾವಿಸಿದರೆ ಎನ್‌ಎಸ್‌ಎ ಕಾಯ್ದೆಯು ವ್ಯಕ್ತಿಯನ್ನು ತಿಂಗಳುಗಟ್ಟಲೆ ನಿರ್ಬಂಧಿಸಲು ಅನುಮತಿಸುತ್ತದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.

ಈ ತಿಂಗಳ ಆರಂಭದಲ್ಲಿ ದಿಲ್ಲಿ ಪೊಲೀಸ್ ಆಯುಕ್ತ ಬಾಲಾಜಿ ಶ್ರೀವಾಸ್ತವ ಅವರು ಸ್ವಾತಂತ್ರ್ಯ ದಿನಾಚರಣೆಯ ಮುನ್ನ ಡ್ರೋನ್‌ಗಳು, ಪ್ಯಾರಾಗ್ಲೈಡರ್‌ಗಳು ಹಾಗೂ  ಬಿಸಿ ಗಾಳಿಯ ಬಲೂನ್ ಗಳಂತಹ ವೈಮಾನಿಕ ವಸ್ತುಗಳನ್ನು ಹಾರಿಸುವುದನ್ನು ನಿಷೇಧಿಸಿ ಆದೇಶ ಹೊರಡಿಸಿದ್ದರು. ಭದ್ರತಾ ಕಾರಣಗಳಿಗಾಗಿ ಜುಲೈ 16 ರಿಂದ ಆಗಸ್ಟ್ 16 ರವರೆಗೆ 32 ದಿನಗಳವರೆಗೆ ಈ ಆದೇಶವು ರಾಷ್ಟ್ರ ರಾಜಧಾನಿಯಲ್ಲಿ ಜಾರಿಯಲ್ಲಿರುತ್ತದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News