ಅಪಹರಣಕ್ಕೊಳಗಾಗಿ ಮಾರಾಟವಾದ ಬಾಲಕಿಯನ್ನು ರಕ್ಷಿಸಿದ ಪೊಲೀಸರು

Update: 2021-07-24 16:54 GMT

ಹೊಸದಿಲ್ಲಿ, ಜು. 24: ಅಪಹರಣಕ್ಕೆ, ಲೈಂಗಿಕ ಕಿರುಕುಳಕ್ಕೆ ಒಳಗಾದ ಹಾಗೂ ವಿವಾಹದ ಉದ್ದೇಶಕ್ಕಾಗಿ 50 ಸಾವಿರ ರೂಪಾಯಿಗೆ ವ್ಯಕ್ತಿಯೋರ್ವನಿಗೆ ಮಾರಾಟವಾದ 16 ವರ್ಷದ ಬಾಲಕಿಯೋರ್ವಳನ್ನು ಮಧ್ಯಪ್ರದೇಶದ ಭಿಂದ್ ಜಿಲ್ಲೆಯಿಂದ ರಕ್ಷಿಸಲಾಗಿದೆ. ಆರೋಪಿಯನ್ನು ಬಂಧಿಸಲಾಗಿದೆ ಎಂದು ಪೊಲೀಸರು ಶನಿವಾರ ತಿಳಿಸಿದ್ದಾರೆ.

ಆರೋಪಿ ರಾಜೀವ್ ಗರ್ಗ್ ಸಾಮಾಜಿಕ ಜಾಲ ತಾಣದಲ್ಲಿ ನಕಲಿ ಖಾತೆ ಸೃಷ್ಟಿಸಿ ಬಾಲಕಿಯ ಸ್ನೇಹ ಸಂಪಾದಿಸಿದ್ದ. ಅನಂತರ ಈಶಾನ್ಯ ದಿಲ್ಲಿಯಲ್ಲಿ ಭೇಟಿಯಾಗುವಂತೆ ಭಾವನಾತ್ಮಕವಾಗಿ ಬ್ಲಾಕ್ಮೇಲ್ ಮಾಡಿದ್ದ. ಬಾಲಕಿ ಅಲ್ಲಿಗೆ ಆಗಮಿಸಿದಾಗ ಆಕೆಯನ್ನು ಅಪಹರಿಸಿ ಭಿಂದ್ಗೆ ಕರೆದೊಯ್ದಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.

ತಾನು ತನ್ನ ಗೆಳತಿಯೊಬ್ಬರ ಮನಗೆ ಹೋಗುತ್ತಿದ್ದೇನೆ ಎಂದು ಬಾಲಕಿ ಮೇ 29ರಂದು ತನ್ನ ಹೆತ್ತವರಿಗೆ ತಿಳಿಸಿದ್ದಳು. ಆದರೆ, ಆಕೆ ಹಿಂದಿರುಗದೇ ಇದ್ದಾಗ ಕುಟುಂಬ ಶೋಧ ನಡೆಸಿತು. ಪತ್ತೆಯಾಗದ ಇದ್ದಾಗ ಮರುದಿನ ರನಹೋಲಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿತು ಎಂದು ಹಿರಿಯ ಪೊಲೀಸ್ ಅಧಿಕಾರಿ ತಿಳಿಸಿದ್ದಾರೆ.

ಈ ಹಿನ್ನೆಲೆಯಲ್ಲಿ ಬಾಲಕಿಯ ಕರೆಗಳನ್ನು ಪರಿಶೀಲಿಸಲಾಯಿತು. ಆಕೆ ಅಪಹರಣಕ್ಕೊಳಗಾದ ದಿನ ಆಕೆಯ ಮೊಬೈಲ್ ಸಂಖ್ಯೆಯ ಲೊಕೇಶನ್ ದಿಲ್ಲಿಯಲ್ಲಿ ಕಂಡುಬಂದಿತ್ತು. ಮೊಬೈಲ್ ಲೊಕೇಶನ್ ಅನುಸರಿಸಿ ಗರ್ಗ್ ಅನ್ನು ಗುರುವಾರ ಮಧ್ಯಪ್ರದೇಶದ ಭಿಂದ್ನಿಂದ ಪೊಲೀಸರು ಬಂಧಿಸಿದ್ದಾರೆ ಎಂದು ಪೊಲೀಸ್ ಉಪ ಆಯುಕ್ತ ಮೋನಿಕಾ ಭಾರದ್ವಾಜ್ ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News