ರೈತರ ಪ್ರತಿಭಟನೆ ಸಂದರ್ಭ ಪಂಜಾಬ್ ನಲ್ಲಿ 220 ರೈತರ ಮೃತ್ಯು: ರಾಜ್ಯ ಸರಕಾರದ ಮಾಹಿತಿ

Update: 2021-07-24 17:05 GMT

ಅಮೃತಸರ, ಜು.24: ಕೇಂದ್ರ ಸರಕಾರದ 3 ಕೃಷಿ ಕಾಯ್ದೆಯನ್ನು ವಿರೋಧಿಸಿ ರೈತರು ನಡೆಸುತ್ತಿರುವ ಪ್ರತಿಭಟನೆ ಸಂದರ್ಭ 220 ರೈತರು ಹಾಗೂ ಕೃಷಿ ಕಾರ್ಮಿಕರು ಮೃತರಾಗಿದ್ದು ಮೃತರ ಕುಟುಂಬದವರು ಹಾಗೂ ಬಂಧುಗಳಿಗೆ 10.86 ಕೋಟಿ ರೂ. ಪರಿಹಾರ ನೀಡಲಾಗಿದೆ ಎಂದು ಪಂಜಾಬ್ ಸರಕಾರ ಶನಿವಾರ ಹೇಳಿದೆ.

ರೈತರ ಪ್ರತಿಭಟನೆ ಸಂದರ್ಭ ಮೃತರಾದವರ ಬಗ್ಗೆ ಯಾವುದೇ ದಾಖಲೆಯಿಲ್ಲ ಎಂದು ಕೇಂದ್ರ ಕೃಷಿಸಚಿವ ನರೇಂದ್ರ ಥೋಮರ್ ಶುಕ್ರವಾರ ಹೇಳಿಕೆ ನೀಡಿದ್ದರು.

ಜುಲೈ 20ರವರೆಗಿನ ಮಾಹಿತಿಯಂತೆ, ಮೃತಪಟ್ಟ 220 ರೈತರು/ಕೃಷಿ ಕಾರ್ಮಿಕರ ಮಾಹಿತಿಯನ್ನು ಪರಿಶೀಲಿಸಲಾಗಿದ್ದು ಮೃತರಲ್ಲಿ ಸುಮಾರು 92% ಮಂದಿ (203 ಮಂದಿ) ಪಂಜಾಬ್ನ ಮಾಲ್ವಾ ಪ್ರದೇಶದವರು, 11 ಮಂದಿ ಮಾಜ್ಹಾ ಪ್ರದೇಶದವರು ಹಾಗೂ 6 ದೊವಾಬಾ ನಿವಾಸಿಗಳು ಎಂದು ಸರಕಾರದ ವರದಿಯನ್ನು ಉಲ್ಲೇಖಿಸಿ ‘ದಿ ಇಂಡಿಯನ್ ಎಕ್ಸ್ಪ್ರೆಸ್’ ವರದಿ ಮಾಡಿದೆ.

ಕಳೆದ 8 ತಿಂಗಳಿನಲ್ಲಿ ರೈತರ ಪ್ರತಿಭಟನೆಗೆ ಸಂಬಂಧಿಸಿ ಸಂಗ್ರೂರ್ ಜಿಲ್ಲೆಯಲ್ಲಿ ಅತ್ಯಧಿಕ, 43 ಸಾವು ಸಂಭವಿಸಿದ್ದು ಮೃತಪಟ್ಟವರ ಕುಟುಂಬದವರಿಗೆ ತಲಾ 5 ಲಕ್ಷ ರೂ. ಪರಿಹಾರವನ್ನು ರಾಜ್ಯ ಸರಕಾರ ನೀಡಿದೆ. ಭಟಿಂಡಾ ಜಿಲ್ಲೆಯಲ್ಲಿ 33 ಸಾವು ಸಂಭವಿಸಿದ್ದು ಮೃತರ ಕುಟುಂಬದವರಿಗೆ ಒಟ್ಟು 1.65 ಕೋಟಿ ರೂ. ಪರಿಹಾರ ಒದಗಿಸಲಾಗಿದೆ. ಮೋಗಾದಲ್ಲಿ 27, ಪಟಿಯಾಲದಲ್ಲಿ 25, ಬರ್ನಾಲದಲ್ಲಿ 17, ಮಾನ್ಸದಲ್ಲಿ 15, ಮುಕತ್ಸರ್ ಸಾಹಿಬ್ನಲ್ಲಿ 14, ಲುಧಿಯಾನದಲ್ಲಿ 13, ಅಮೃತಸರದಲ್ಲಿ 4, ಮೊಹಾಲಿ, ತರಣ್ ರಣ್ ನಲ್ಲಿ ಕ್ರಮವಾಗಿ 3 ಮತ್ತು 2 ಸಾವಿನ ಪ್ರಕರಣ ಸಂಭವಿಸಿದೆ.

ಇದರ ಜೊತೆಗೆ , ಹಲವು ಜಿಲ್ಲೆಗಳಲ್ಲಿ ಸುಮಾರು 24ಕ್ಕೂ ಅಧಿಕ ರೈತರು ಮೃತಪಟ್ಟ ಪ್ರಕರಣಗಳ ಪರಿಶೀಲನೆ ನಡೆಯುತ್ತಿದ್ದು ಇದರಲ್ಲಿ ಹೆಚ್ಚಿನವರು ರೈತರ ಪ್ರತಿಭಟನೆಗೆ ಸಂಬಂಧಿಸಿದ ಪ್ರಕರಣದ ಸಂತ್ರಸ್ತರಾಗಿರುವ ಸಾಧ್ಯತೆಯಿದೆ ಎಂದು ವರದಿ ತಿಳಿಸಿದೆ. ಈ ಮಧ್ಯೆ ಹೇಳಿಕೆ ನೀಡಿರುವ ರೈತರ ಸಂಘಟನೆಗಳು, ತಾವು ಸಂಗ್ರಹಿಸಿದ ಮಾಹಿತಿಯಂತೆ ದಿಲ್ಲಿಯಲ್ಲಿ ನಡೆದ ರೈತರ ಪ್ರತಿಭಟನೆಗೆ ಸಂಬಂಧಿಸಿ ಇದುವರೆಗೆ 500ಕ್ಕೂ ಅಧಿಕ ರೈತರು, ಕೃಷಿ ಕಾರ್ಮಿಕರು ಮೃತರಾಗಿದ್ದು ಇವರಲ್ಲಿ ಸುಮಾರು 85%ದಷ್ಟು ಮಂದಿ ಪಂಜಾಬ್ ನವರು. ಪಂಜಾಬ್ ನಲ್ಲಿ ಕೃಷಿ ಕಾಯ್ದೆ ವಿರೋಧಿಸಿ ನಡೆದ ಪ್ರತಿಭಟನೆ ಸಂದರ್ಭ ಮೃತಪಟ್ಟವರ ಸಂಖ್ಯೆಯೂ ಇದರಲ್ಲಿ ಸೇರಿದೆ ಎಂದಿವೆ.

ಈ ಪ್ರತಿಭಟನೆಯಲ್ಲಿ ಹಲವು ರಾಜ್ಯದ ರೈತರು ಮೃತರಾಗಿದ್ದಾರೆ. ಆದರೆ ಪಂಜಾಬ್ ನ ರೈತರ ಸಂಘಟನೆಗಳು ಅತ್ಯುತ್ಸಾಹದಿಂದ ಮಾಹಿತಿ ಸಂಗ್ರಹಿಸಿವೆ ಎಂದು ಸಂಯುಕ್ತ ಕಿಸಾನ್ ಮೋರ್ಛ ಪ್ರತಿಕ್ರಿಯಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News