ಐಎನ್ಎಕ್ಸ್ ಮೀಡಿಯಾ ಪ್ರಕರಣ: ದಿಲ್ಲಿ ನ್ಯಾಯಾಲಯದಿಂದ ಈ.ಡಿ.ಗೆ ನೋಟಿಸ್
Update: 2021-07-24 23:17 IST
ಹೊಸದಿಲ್ಲಿ, ಜು. 24: ಐಎನ್ಎಕ್ಸ್ ಮೀಡಿಯಾ ಹಣ ಅಕ್ರಮ ವರ್ಗಾವಣೆ ಪ್ರಕರಣಕ್ಕೆ ಸಂಬಂಧಿಸಿ ವಿವಿಧ ದಾಖಲೆಗಳನ್ನು ಕೋರಿ ಕೇಂದ್ರದ ಮಾಜಿ ಸಚಿವ ಪಿ. ಚಿದಂರಬರಂ ಅವರು ಸಲ್ಲಿಸಿದ ಅರ್ಜಿಯ ಕುರಿತು ಪ್ರತಿಕ್ರಿಯೆ ನೀಡುವಂತೆ ದಿಲ್ಲಿಯ ನ್ಯಾಯಾಲಯ ಶನಿವಾರ ಜಾರಿ ನಿರ್ದೇಶನಾಲಯಕ್ಕೆ ಸೂಚಿಸಿದೆ.
ವಿಶೇಷ ನ್ಯಾಯಾಲಯದ ನ್ಯಾಯಾಧೀಶ ಎಂ.ಕೆ. ನಾಗಪಾಲ್ ಅವರು ಜಾರಿ ನಿರ್ದೇಶನಾಲಯಕ್ಕೆ ನೋಟಿಸು ಜಾರಿ ಮಾಡಿದರು ಹಾಗೂ ಆಗಸ್ಟ್ 9ರ ಒಳಗೆ ಪ್ರತಿಕ್ರಿಯೆ ಸಲ್ಲಿಸುವಂತೆ ನಿರ್ದೇಶಿಸಿದರು.
ಪ್ರಕರಣದಲ್ಲಿ ದಾಖಲಿಸಲಾದ ದೋಷಾರೋಪ ಪಟ್ಟಿಯೊಂದಿಗೆ ವಿವಿಧ ದಾಖಲೆಗಳನ್ನು ಪೂರೈಸಲು ಜಾರಿ ನಿರ್ದೇಶನಾಲಯಕ್ಕೆ ನಿರ್ದೇಶನ ನೀಡುವಂತೆ ಕೋರಿ ಚದಂಬರಂ ಅವರ ಪರವಾಗಿ ನ್ಯಾಯವಾದಿ ಹರ್ಷದೀಪ್ ಸಿಂಗ್ ಖುರಾನಾ ಸಲ್ಲಿಸಿದ ಮನವಿಯನ್ನು ನ್ಯಾಯಾಲಯ ವಿಚಾರಣೆ ನಡೆಸಿತು.
ದಾಖಲೆಗಳ ಪುಟ ಸಂಖ್ಯೆಯ ವ್ಯತ್ಯಾಸವನ್ನು ಜಾರಿ ನಿರ್ದೇಶನಾಲಯ ಗುರುತಿಸಬೇಕು ಹಾಗೂ ನಾಪತ್ತೆಯಾದ ದಾಖಲೆಗಳನ್ನು ಪೂರೈಸಬೇಕು ಎಂದು ಕೂಡ ಮನವಿ ಕೋರಿದೆ.