ಎಕ್ಯುಐ ಕಳಪೆ ಇರುವ ನಗರಗಳಲ್ಲಿ ಪಟಾಕಿ ನಿಷೇಧ ಆದೇಶ ಎತ್ತಿಹಿಡಿದ ಸುಪ್ರೀಂ
ಹೊಸದಿಲ್ಲಿ, ಜು.24: ವಾಯು ಗುಣಮಟ್ಟ ಸೂಚ್ಯಾಂಕ(ಎಕ್ಯೂಐ) ಅತ್ಯಂತ ಕಳಪೆಯಿರುವ ನಗರಗಳಲ್ಲಿ ಕೋವಿಡ್ ಸೋಂಕಿನ ಸಂದರ್ಭದಲ್ಲಿ ಪಟಾಕಿ ಸಿಡಿಸುವುದನ್ನು ನಿಷೇಧಿಸುವ ರಾಷ್ಟ್ರೀಯ ಹಸಿರು ನ್ಯಾಯಮಂಡಳಿ(ಎನ್ಜಿಟಿ) ಆದೇಶವನ್ನು ಪ್ರಶ್ನಿಸಿ ಸಲ್ಲಿಸಿದ್ದ ಅರ್ಜಿಗಳನ್ನು ಸುಪ್ರೀಂಕೋರ್ಟ್ ಶುಕ್ರವಾರ ತಿರಸ್ಕರಿಸಿದೆ.
ಎನ್ಜಿಟಿ ಆದೇಶ ಉತ್ಪಾದನಾ ಚಟುವಟಿಕೆಗೆ ಸಂಬಂಧಿಸಿದ್ದಲ್ಲ. ಎಕ್ಯುಐ ಸುಧಾರಿಸಿದಾಗ ರಾಜ್ಯದ ಅಧಿಕಾರಿಗಳು ಪಟಾಕಿ ಮಾರಾಟಕ್ಕೆ ಅನುಮತಿ ನೀಡಬಹುದಾಗಿದೆ ಎಂದು ಹೇಳಿದ ನ್ಯಾಯಪೀಠ ಅರ್ಜಿಯನ್ನು ತಿರಸ್ಕರಿಸಿದೆ. ಸಂಬಂಧಿಸಿದ ಪ್ರದೇಶದಲ್ಲಿ ಎಕ್ಯೂಐ ಮತ್ತಷ್ಟು ಕಡಿಮೆಯಾದರೆ, ಉತ್ಪಾದನಾ ಚಟುವಟಿಕೆಯನ್ನೂ ನಿಷೇಧಿಸಬಹುದು ಎಂಬ ಭೀತಿಯನ್ನು ಅರ್ಜಿದಾರರು ವ್ಯಕ್ತಪಡಿಸಿದ್ದಾರೆ. ಆದರೆ ಎನ್ಜಿಟಿ ಆದೇಶದಲ್ಲಿ ಇಂತಹ ಯಾವುದೇ ವಿಷಯವನ್ನು ಉಲ್ಲೇಖಿಸಿಲ್ಲ ಎಂದು ನ್ಯಾಯಾಧೀಶರಾದ ಎಎಂ ಖಾನ್ವಿಲ್ಕರ್ ಮತ್ತು ಸಂಜೀವ್ ಖನ್ನಾ ಅವರಿದ್ದ ನ್ಯಾಯಪೀಠ ಹೇಳಿದೆ.
ಕೊರೋನ ಸೋಂಕಿನ ಸಂದರ್ಭ ಪಟಾಕಿ ಮೇಲೆ ಸಂಪೂರ್ಣ ನಿಷೇಧ ಹೇರುವುದಾಗಿ ಎನ್ಜಿಟಿ ಹೇಳಿದೆ ಎಂದು ಹಿರಿಯ ನ್ಯಾಯವಾದಿ ಪಿಎಸ್ ನರಸಿಂಹ ಆತಂಕ ವ್ಯಕ್ತಪಡಿಸಿದರು. ಇದಕ್ಕೆ ಉತ್ತರಿಸಿದ ನ್ಯಾ. ಖಾನ್ವಿಲ್ಕರ್, ಇದು ವಾಯುಗುಣಮಟ್ಟವನ್ನು ಅವಲಂಬಿಸಿದೆ. ಒಂದು ವೇಳೆ ಗುಣಮಟ್ಟ ಮತ್ತಷ್ಟು ಕುಸಿದರೆ ಆಗ ಖಂಡಿತಾ ಅವಕಾಶ ನೀಡಲಾಗದು ಎಂದರು. ಸುಪ್ರೀಂಕೋರ್ಟ್ನ 2028ರ ತೀರ್ಪಿನಲ್ಲಿ ಹಸಿರು ಪಟಾಕಿ ಮಾರಾಟಕ್ಕೆ ಅನುಮತಿಯಿದೆ ಎಂದು ನರಸಿಂಹ ವಾದಿಸಿದರು. ಈ ಅಂಶವನ್ನು ಪರಿಗಣಿಸಿಯೇ ಎನ್ಜಿಟಿ ಮೆದು ಧೋರಣೆ ತಳೆದಿದೆ. ಕೊರೋನ ಸಂದರ್ಭದಲ್ಲಿ ಮಾತ್ರ ನಿಷೇಧಿಸಲಾಗಿದೆ. ಇದಕ್ಕೆ ಅರ್ಥವಿದೆ. ಮಾರಾಟದ ಮೇಲೆ ಸಂಪೂರ್ಣ ನಿಷೇಧ ವಿಧಿಸಿಲ್ಲ. ಇಲ್ಲಿ ಆದೇಶವನ್ನು ತಪ್ಪಾಗಿ ಅರ್ಥೈಸಲಾಗಿದೆ ಎಂದು ನ್ಯಾಯಪೀಠ ಹೇಳಿತು.
ಐಐಟಿ ಕಾನ್ಪುರದ ವರದಿ ಪ್ರಕಾರ, ವಾಯು ಮಾಲಿನ್ಯಕ್ಕೆ ಕಾರಣವಾಗುವ ಪ್ರಮುಖ 15 ವಿಷಯಗಳಲ್ಲಿ ಪಟಾಕಿಗಳು ಸೇರಿಲ್ಲ ಎಂದು ನ್ಯಾಯವಾದಿ ಸಾಯ್ ದೀಪಕ್ ಹೇಳಿದರು. ಇದಕ್ಕೆ ಉತ್ತರಿಸಿದ ನ್ಯಾಯಪೀಠ ‘ ಪಟಾಕಿ ನಿಮ್ಮ ಶ್ವಾಸಕೋಶದ ಮೇಲೆ ಪರಿಣಾಮ ಬೀರುತ್ತದೆ ಎಂದು ಐಐಟಿ ಹೇಳಬೇಕೆಂದು ನೀವು ಬಯಸುತ್ತೀರಾ? ದಿಲ್ಲಿಯಲ್ಲಿ ವಾಸಿಸುವವರನ್ನು ದೀಪಾವಳಿ ಸಂದರ್ಭದ ಬಗ್ಗೆ ಕೇಳಿ. ನಾವು 2017ಕ್ಕಿಂತ ತುಂಬಾ ಮುಂದೆ ಸಾಗಿಬಂದಿದ್ದು ಈಗ ಕೊರೋನ ಸಾಂಕ್ರಾಮಿಕದ ಮಧ್ಯೆಯಿದ್ದೇವೆ ಎಂದು ಹೇಳಿ, ಅರ್ಜಿಯನ್ನು ತಿರಸ್ಕರಿಸಿದೆ.