ಪೆಗಾಸಸ್ ಬೇಹುಗಾರಿಕೆ ನಡೆಸಲು ಹಣ ನೀಡಿದ್ದು ಯಾರು ?: ಸಂಜಯ್ ರಾವತ್ ಪ್ರಶ್ನೆ

Update: 2021-07-25 17:40 GMT

ಮುಂಬೈ, ಜು. 25: ಪೆಗಾಸಸ್ ಸಾಫ್ಟವೇರ್ ಮೂಲಕ ರಾಜಕಾರಣಿಗಳು ಹಾಗೂ ಪತ್ರಕರ್ತರ ಮೇಲೆ ಬೇಹುಗಾರಿಕೆ ನಡೆಸಲು ಹಣ ನೀಡಿದ್ದು ಯಾರು ಎಂಬುದು ಬಹಿರಂಗವಾಗಬೇಕಾದ ಅಗತ್ಯತೆ ಇದೆ ಎಂದು ಶಿವಸೇನೆ ಸಂಸದ ಸಂಜಯ್ ರಾವತ್ ರವಿವಾರ ಹೇಳಿದ್ದಾರೆ. 

ಶಿವಸೇನೆ ಮುಖವಾಣಿ ‘ಸಾಮ್ನಾ’ದ ‘ರೋಖ್ಠೋಕ್’ ಅಂಕಣದಲ್ಲಿ ಅವರು ಪೆಗಾಸಸ್ ಬೇಹುಗಾರಿಕೆಯನ್ನು ಹಿರೋಶಿಮಾದಲ್ಲಿ ಬಾಂಬ್ ಹಾಕಿರುವುದಕ್ಕೆ ಹೋಲಿಸಿದ್ದಾರೆ. ಜಪಾನ್ನ ಹಿರೋಶಿಮಾದಲ್ಲಿ ನಡೆದ ಬಾಂಬ್ ದಾಳಿಗಿಂತ ಪೆಗಾಸಸ್ ಪ್ರಕರಣ ಭಿನ್ನವಾಗಿಲ್ಲ. ಹಿರೋಶಿಮಾದಲ್ಲಿ ಬಾಂಬ್ ದಾಳಿ ನಡೆಸಿದ ಪರಿಣಾಮ ಸಾವಿರಾರು ಜನರು ಸಾವಿಗೀಡಾದರು. ಆದರೆ, ಈಗ ನಡೆಯುತ್ತಿರುವ ಬೇಹುಗಾರಿಕೆಯಿಂದ ಸ್ವಾತಂತ್ರದ ಸಾವು ಸಂಭವಿಸುತ್ತಿದೆ. ಆಧುನಿಕ ತಂತ್ರಜ್ಞಾನ ನಮ್ಮನ್ನು ಗುಲಾಮ ಗಿರಿಯತ್ತ ಕೊಂಡೊಯ್ಯುತ್ತಿದೆ ಎಂದು ಅವರು ಹೇಳಿದರು. 

ತಮ್ಮ ಮೇಲೆ ಬೇಹುಗಾರಿಕೆ ನಡೆಸಲಾಗುತ್ತಿದೆ ಎಂದು ರಾಜಕಾರಣಿ, ಉದ್ಯಮಿ ಹಾಗೂ ಸಾಮಾಜಿಕ ಹೋರಾಟಗಾರರು ಆತಂಕಗೊಂಡಿದ್ದಾರೆ. ನ್ಯಾಯಾಂಗ ಹಾಗೂ ಮಾಧ್ಯಮ ಕೂಡ ಇದೇ ಒತ್ತಡಕ್ಕೆ ಒಳಗಾಗಿದೆ ಎಂದು ಅವರು ತಿಳಿಸಿದರು. ಇಸ್ರೇಲ್ ಕಂಪೆನಿ ಎನ್ಎಸ್ಒ ಪೆಗಾಸಸ್ ಸಾಫ್ಟವೇರ್ ಗೆ ವಾರ್ಷಿಕ 60 ಕೋಟಿ ರೂಪಾಯಿಯನ್ನು ಪರವಾನಿಗೆ ಶುಲ್ಕವಾಗಿ ಪಡೆಯುತ್ತಿದೆ ಎಂದು ಮಾಧ್ಯಮಗಳಲ್ಲಿ ವರದಿಯಾಗಿದೆ. ಒಂದು ಪರವಾನಿಗೆಯಿಂದ 50 ದೂರವಾಣಿಗಳ ಮೇಲೆ ಕಣ್ಗಾವಲು ನಡೆಸಬಹುದು. 300 ದೂರವಾಣಿಗಳಿಗೆ 6ರಿಂದ 7 ಪರವಾನಿಗೆಗಳು ಅಗತ್ಯ. ಆದುದರಿಂದ ಈ ಬೇಹುಗಾರಿಕೆಗಾಗಿ ಅಪಾರ ಹಣ ವೆಚ್ಚ ಮಾಡಲಾಗಿದೆಯೇ ? ಅಲ್ಲದೆ, ಈ ಹಣವನ್ನು ನೀಡಿದವರು ಯಾರು? ಎಂದು ಅವರು ಪ್ರಶ್ನಿಸಿದರು. 

ಈ ಸಾಫ್ಟವೇರ್ ಅನ್ನು ಸರಕಾರಗಳಿಗೆ ಮಾತ್ರ ಮಾರಾಟ ಮಾಡಲಾಗುತ್ತಿದೆ ಎಂದು ಎನ್ಎಸ್ಒ ಹೇಳಿದೆ. ಹಾಗಾದರೆ, ದೇಶದಲ್ಲಿ 300 ಜನರ ಮೇಲೆ ಬೇಹುಗಾರಿಕೆ ನಡೆಸಲು 300 ಕೋಟಿ ರೂಪಾಯಿ ನೀಡಿ ಸಾಫ್ಟವೇರ್ ಖರೀದಿಸಿದ ಸರಕಾರ ಯಾವುದು? ಬೇಹುಗಾರಿಕೆಗೆ ಅಷ್ಟೊಂದು ಮೊತ್ತ ಹಣ ವೆಚ್ಚ ಮಾಡಲು ನಮ್ಮ ದೇಶಕ್ಕೆ ಸಾಧ್ಯವಿದೆಯೇ ಎಂದು ರಾವತ್ ಪ್ರಶ್ನಿಸಿದ್ದಾರೆ. ಜಗತ್ತಿನ 45 ದೇಶಗಳು ಪೆಗಾಸಸ್ ಅನ್ನು ಬಳಸುತ್ತಿವೆ ಎಂದು ಹೇಳುವ ಮೂಲಕ ಬಿಜೆಪಿ ನಾಯಕ ಹಾಗೂ ಕೇಂದ್ರದ ಮಾಜಿ ಸಚಿವ ರವಿಶಂಕರ್ ಪ್ರಸಾದ್ ಈ ಬೇಹುಗಾರಿಕೆಯನ್ನು ಸಮರ್ಥಿಸಿಕೊಂಡಿದ್ದಾರೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News