ಮೊದಲ ಟ್ವೆಂಟಿ-20 ಪಂದ್ಯ: ಶ್ರೀಲಂಕಾ ವಿರುದ್ಧ ಭಾರತಕ್ಕೆ ಭರ್ಜರಿ ಜಯ

Update: 2021-07-25 18:43 GMT
photo : twitter

ಕೊಲಂಬೊ: ಸೂರ್ಯಕುಮಾರ್ ಯಾದವ್(50, 34 ಎಸೆತ)ಅರ್ಧಶತಕ ಹಾಗೂ ನಾಯಕ ಶಿಖರ್ ಧವನ್ ಸಮಯೋಚಿತ ಬ್ಯಾಟಿಂಗ್, ವೇಗದ ಬೌಲರ್ ಭುವನೇಶ್ವರ ಕುಮಾರ್ (4-22) ಉತ್ತಮ ಬೌಲಿಂಗ್  ನೆರವಿನಿಂದ ಭಾರತ ಕ್ರಿಕೆಟ್ ತಂಡ ಶ್ರೀಲಂಕಾ ತಂಡವನ್ನು ಮೊದಲ ಟ್ವೆಂಟಿ-20 ಅಂತರ್ ರಾಷ್ಟ್ರೀಯ ಪಂದ್ಯದಲ್ಲಿ 38 ರನ್ ಗಳಿಂದ ಮಣಿಸಿದೆ. ಈ ಮೂಲಕ 3 ಪಂದ್ಯಗಳ ಸರಣಿಯಲ್ಲಿ 1-0 ಮುನ್ನಡೆ ಸಾಧಿಸಿದೆ.

ರವಿವಾರ ನಡೆದ ಪಂದ್ಯದಲ್ಲಿ ಟಾಸ್ ಗೆದ್ದ ಶ್ರೀಲಂಕಾ ತಂಡ  ಭಾರತವನ್ನು ಮೊದಲು ಬ್ಯಾಟಿಂಗ್ ಗೆ ಆಹ್ವಾನಿಸಿತು. ಭಾರತವು ನಿಗದಿತ 20 ಓವರ್ ಗಳಲ್ಲಿ 5 ವಿಕೆಟ್ ನಷ್ಟಕ್ಕೆ 164 ರನ್ ಗಳಿಸಿತು.

ಗೆಲ್ಲಲು ಕಠಿಣ ಗುರಿ ಬೆನ್ನಟ್ಟಿದ ಶ್ರೀಲಂಕಾ ತಂಡ 18.3 ಓವರ್ ಗಳಲ್ಲಿ ಕೇವಲ 126 ರನ್ ಗೆ ಆಲೌಟಾಯಿತು. ಆತಿಥೇಯ ಶ್ರೀಲಂಕಾದ ಪರ ಚರಿತ ಅಸಲಂಕ(44) ಗರಿಷ್ಟ ಸ್ಕೋರರ್ ಎನಿಸಿಕೊಂಡರು. ಅವಿಷ್ಕ ಫೆರ್ನಾಂಡೊ 26, ನಾಯಕ ದಸುನ್ ಶನಕ 16 ರನ್ ಗಳಿಸಿದರು. ಭುವನೇಶ್ವರ ಯಶಸ್ವಿ ಬೌಲರ್ ಎನಿಸಿಕೊಂಡರೆ ದೀಪಕ್ ಚಹಾರ್ (2-24) ಎರಡು ವಿಕೆಟ್ ಪಡೆದರು. ಭುವನೇಶ್ವರ್ ಪಂದ್ಯಶ್ರೇಷ್ಠ ಪ್ರಶಸ್ತಿ ಪಡೆದರು.

ಇದಕ್ಕೂ ಮೊದಲು ಭಾರತವು ತಾನೆದುರಿಸಿದ ಮೊದಲ ಓವರ್ ನ ಮೊದಲ ಎಸೆತದಲ್ಲೇ ವಿಕೆಟ್ ಕಳೆದುಕೊಂಡಿತು. ನಾಯಕ ಧವನ್ ರೊಂದಿಗೆ ಇನಿಂಗ್ಸ್ ಆರಂಭಿಸಿದ ಪೃಥ್ವಿ ಶಾ(0)ಖಾತೆ ತೆರೆಯು ಮೊದಲೇ ವಿಕೆಟ್ ಒಪ್ಪಿಸಿದರು. ಆಗ ಜೊತೆಯಾದ ಧವನ್ (46, 36 ಎಸೆತ, 4 ಬೌಂಡರಿ, 1 ಸಿ.) ಹಾಗೂ ಸಂಜುಸ್ಯಾಮ್ಸನ್(27, 20 ಎಸೆತ)2ನೇ ವಿಕೆಟ್ ಗೆ 51 ರನ್ ಸೇರಿಸಿ ತಂಡವನ್ನು ಆಧರಿಸಿದರು.

ಸಂಜು ಔಟಾದಾಗ ಸೂರ್ಯಕುಮಾರ್ ಅವರೊಂದಿಗೆ ಕೈಜೋಡಿಸಿದ ಧವನ್ 3ನೇ ವಿಕೆಟ್ ಗೆ 62 ರನ್ ಜೊತೆಯಾಟದಲ್ಲಿ ಪಾಲ್ಗೊಂಡರು. ಸೂರ್ಯಕುಮಾರ್ ಬರೋಬ್ಬರಿ 50 ರನ್(34 ಎಸೆತ, 5 ಬೌಂಡರಿ, 2 ಸಿಕ್ಸರ್)ಗಳಿಸಿ ಡಿಸಿಲ್ವಾಗೆ ವಿಕೆಟ್ ಒಪ್ಪಿಸಿದರು. ಇಶಾನ್ ಕಿಶನ್ ಔಟಾಗದೆ 20 ರನ್ ಗಳಿಸಿ ತಂಡದ ಮೊತ್ತವನ್ನು 164ಕ್ಕೆ ತಲುಪಿಸಿದರು.

ಶ್ರೀಲಂಕಾದ ಪರವಾಗಿ  ದುಷ್ಮಂಥಾ ಚಾಮೀರ(2-24) ಹಾಗೂ ವನಿಂದು ಹಸರಂಗ(2-28)ತಲಾ 2 ವಿಕೆಟ್ ಪಡೆದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News