ಒಲಿಂಪಿಕ್ಸ್ ಸೈಕ್ಲಿಂಗ್ ರೋಡ್‌ ರೇಸ್: ಫೇವರಿಟ್‌ಗಳಿಗೆ ಆಘಾತ ನೀಡಿದ ಪಿಎಚ್‌ಡಿ ಪದವೀಧರೆ

Update: 2021-07-26 04:22 GMT

ಟೋಕಿಯೊ : ಆಸ್ಟ್ರಿಯಾದ ಗಣಿತಶಾಸ್ತ್ರ ಪಿಎಚ್‌ಡಿ ಪದವೀಧರೆ ಕೀಸೆನ್‌ ಹೊಫೆರ್ ಟೋಕಿಯೊ ಒಲಿಂಪಿಕ್ಸ್‌ನ ಸೈಕ್ಲಿಂಗ್ ರೋಡ್‌ ರೇಸ್‌ನಲ್ಲಿ, ಫೇವರಿಟ್ ವೃತ್ತಿಪರ ಸೈಕ್ಲಿಸ್ಟ್‌ಗಳಿಗೆ ಆಘಾತ ನೀಡಿ ಚಿನ್ನದ ಪದಕ ಗೆದ್ದುಕೊಂಡು ಸುದ್ದಿಯಾಗಿದ್ದಾರೆ.

ಕ್ಯಾಲಿಫೋರ್ನಿಯಾದ ಪಾಲಿಟೆಕ್ನಿಕ್ ವಿಶ್ವವಿದ್ಯಾನಿಲಯದಲ್ಲಿ ಅನ್ವಯಿಕ ಗಣಿತಶಾಸ್ತ್ರದ ವಿಷಯದಲ್ಲಿ ಇವರು ಪಿಎಚ್‌ಡಿ ಪಡೆದಿದ್ದಾರೆ. ವಿಯೆನ್ನಾ ಹಾಗೂ ಕ್ಯಾಂಬ್ರಿಡ್ಜ್ ವಿವಿಗಳಲ್ಲೂ ಅಧ್ಯಯನ ಮಾಡಿರುವ 30 ವರ್ಷದ ಮಹಿಳೆ ನ್ಯಾಷನಲ್ ಟೈಮ್ ಟ್ರಯಲ್ ಚಾಂಪಿಯನ್ ಆಗಿ ಹೊರಹೊಮ್ಮಿದ್ದರು.

ಖ್ಯಾತ ಸೈಕ್ಲಿಂಗ್ ಪಟು ಹಾಲೆಂಡ್‌ನ ಅನ್ನೆಮಿಕ್ ವಾನ್ ವ್ಲೆಟನ್ ತಾನು ವಿಜಯದ ಗೆರೆ ದಾಟಿದಾಗ ತಾವೇ ಸ್ಪರ್ಧೆಯಲ್ಲಿ ಗೆದ್ದಿರುವುದಾಗಿ ತಪ್ಪುಕಲ್ಪನೆ ಮಾಡಿಕೊಂಡಿದ್ದರು. ಆದರೆ ಅವರು ಬೆಳ್ಳಿಗೆ ತೃಪ್ತಿಪಡಬೇಕಾಯಿತು. ಇಟಲಿಯ ಎಲಿಸಾ ಲೋಂಗೊ ಬೋರ್ಗಿನಿ ಸತತ ಎರಡನೇ ಬಾರಿಗೆ ಕಂಚಿನ ಪದಕ ಗೆದ್ದರು.

"ಇದು ನಂಬಲು ಅಸಾಧ್ಯ; ನಾನು ವಿಜಯದ ಗೆರೆ ದಾಟಿದರೂ ನನಗೆ ನಂಬಲು ಸಾಧ್ಯವಾಗಲಿಲ್ಲ" ಎಂದು ಕೀಸೆನ್‌ ಹೋಫೆರ್ ಉದ್ಗರಿಸಿದರು. "ಒಂದು ಕಿಲೋಮೀಟರ್‌ಗಿಂತ ಕಡಿಮೆ ಇದ್ದಾಗ ನಾನು ದಾಳಿಗೆ ಯೋಜಿಸಿದ್ದೆ ಹಾಗೂ ನಾನು ಮುಂಚೂಣಿಯನ್ನು ಸಾಧಿಸಿದ ಬಗ್ಗೆ ಸಂತಸವಿದೆ. ಆದರೆ ಪೆರೊಟಾನ್‌ ನಲ್ಲಿ ನಾನು ಉತ್ತಮವಾಗಿ ಸವಾರಿ ಮಾಡದಿದ್ದುದು ಕಡೆಗಣಿಸುವ ವಿಚಾರವಲ್ಲ ಎಂದು ಹೇಳಿದರು.

ಸ್ಪರ್ಧೆಯಲ್ಲಿ ತಾವೇ ಜಯ ಸಾಧಿಸಿದ್ದಾಗಿ ತಿಳಿದು ಕೈಗಳನ್ನು ಮೇಲಕ್ಕೆತ್ತಿ ಸಂಭ್ರಮಿಸಿದ್ದು ನಿರರ್ಥಕವಾಯಿತು ಎಂದು ವಾನ್ ವ್ಲೆಟೆನ್ ಹೇಳಿದರು.
ಬೆವರಿನಲ್ಲಿ ಮುಳುಗಿದ್ದ ಕೀಸೆನ್‌ ಹೋಫೆರ್, ವಿಜಯದ ಗೆರೆ ದಾಟಿದ ತಕ್ಷಣವೇ ನಂಬಲಸಾಧ್ಯ ಚಿನ್ನ ಸಾಧಿಸಿದ ಸಂಭ್ರಮದಿಂದ ಚೀರಿಕೊಂಡು ಕುಸಿದುಬಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News