ನಗರ ಮತ್ತು ಗ್ರಾಮೀಣ ಪ್ರದೇಶಗಳಲ್ಲಿ ನಿರುದ್ಯೋಗ ದರ ಏರಿಕೆ: ಸಿಎಂಐಇ

Update: 2021-07-26 16:15 GMT
ಸಾಂದರ್ಭೀಕ ಚಿತ್ರ

 ಹೊಸದಿಲ್ಲಿ,ಜು.26: ನಗರ ಪ್ರದೇಶಗಳು ಮತ್ತು ಒಳನಾಡುಗಳಲ್ಲಿ ಉದ್ಯೋಗ ನಷ್ಟದಲ್ಲಿ ಏರಿಕೆಯಾಗಿರುವುದರಿಂದ ಜು.25ಕ್ಕೆ ಕೊನೆಗೊಂಡ ವಾರದಲ್ಲಿ ಭಾರತದ ನಿರುದ್ಯೋಗ ದರವು ಶೇ.7.14ಕ್ಕೆ ಏರಿಕೆಯಾಗಿದೆ. ಏರಿಕೆಯ ಪ್ರಮಾಣ ಜು.18ಕ್ಕೆ ಅಂತ್ಯಗೊಂಡಿದ್ದ ಹಿಂದಿನ ವಾರದಲ್ಲಿ ಶೇ.5.98ರಷ್ಟಿತ್ತು ಎಂದು ಸೆಂಟರ್ ಫಾರ್ ಮಾನಿಟರಿಂಗ್ ಇಂಡಿಯನ್ ಇಕಾನಮಿ (ಸಿಎಂಐಇ) ಸೋಮವಾರ ತನ್ನ ವರದಿಯಲ್ಲಿ ತಿಳಿಸಿದೆ.

  ಆದರೆ ಮಾಸಿಕ ಆಧಾರದಲ್ಲಿ ನಿರುದ್ಯೋಗ ದರದಲ್ಲಿ ಸುಧಾರಣೆ ಕಂಡುಬಂದಿದ್ದು, ಜೂನ್ ನಲ್ಲಿದ್ದ ಸುಮಾರು ಶೇ.10ಕ್ಕಿಂತ ಕೆಳಗಿಳಿದಿದೆ. ಕೋವಿಡ್ ಎರಡನೇ ಅಲೆಯ ತೀವ್ರತೆ ಕಡಿಮೆಯಾಗುವುದರೊಂದಿಗೆ ಆರ್ಥಿಕ ಚಟುವಟಿಕೆಗಳು ವೇಗವನ್ನು ಪಡೆದುಕೊಂಡಿದ್ದು ಇದಕ್ಕೆ ಕಾರಣ ಎಂದು ವರದಿಯು ಹೇಳಿದೆ.
ಹೀಗಿದ್ದರೂ,ಸಾಂಕ್ರಾಮಿಕದ ಹಿನ್ನೆಲೆಯಲ್ಲಿ ಹೇರಲಾಗಿದ್ದ ನಿರ್ಬಂಧಗಳ ಪರಿಣಾಮಗಳು ಪ್ರಮುಖ ಕಾರಣಗಳಾಗಿದ್ದ ನಿರುದ್ಯೋಗ ಸಮಸ್ಯೆಯು ಹೆಚ್ಚಿನ ಮಟ್ಟದಲ್ಲಿಯೇ ಉಳಿದುಕೊಂಡಿದೆ ಎಂದು ತಜ್ಞರು ಹೇಳಿದ್ದಾರೆ. 

ವ್ಯಾಪಕವಾಗಿ ಉಲ್ಲೇಖಿತ ಮಾನದಂಡವಾಗಿರುವ ಸಿಎಂಐಇಯ ನಿರುದ್ಯೋಗ ದತ್ತಾಂಶಗಳನ್ನು ಅಧಿಕೃತವೆಂದು ಪರಿಗಣಿಸಲಾಗಿಲ್ಲವಾದರೂ ದೇಶದಲ್ಲಿ ಇಂತಹ ಉದ್ಯೋಗ/ನಿರುದ್ಯೋಗದ ದತ್ತಾಂಶವನ್ನು ಅಧಿಕೃತವಾಗಿ ಪ್ರಕಟಿಸಲಾಗುತ್ತಿಲ್ಲ.
ತನ್ನದೇ ಆದ ಮಾನದಂಡಗಳ ಮೂಲಕ ಕಾರ್ಮಿಕ ಮಾರುಕಟ್ಟೆಯ ಮೇಲೆ ನಿಗಾಯಿರಿಸುವ ಸಿಎಂಐಇ,ನಗರ ನಿರುದ್ಯೋಗ ದರವು ಶೇ.8.01ರ ಪ್ರಮಾಣದಲ್ಲಿ ಗ್ರಾಮೀಣ ಪ್ರದೇಶಕ್ಕಿಂತ ಹೆಚ್ಚಿನ ಮಟ್ಟದಲ್ಲಿ ಮುಂದುವರಿದಿದೆ ಮತ್ತು ಇದು ಹಿಂದಿನ ವಾರದಲ್ಲಿ ಶೇ.7.94ರಷ್ಟಿತ್ತು. ಇದೇ ವೇಳೆ ಗ್ರಾಮೀಣ ಪ್ರದೇಶದಲ್ಲಿ ನಿರುದ್ಯೊಗ ದರವು ಶೇ.6.75ರಷ್ಟಿದ್ದು, ಹಿಂದಿನ ವಾರದ ಶೇ.5.1ಕ್ಕೆ ಹೋಲಿಸಿದರೆ ತೀವ್ರ ಏರಿಕೆಯನ್ನು ಕಂಡಿದೆ ಎಂದು ವರದಿಯಲ್ಲಿ ತಿಳಿಸಿದೆ.

ಸಿಎಂಐಇ ವರದಿಯು ಕೋವಿಡ್ ಎರಡನೇ ಅಲೆಯ ಪರಿಣಾಮವು ಒಳನಾಡು ಪ್ರದೇಶಗಳಲ್ಲಿ ಗಾಢವಾಗಿದೆ ಎನ್ನುವುದನ್ನು ತೋರಿಸುತ್ತಿದೆ ಎಂದು ಕ್ರಿಸಿಲ್ ಲಿ.ನ ಆರ್ಥಿಕ ತಜ್ಞ ಗೌತಮ ಶಾಹಿ ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News