ಮಾಧ್ಯಮದೆದುರು ಬಹಿರಂಗ ಚರ್ಚೆಗೆ ಬನ್ನಿ: ಶಾಸಕ ಹರೀಶ್ ಪೂಂಜಾರಿಗೆ ವಸಂತ ಬಂಗೇರ ಸವಾಲು

Update: 2021-07-27 07:56 GMT

ಬೆಳ್ತಂಗಡಿ, ಜು.27: "ಶಾಸಕ ಹರೀಶ್ ಪೂಂಜಾ ಕಳೆದ ಮೂರು ವರ್ಷಗಳ ಅವಧಿಯಲ್ಲಿ ಬೆಳ್ತಂಗಡಿ ತಾಲೂಕಿಗೆ 833.69 ಕೋಟಿ ರೂ. ಅನುದಾನ ತಂದಿರುವುದಾಗಿ ಹೇಳಿಕೊಂಡಿದ್ದಾರೆ. ಆದರೆ  ಅವರು ಹೇಳಿರುವುದರಲ್ಲಿ ಕೇವಲ 455 ಕೋಟಿ ರೂ. ಮಾತ್ರ ಅವರ ಅವಧಿಯಲ್ಲಿ ಬಂದಿರುವ ಅನುದಾನವಾಗಿದ್ದು, 168.17 ಕೋಟಿ ರೂ. ಹಿಂದಿನ ಅವಧಿಯಲ್ಲಿ ಬಂದ ಅನುದಾನವನ್ನು ಹಾಗೂ 200 ಕೋಟಿ ರೂ. ಇಲಾಖೆಗಳಿಗೆ ಬಂದಿರುವ ರೆಗ್ಯುಲರ್ ಅನುದಾನ ಜಿಲ್ಲಾ ಪಂಚಾಯತ್, ತಾಲೂಕು ಪಂಚಾಯತ್, ಉದ್ಯೋಗ ಖಾತರಿ, ವಿಧಾನ ಪರಿಷತ್ ಸದಸ್ಯರುಗಳ ಅನುದಾನವಾಗಿದೆ. ಈ ಬಗ್ಗೆ ಅಧಿಕಾರಿಗಳು ಹಾಗೂ ಮಾಧ್ಯಮದವರ ಮುಂದೆ ಬಹಿರಂಗ ಚರ್ಚೆಗೆ ಬನ್ನಿ" ಎಂದು ಶಾಸಕ ಪೂಂಜಾರಿಗೆ ಮಾಜಿ ಶಾಸಕ ಕೆ.ವಸಂತ ಬಂಗೇರ ಸವಾಲು ಹಾಕಿದ್ದಾರೆ.

ಬೆಳ್ತಂಗಡಿಯಲ್ಲಿ ಕರೆದಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ವಸಂತ ಬಂಗೇರ, ವಿವಿಧ ಇಲಾಖೆಗಳ ಮಾಹಿತಿಗಳನ್ನು, ದಾಖಲೆಗಳನ್ನು ಮುಂದಿಟ್ಟು ಮಾತನಾಡುತ್ತಿದ್ದರು.

 ಇತ್ತೀಚೆಗೆ ಶಾಸಕ ಹರೀಶ್ ಪೂಂಜಾ 3 ವರ್ಷಗಳಲ್ಲಿ ಬೆಳ್ತಂಗಡಿ ಕ್ಷೇತ್ರಕ್ಕೆ 833.69 ಕೋ.ರೂ. ಅನುದಾನ ತಂದಿರುವುದಾಗಿ ಹೇಳಿದ್ದು, ಆ ಬಗ್ಗೆ ದಾಖಲೆ ನೀಡಿದರೆ ನಾನು ಸಾರ್ವಜನಿಕವಾಗಿ ಅವರನ್ನು ಅಭಿನಂದಿಸುವುದಾಗಿ ಹೇಳಿದ್ದೆ. ಇದೀಗ ಅವರು ಪತ್ರಿಕೆಯಲ್ಲಿ ಪ್ರಕಟಿಸಿದ 20 ಇಲಾಖೆಗಳ ಮುಖ್ಯಸ್ಥರನ್ನು ಸಂಪರ್ಕಿಸಿ ದಾಖಲೆಗಳನ್ನು ಸಂಗ್ರಹಿಸಿದ್ದು ಈ ಪೈಕಿ 368.5 ಕೋಟಿ ರೂ. ವ್ಯತ್ಯಾಸ ನೀಡಿದ್ದು ಜನತೆಗೆ ತಪ್ಪಾದ ಲೆಕ್ಕ ಕೊಟ್ಟಿದ್ದಾರೆ ಎಂದು ಬಂಗೇರ ಆರೋಪಿಸಿದ್ದಾರೆ.

ಶಾಸಕರು ಪ್ರಕಟಿಸಿದ 20 ಇಲಾಖೆಗಳ ಲೆಕ್ಕಗಳನ್ನು ಪರಿಶೀಲಿಸಿದಾಗ ಅದರಲ್ಲಿ ಕೆಲವು ಕಾಮಗಾರಿಗಳು ನನ್ನ ಅವಧಿಯಲ್ಲಿ ಮಂಜೂರಾದುದು ಸಹ ಸೇರಿವೆ. ಅಲ್ಲದೆ ಕೆಲ ಲೆಕ್ಕವನ್ನು ಎರಡೆರಡು ಇಲಾಖೆಗಳ ಕಾಮಗಾರಿಗಳ ಪಟ್ಟಿಯಲ್ಲಿ ತೋರಿಸಿ ಜನತೆಗೆ ತಪ್ಪು ಮಾಹಿತಿ ನೀಡಿದ್ದಾರೆ. ಪಟ್ಟಣ ಪಂಚಾಯತ್‌ಗೆ ನನ್ನ ಶಾಸಕತ್ವದ ಅವಧಿಯಲ್ಲಿ ಮಂಜೂರಾಗಿ ಬಂದ 10 ಕೋಟಿ ರೂ. ಅನುದಾನವನ್ನು  ಕೆ.ಆರ್.ಐ.ಡಿ.ಎಲ್‌.ನ ಲೆಕ್ಕದಲ್ಲೂ ತೋರಿಸಿರುತ್ತಾರೆ. ಸಮಾಜ ಕಲ್ಯಾಣ ಇಲಾಖೆಗೆ ನನ್ನ ಶಾಸಕತ್ವದ ಅವಧಿಯಲ್ಲಿ ಮಂಜೂರಾದ 5 ಕೋಟಿ ರೂ. ಅನುದಾನವನ್ನು ಕೆ.ಆರ್.ಐ.ಡಿ.ಎಲ್‌.ನ ಲೆಕ್ಕದಲ್ಲೂ ತೋರಿಸಿರುತ್ತಾರೆ. ಕಂದಾಯ ಇಲಾಖೆಗೆ ಈ ಬಾರಿ ಮಂಜೂರಾದ 35 ಲಕ್ಷ ರೂ. ಅನುದಾನವನ್ನು ಎರಡೆರಡು ಬಾರಿ ಲೆಕ್ಕದಲ್ಲಿ ತೋರಿಸಿರುತ್ತಾರೆ. ಅಲ್ಲದೆ ಶಾಸಕರು ಕೊಟ್ಟಿರುವ 20 ಇಲಾಖೆಗಳ ಲೆಕ್ಕದಲ್ಲಿ ಹೆಚ್ಚಿನ ಅನುದಾನಗಳು ಶಾಸಕರ ವಿಶೇಷ ಅನುದಾನಗಳಾಗಿರುವುದಿಲ್ಲ. ಅವುಗಳು ವಾರ್ಷಿಕವಾಗಿ ಇಲಾಖೆಗಳಿಗೆ ಸರಕಾರದಿಂದ ಬರುವಂತಹ ನಿಯತ ಅನುದಾನಗಳಾಗಿರುತ್ತವೆ. ಅದೇರೀತಿ ಶಾಸಕರು ಇಲಾಖಾವಾರು ಲೆಕ್ಕದಲ್ಲಿ ಕೆಲ ಇಲಾಖೆಗಳಲ್ಲಿ ಹೊರಗುತ್ತಿಗೆ ನೌಕರರಾಗಿ ಕೆಲಸ ಮಾಡುತ್ತಿರುವ ಸಿಬ್ಬಂದಿಯ ಸಂಬಳ , ಗ್ರಾಮ ಪಂಚಾಯತ್‌ಗಳು ಅನುಷ್ಠಾನಗೊಳಿಸಿದ ಮಹಾತ್ಮ ಗಾಂಧಿ ರಾಷ್ಟ್ರೀಯ ಉದ್ಯೋಗ ಖಾತರಿ ಯೋಜನೆಯಡಿ ನೀಡಲಾಗಿರುವ ಕೂಲಿ ಪಾವತಿಯ ಲೆಕ್ಕ, ಕೆಲವೊಂದು ಇಲಾಖೆಗಳಲ್ಲಿ ವ್ಯಯಿಸಿದ ವಾಹನ ಭತ್ತೆ, ಸಭೆ ಸಂದರ್ಭದಲ್ಲಿ ತರಿಸಿದ ಊಟ, ಉಪಹಾರದ ಖರ್ಚುವೆಚ್ಚಗಳು ಸಹ ಸೇರಿವೆ. ತೋಟಗಾರಿಕೆ, ಕೃಷಿ ಇಲಾಖೆಯಲ್ಲಿ ದುಡಿಯುತ್ತಿರುವ ಹೊರಗುತ್ತಿಗೆ ನೌಕರರ ಸಂಬಳ ಕೂಡ ಸೇರಿವೆ. ಅಲ್ಲದೆ ವಿಶೇಷವಾಗಿ ರೈತರಿಗೆ ತರಬೇತಿ ನೀಡಿದ ವೇಳೆ ಉಪಹಾರ, ರೈತರ ಅಧ್ಯಯನ ಪ್ರವಾಸದ ಖರ್ಚುವೆಚ್ಚ ಕೂಡ ಸೇರಿವೆ. ಇದು ಶಾಸಕರು ತಂದಿರುವ ವಿಶೇಷ ಅನುದಾನವೇ ಎಂದು ವಸಂತ ಬಂಗೇರ ಪ್ರಶ್ನಿಸಿದ್ದಾರೆ.

ಈ ಎಲ್ಲ ಇಲಾಖೆಗಳಿಗೆ ಸಂಬಂಧಿಸಿದ ಸಮಗ್ರ ದಾಖಲೆಗಳು ತನ್ನ ಕಚೇರಿಯಲ್ಲಿ ಇದ್ದು, ಶಾಸಕ ಹರೀಶ್ ಪೂಂಜಾ ಅಪೇಕ್ಷಿಸಿದಲ್ಲಿ ಪ್ರತಿಗಳನ್ನು ಅವರ ಕಚೇರಿಗೆ ತಲುಪಿಸಲು ಸಿದ್ದ ಎಂದರು.

ಶಾಸಕರು ಕೊಟ್ಟ ಲೆಕ್ಕದಲ್ಲಿ ವಿಧಾನ ಪರಿಷತ್ ಮಾಜಿ ಸದಸ್ಯರಾದ ಐವನ್ ಡಿಸೋಜ, ಹಾಲಿ ವಿಧಾನ ಪರಿಷತ್ ಸದಸ್ಯ, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರೂ ಆಗಿರುವ ಕೆ.ಹರೀಶ್‌ ಕುಮಾರ್ ರವರ ಅನುದಾನಗಳು ಕೂಡ ಸೇರಿವೆ. ಲೆಕ್ಕ ಹೇಳುವ ನೆಪದಲ್ಲಿ ಶಾಸಕ ಹರೀಶ್ ಪೂಂಜಾ ತಾಲೂಕಿನ ಜನರಿಗೆ ಸುಳ್ಳು ಹೇಳಿದ್ದಾರೆ ಎಂಬುದು ಇದರಿಂದ ಸ್ಪಷ್ಟವಾಗುತ್ತಿದೆ ಎಂದು ಹೇಳಿದರು.

 ಶಾಸಕ ಹರೀಶ್ ಪೂಂಜಾರನ್ನು ಬಹಿರಂಗವಾಗಿ ಚರ್ಚೆಗೆ ಆಹ್ವಾನಿಸುತ್ತಿದ್ದೇನೆ. ಒಂದು ವೇಳೆ ಅವರು 833.69  ಕೋ.ರೂ. ಅವರೇ ತರಿಸಿದ್ದಾರೆ ಎನ್ನುವ ಬಗ್ಗೆ ದಾಖಲೆಗಳನ್ನು ನೀಡಿದಲ್ಲಿ ಅವರನ್ನು ತಾಲೂಕಿನ ಜನರ ಪರವಾಗಿ ಅಲ್ಲಿಯೇ ಅಭಿನಂದಿಸಲು ನಾನು ಬದ್ಧನಾಗಿರುತ್ತೇನೆ ಎಂದು ಅವರು ಸವಾಲು ಹಾಕಿದರು.

ಪಕ್ಷದ ವಕ್ತಾರ, ನ್ಯಾಯವಾದಿ ಮನೋಹರ್ ಕುಮಾರ್ ಇಳಂತಿಲ ಮತ್ತು ಜಿಪಂ ಮಾಜಿ ಸದಸ್ಯ ಶೇಖರ್ ಕುಕ್ಕೇಡಿ ಅವರು ಇಲಖಾವಾರು ವಿವರ ನೀಡಿದರು.

ಸುದ್ದಿಗೋಷ್ಠಿಯಲ್ಲಿ ಬ್ಲಾಕ್ ಕಾಂಗ್ರೆಸ್  ಅಧ್ಯಕ್ಷರುಗಳಾದ ಶೈಲೇಶ್ ಕುಮಾರ್ ಕುರ್ತೋಡಿ ಮತ್ತು ರಂಜನ್ ಜಿ. ಗೌಡ, ಕೆಪಿಸಿಸಿ ಕಾರ್ಮಿಕ ಘಟಕದ ರಾಜ್ಯ ಕಾರ್ಯದರ್ಶಿ ಅಬ್ದುಲ್ ರಹಿಮಾನ್ ಪಡ್ಪು, ತಾಪಂ ಮಾಜಿ ಅಧ್ಯಕ್ಷೆ ದಿವ್ಯಜ್ಯೋತಿ, ತಾಪಂ ಮಾಜಿ ಸದಸ್ಯರುಗಳಾದ ಓಬಯ್ಯ, ಜಯರಾಮ ಆಲಂಗಾರು, ಪ್ರವೀಣ್ , ಜಯಶೀಲಾ ಮತ್ತು ಸುಶೀಲಾ, ಯುವ ಕಾಂಗ್ರೆಸ್ ಮಾಜಿ ಅಧ್ಯಕ್ಷ ಅಭಿನಂದನ್ ಹರೀಶ್, ಕಿಸಾನ್ ಕಾಂಗ್ರೆಸ್ ಅಧ್ಯಕ್ಷ ಸತೀಶ್, ಸಾಮಾಜಿಕ ಜಾಲತಾಣ ಸಂಚಾಲಕ ಸಂದೀಪ್ ಎಸ್.ಎನ್. ಅರ್ವ ಮೊದಲಾದವರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News