ವಿರೋಧ ಪಕ್ಷವಾಗಿ ಕಾಂಗ್ರೆಸ್ ಸಮರ್ಥ ನಿರ್ವಹಣೆ: ಹರೀಶ್ ಕುಮಾರ್

Update: 2021-07-27 08:47 GMT

ಮಂಗಳೂರು, ಜು.27: ರಾಜ್ಯದಲ್ಲಿ ಬಿಜೆಪಿ ಸರಕಾರವು ಭ್ರಷ್ಟಾಚಾರದಲ್ಲಿ ಮುಳುಗಿ ಮುಖ್ಯಮಂತ್ರಿಯನ್ನು ಬದಲಾಯಿಸಿ ಹೊಸಬರ ನೇಮಕ ಕಾರ್ಯದಲ್ಲಿ ತೊಡಗಿದೆ. ಆದರೆ ಸದ್ಯದ ಸ್ಥಿತಿಯನ್ನು ಗಮನಿಸುವಾಗ ಸರಕಾರವನ್ನೇ ಬದಲಾಯಿಸಬೇಕಾದ ಅನಿವಾರ್ಯತೆ ಇದೆ. ಆರ್ಥಿಕತೆ ಸಂಪೂರ್ಣ ಕುಸಿದಿದ್ದು, ಅಭಿವೃದ್ಧಿಯು ಮರೀಚಿಕೆಯಾಗಿದೆ. ಈ ಮಧ್ಯೆ ಕೋವಿಡ್ ಸಂದರ್ಭ ಕಾಂಗ್ರೆಸ್ ಪಕ್ಷವು ತನ್ನ ಜವಾಬ್ದಾರಿಯನ್ನು ಸಮರ್ಥವಾಗಿ ನಿಭಾಯಿಸಿದ ತೃಪ್ತಿ ಇದೆ ಎಂದು ದ.ಕ. ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಕೆ.ಹರೀಶ್ ಕುಮಾರ್ ಹೇಳಿದ್ದಾರೆ.

ನಗರದ ಮಲ್ಲಿಕಟ್ಟೆಯ ಕಾಂಗ್ರೆಸ್ ಭವನದಲ್ಲಿ ಮಂಗಳವಾರ ನಡೆದ ಜಿಲ್ಲಾ ಕಾಂಗ್ರೆಸ್ ಸಮಿತಿಯ ಮಾಸಿಕ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡುತ್ತಿದ್ದರು.

ತೈಲ ಬೆಲೆ ಏರಿಕೆ ಸಹಿತ ಅನೇಕ ಜನ ವಿರೋಧಿ ನೀತಿಗಳ ವಿರುದ್ಧ ಕಾಂಗ್ರೆಸ್ ಹೋರಾಡಿದೆ. ಡಿ.ಕೆ.ಶಿವಕುಮಾರ್ ಹಾಗೂ ಸಿದ್ದರಾಮಯ್ಯರ ನೇತೃತ್ವದಲ್ಲಿ ಕಾಂಗ್ರೆಸ್ ಮತ್ತೆ ಅಧಿಕಾರ ಹಿಡಿಯುವಲ್ಲಿ ಸಂಶಯವಿಲ್ಲ. ಮುಂದಿನ ತಾಪಂ ಹಾಗೂ ಜಿಪಂ ಚುನಾವಣೆಗೆ ಸಜ್ಜುಗೊಳ್ಳಲು ಜಿಲ್ಲಾ ಹಾಗೂ ಬ್ಲಾಕ್ ಸಂಯೋಜಕರನ್ನು ನೇಮಿಸಲಾಗಿದೆ. ಮತದಾರರ ಪಟ್ಟಿಗೆ ಹೆಸರು ಸೇರ್ಪಡೆ ಹಾಗೂ ಸಹಾಯ ಹಸ್ತ ಕಾರ್ಯಕ್ರಮ ಸಮರ್ಪಕವಾಗಿ ನಿರ್ವಹಿಸುವಂತೆ ಹರೀಶ್ ಕುಮಾರ್ ಸಂಯೋಜಕರಿಗೆ ಸೂಚನೆ ನೀಡಿದರು.

ಈ ಸಂದರ್ಭ ಜಿಲ್ಲಾ ಕಾಂಗ್ರೆಸ್ ನಾಯಕರಾದ ಸದಾನಂದ ಪೂಂಜಾ, ಸುರೇಶ್ ಶೆಟ್ಟಿ, ಕೆ.ಎಸ್.ದೇವರಾಜ್, ಶರೀಫ್ ಕೂಳೂರು, ಇಸ್ಮಾಯೀಲ್, ಉಮ್ಮರ್ ಫಜೀರ್, ಕೆ.ಎಸ್. ಅಮೀರ್ ತುಂಬೆ, ವಿಶ್ವನಾಥ ಪೂಜಾರಿ ಬೆಳಂದೂರು, ಸುಧಾಕರ್ ಅವರಿಗೆ ಶ್ರದ್ಧಾಂಜಲಿ ಸಲ್ಲಿಸಲಾಯಿತು.

ವೇದಿಕೆಯಲ್ಲಿ ಮಾಜಿ ಸಚಿವರಾದ ಬಿ.ರಮಾನಾಥ ರೈ, ಅಭಯಚಂದ್ರ ಜೈನ್, ಮಾಜಿ ವಿಧಾನ ಪರಿಷತ್ ಸದಸ್ಯ ಐವನ್ ಡಿಸೋಜ, ಮಾಜಿ ಶಾಸಕಿ ಶಕುಂತಳಾ ಶೆಟ್ಟಿ, ಪಕ್ಷದ ನಾಯಕರಾದ ಪಿ.ವಿ ಮೋಹನ್, ಶಶಿಧರ್ ಹೆಗ್ಡೆ, ಮಿಥುನ್ ರೈ, ಸದಾಶಿವ್ ಉಳ್ಳಾಲ್, ಶಾಹುಲ್ ಹಮೀದ್, ಶಾಲೆಟ್ ಪಿಂಟೋ, ಲುಕ್ಮಾನ್ ಬಂಟ್ವಾಳ್ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News