ಶಕ್ತಿ ವಿದ್ಯಾ ಸಂಸ್ಥೆಯಲ್ಲಿ ಮೂರು ದಿನದ ಬೋಧನಾ ಕಾರ್ಯಾಗಾರಕ್ಕೆ ಚಾಲನೆ

Update: 2021-07-27 13:18 GMT

ಮಂಗಳೂರು, ಜು.27: ಶಕ್ತಿನಗರದ ಶಕ್ತಿ ವಿದ್ಯಾ ಸಂಸ್ಥೆಯ ರೇಷ್ಮಾ ಮೆಮೋರಿಯಲ್ ಆಡಿಟೋರಿಯಮ್‌ನಲ್ಲಿ ಮೂರು ದಿನಗಳ ಕಾಲ ಶಕ್ತಿ ವಿದ್ಯಾ ಸಂಸ್ಥೆಯ ಅಧ್ಯಾಪಕರಿಗೆ ಆಯೋಜಿಸಲಾದ ಬೋಧನಾ ಕಾರ್ಯಾಗಾರಕ್ಕೆ ಮಂಗಳೂರಿನ ಕೆಎಂಸಿ ವೈದ್ಯಕೀಯ ಕಾಲೇಜಿನ ಹೆಚ್ಚುವರಿ ಡೀನ್ ಹಾಗೂ ಸಮುದಾಯ ಔಷಧ ವಿಭಾಗದ ಪ್ರಾಧ್ಯಾಪಕ ಡಾ. ಬಿ.ಉನ್ನಿಕೃಷ್ಣನ್ ದೀಪ ಬೆಳಗಿಸುವುದರ ಮೂಲಕ ಚಾಲನೆ ನೀಡಿದರು.

ನಂತರ ಮಾತನಾಡಿದ ಅವರು, ಶಾಲೆಯು ಪ್ರಾರಂಭವಾಗಬೇಕು. ಅಲ್ಲಿ ಶಿಕ್ಷಕ ಮತ್ತು ವಿದ್ಯಾರ್ಥಿ ಒಟ್ಟಿಗೆ ಇದ್ದಾಗ ಮಾತ್ರ ಬೋಧನೆ ಪರಿಣಾಮಕಾರಿಯಾಗಲು ಸಾಧ್ಯ. ಮಗು ವೈಯಕ್ತಿಕ ಸಂವಹನ ಕೌಶಲ್ಯ ಮತ್ತು ಲವಲವಿಕೆಯನ್ನು ಮನೆಯಲ್ಲಿ ಅನುಭವಿಸಲು ಸಾಧ್ಯವಿಲ್ಲ. ಅದು ಶಾಲೆಯಲ್ಲಿ ಮಾತ್ರ ಅನುಭವಿಸಲು ಸಾಧ್ಯವಿದೆ ಎಂದರು.

ಪ್ರಸಕ್ತ ದಿನಮಾನಗಳಲ್ಲಿ ಮಗುವನ್ನು ತಂತ್ರಜ್ಞಾನಕ್ಕೆ ಅಂಟಿಸಲಾಗಿದೆ ಎಂಬುದರಲ್ಲಿ ಸಂದೇಹವಿಲ್ಲ. ಆದರೆ ಆನ್‌ಲೈನ್ ಬೋಧನೆಯು ಕೇವಲ ಆನ್‌ಲೈನ್‌ಗೆ ಮಾತ್ರ ಸೀಮಿತವಾಗಿದೆ. ಇದರಿಂದ ಮಗುವಿನ ದೈಹಿಕ, ಸಾಮಾಜಿಕ ಮತ್ತು ಮಾನಸಿಕ ಆರೋಗ್ಯದ ಮೇಲೆ ಪರಿಣಾಮ ಬೀರುತ್ತಿದೆ ಎಂದು ಅವರು ಹೇಳಿದರು.

ಮಾಸ್ಕ್ ಧರಿಸುವುದರಿಂದ ನಮ್ಮನ್ನು ರಕ್ಷಣೆ ಮಾಡುವುದರ ಜೊತೆಗೆ ಇತರರನ್ನು ರಕ್ಷಿಸಬಹುದು. ಲಸಿಕೆಯನ್ನು ಪಡೆಯುವುದು ಸಹ ಇತರರನ್ನು ರಕ್ಷಿಸಲು ಅನುಕೂಲವಾಗುತ್ತದೆ. ಲಸಿಕೆ ಪಡೆಯುವುದರಿಂದ ಕೋವಿಡ್ ಬರುವುದನ್ನು ತಡೆಯಲಾಗದಿದ್ದರೂ, ಅದರ ತೀವ್ರತೆಯನ್ನು ನಿಯಂತ್ರಿಸುವುದರ ಜೊತೆಗೆ ಆಸ್ಪತ್ರೆಗೆ ದಾಖಲಾಗುವುದನ್ನು ತಡೆಯಬಹುದು ಎಂದರು.

ಮಕ್ಕಳಿಗೆ ಸೋಂಕು ತಗುಲಿದ್ದರೂ ಯಾವುದೇ ರೋಗ ಲಕ್ಷಣಗಳು ಕಾಣದಿರಬಹುದು. ಶಾಲೆಯಲ್ಲಿ ಕೋವಿಡ್ ಮಾರ್ಗಸೂಚಿಯನ್ನು ಕಡ್ಡಾಯವಾಗಿ ಪಾಲನೆ ಮಾಡಬೇಕು. ಇದರಿಂದ ಭೌತಿಕ ತರಗತಿಗೆ ಸರಕಾರ ಅನುಮತಿ ನೀಡಿದಾಗ ಶಾಲೆಯನ್ನು ಯಶಸ್ವಿಯಾಗಿ ನಡೆಸಬಹುದು. ಈ ಹಿನ್ನೆಲೆಯಲ್ಲಿ ಶಿಕ್ಷಕರು ಕೋವಿಡ್ ಮಾರ್ಗ ಸೂಚಿಯನ್ನು ಕಟ್ಟುನಿಟ್ಟಾಗಿ ಪಾಲನೆ ಮಾಡಿದಾಗ, ಮಗು ಅದನ್ನು ಪಾಲನೆ ಮಾಡುವುದರ ಜೊತೆಗೆ ಮನೆಯಲ್ಲಿ ಪೋಷಕರು ಪಾಲನೆ ಮಾಡುವ ಹಾಗೆ ಮಾಡುತ್ತದೆ. ಇಲ್ಲಿ ಶಿಕ್ಷಕರ ಪಾತ್ರ ಮಹತ್ತರವಾಗಿದೆ ಎಂದು ಅವರು ತಿಳಿಸಿದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಶಕ್ತಿ ಪಪೂ ಕಾಲೇಜಿನ ಪ್ರಾಂಶುಪಾಲ ಪ್ರೊ. ಟಿ. ರಾಜಾರಾಮ್ ರಾವ್, ಶಿಕ್ಷಕರ ತರಬೇತಿಯು ಶಿಕ್ಷಕರನ್ನು ಹೊಸ ವಿಧಾನಕ್ಕೆ ಕರೆದು ಹೋಗುವ ಉತ್ತಮ ವಿಧಾನವಾಗಿದೆ. ಶಿಕ್ಷಕನು ಸ್ನೇಹಿತನಾಗಿ, ಮಾರ್ಗದರ್ಶಕನಾಗಿ ಮತ್ತು ಕೆಲವೊಮ್ಮೆ ಪೋಷಕನಾಗಿ ತಮ್ಮ ಜವಬ್ದಾರಿಯನ್ನು ನಿರ್ವಹಿಸಬೇಕಾಗುತ್ತದೆ. ಇದಕ್ಕಾಗಿ ನಾವು ನಮ್ಮನ್ನು ಯಾವಾಗಲೂ ಉನ್ನತೀಕರಿಸುವ ಅವಶ್ಯಕತೆಯಿದೆ ಎಂದು ಹೇಳಿದರು.

ಕಾಲ ಕಾಲಕ್ಕೆ ನಾವು ಹೊಸತನವನ್ನು ತಂತ್ರಜ್ಞಾನ ಮಾಹಿತಿಯೊಂದಿಗೆ ವಿದ್ಯಾರ್ಥಿಗಳಿಗೆ ನೀಡಬೇಕು. ವಿದ್ಯಾರ್ಥಿಗಳ ಆಸಕ್ತಿಯನ್ನು ಮರಳಿ ತರುವುದು ಹಾಗೂ ಕಲಿಕೆಯನ್ನು ಉತ್ತೇಜಿಸುವ ಹೊಸ ಬೋಧನಾ ತಂತ್ರವನ್ನು ಕಲಿಸಲು ಇಂತಹ ತರಬೇತಿ ಕಾರ್ಯಾಗಾರವನ್ನು ಆಯೋಜಿಸಲಾಗಿದೆ ಎಂದು ಅವರು ಹೇಳಿದರು.

ಕಾರ್ಯಗಾರವನ್ನು ಅಭಿಯಾನಂ ಸಂಸ್ಥೆಯ ಸಹಯೋಗದೊಂದಿಗೆ ಆಯೋಜಿಸಲಾಯಿತು. ಸಂಸ್ಥೆಯ ನಿರ್ದೇಶಕ ಡಾ.ಶಿಕಾರಿಪುರ ಕೃಷ್ಣಮೂರ್ತಿ, ಪರಮೇಶ್ವರ ಹೆಗ್ಡೆ, ಪುಷ್ಪರಾಜ್ ಮತ್ತು ವೀಣಾ ಶ್ರೀನಿವಾಸ ಸಂಪನ್ಮೂಲ ವ್ಯಕ್ತಿಗಳಾಗಿ ಉಪಸ್ಥಿತರಿದ್ದರು.

ಈ ಸಂದರ್ಭದಲ್ಲಿ ವೇದಿಕೆಯಲ್ಲಿ ಅಭಿಯಾನಂ ನಿರ್ದೇಶಕ ಡಾ.ಶಿಕಾರಿಪುರ ಕೃಷ್ಣಮೂರ್ತಿ ಶಕ್ತಿ ವಿದ್ಯಾ ಸಂಸ್ಥೆಯ ಆಡಳಿತಾಧಿಕಾರಿ ಡಾ.ಕೆ.ಸಿ ನಾಕ್, ಪ್ರಧಾನ ಸಲಹೆಗಾರ ರಮೇಶ್ ಕೆ., ಶಕ್ತಿ ರೆಸಿಡೆನ್ಶಿಯಲ್ ಶಾಲೆಯ ಪ್ರಾಂಶುಪಾಲೆ ವಿದ್ಯಾ ಕಾಮತ್ ಜಿ., ಶಕ್ತಿ ಪೂರ್ವ ಪ್ರಾಥಮಿಕ ಶಾಲೆಯ ಸಂಚಾಲಕಿ ನೀಮಾ ಸಕ್ಸೇನಾ ಉಪಸ್ಥಿತರಿದ್ದರು.

ಸಂಸ್ಥೆಯ ಅಭಿವೃದ್ಧಿ ಅಧಿಕಾರಿ ಪ್ರಖ್ಯಾತ್ ರೈ ಸ್ವಾಗತಿಸಿ, ಆಂಗ್ಲ ಉಪನ್ಯಾಸಕಿ ಹರ್ಷಿತಾ ನಿರೂಪಿಸಿ, ವಂದಿಸಿದರು. ಕಾರ್ಯಕ್ರಮದಲ್ಲಿ ಸಂಸ್ಥೆಯ ಎಲ್ಲ ಬೋಧಕ ಮತ್ತು ಬೋಧಕೇತರ ಸಿಬ್ಬಂದಿ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News