ಮಂಗಳೂರು: ಎರಡು ಕೋಟಿ ರೂ. ಮೌಲ್ಯದ ಅಡಿಕೆಯೊಂದಿಗೆ ಲಾರಿ ಸಹಿತ ಚಾಲಕರು ಪರಾರಿ

Update: 2021-07-27 14:50 GMT

ಮಂಗಳೂರು, ಜು.27: ನಗರದಿಂದ ಗುಜರಾತ್‌ನ ರಾಜ್‌ಕೋಟ್‌ಗೆ ಲಾರಿಯಲ್ಲಿ ಸಾಗಾಟ ಮಾಡುತ್ತಿದ್ದ ಸುಮಾರು ಎರಡು ಕೋಟಿ ರೂ. ಮೌಲ್ಯದ ಅಡಿಕೆ ಸಹಿತ ನಾಲ್ವರು ಪರಾರಿಯಾಗಿದ್ದಾರೆ.

ಲಾರಿ ಚಾಲಕ ಬಾವೇಶ್ ಕೆ. ಷಾ, ಆಶೀಶ್ ಯಾದವ್, ಮಹಾರಾಷ್ಟ್ರ ನಾಸಿಕ್ ಜೋಷಿ ಟ್ರಾನ್ಸ್‌ಪೊರ್ಟ್ ಮಾಲಕ ವಿಜಯ್ ಜೋಷಿ ಪ್ರಕರಣದ ಆರೋಪಿಗಳು.

ಪ್ರಕರಣ ವಿವರ: ಸೌತ್ ಇಂಡಿಯಾ ಟ್ರಾನ್ಸ್‌ಪೋರ್ಟ್ ಸಂಸ್ಥೆಯು ಭಟ್ಕಳ ಸೇರಿದಂತೆ ಇತರೆಡೆ ಅಡಿಕೆ ಹಾಗೂ ಇತರ ಕಾಡುತ್ಪನ್ನಗಳನ್ನು ಖರೀದಿಸಿ ಹೊರರಾಜ್ಯಕ್ಕೆ ಕಳುಹಿಸುತ್ತಿದೆ. ಅದರಂತೆ ಜು.19ರಂದು ಬೋಳೂರಿನ ಜಯಲಕ್ಷ್ಮೀ ಟ್ರಾನ್ಸ್‌ಪೋರ್ಟ್ ಬುಕಿಂಗ್ ಆಫೀಸ್‌ನಿಂದ ಲಾರಿಯನ್ನು ಗೊತ್ತುಪಡಿಸಿ ಗುಜರಾತಿನ ರಾಜ್‌ಕೋಟ್‌ನಲ್ಲಿರುವ ಸೌತ್ ಇಂಡಿಯಾ ಟ್ರಾನ್ಸ್‌ಪೋರ್ಟ್ ಬ್ರಾಂಚ್ ಆಫೀಸಿಗೆ 291 ಚೀಲ ಅಡಿಕೆ ತುಂಬಿಸಿ ಕಳುಹಿಸಲಾಗಿತ್ತು. ನಂತರ ಜು.20ರಂದು ಇನ್ನೊಂದು ಲಾರಿಯಲ್ಲಿ 301 ಚೀಲ ಅಡಕೆಯನ್ನು ಕೂಡ ಕಳುಹಿಸಲಾಗಿತ್ತು. ಈ ಎರಡು ಲಾರಿಗಳು ಜು.24ರಂದು ಗುಜರಾತ್ ರಾಜ್‌ಕೋಟ್ ಸಂಬಂಧಪಟ್ಟ ಬ್ರಾಂಚ್‌ಗೆ ತಲುಪಬೇಕಾಗಿತ್ತು. ಆದರೆ ಅಲ್ಲಿಗೆ ತಲುಪದೆ ಲಾರಿ ಸಹಿತ ಚಾಲಕರು ನಾಪತ್ತೆಯಾಗಿದ್ದಾರೆ. ಮೊಬೈಲ್ ಕೂಡ ಸ್ವಿಚ್ ಆಫ್ ಆಗಿದೆ ಎಂದು ದೂರಿನಲ್ಲಿ ತಿಳಿಸಿದ್ದಾರೆ.

ಈ ಬಗ್ಗೆ ಮಂಗಳೂರು ಉತ್ತರ (ಬಂದರ್) ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News