ಕಪ್ಪು ಶಿಲೀಂದ್ರ: ಉಡುಪಿಯಲ್ಲಿ ಓರ್ವ ಬಲಿ, ಮತ್ತೆ ಇಬ್ಬರಲ್ಲಿ ಸೋಂಕು ಪತ್ತೆ

Update: 2021-07-27 16:19 GMT

ಉಡುಪಿ, ಜು.27: ಸಾಮಾನ್ಯವಾಗಿ ರೋಗಿಗಳಲ್ಲಿ ಕೊರೋನೋತ್ತರವಾಗಿ ಕಾಣಿಸಿಕೊಳ್ಳುವ ಕಪ್ಪು ಶಿಲೀಂದ್ರ ಇಂದು ಇಬ್ಬರಲ್ಲಿ ಹೊಸದಾಗಿ ಕಾಣಿಸಿಕೊಂಡಿದ್ದು, ಚಿಕಿತ್ಸೆಯಲ್ಲಿದ್ದ ಓರ್ವರು ಮೃತಪಟ್ಟಿದ್ದಾರೆ.

ಶಿವಮೊಗ್ಗ ಜಿಲ್ಲೆಯ 48 ವರ್ಷದ ಪುರುಷ ಹಾಗೂ ಬಳ್ಳಾರಿಯ 45 ವರ್ಷದ ಪುರುಷರಲ್ಲಿ ಹೊಸದಾಗಿ ಕಪ್ಪು ಶಿಲೀಂದ್ರ ಸೋಂಕು ಪತ್ತೆಯಾಗಿದ್ದು, ಚಿಕಿತ್ಸೆಗಾಗಿ ಮಣಿಪಾಲ ಕೆಎಂಸಿಗೆ ದಾಖಲಿಸಲಾಗಿತ್ತು. ಇವರಲ್ಲಿ ಶಿವಮೊಗ್ಗದ 48ರ ಹರೆಯ ರೋಗಿ ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿದ್ದಾರೆ.

ಈ ಮೂಲಕ ಜಿಲ್ಲೆಯಲ್ಲಿ ಸೋಂಕಿನಿಂದ ಮೃತಪಟ್ಟವರ ಸಂಖ್ಯೆ ಐದಕ್ಕೇರಿದೆ. ಇವರಲ್ಲಿ ಮೊದಲಿನ ಇಬ್ಬರು ಉಡುಪಿ ಜಿಲ್ಲೆಯವರಾದರೆ ಉಳಿದ ಮೂವರು ಹೊರಜಿಲ್ಲೆಗಳವರು. ಇದೀಗ ಜಿಲ್ಲೆಯಲ್ಲಿ 9 ಮಂದಿ ಕಪ್ಪು ಶಿಲೀಂದ್ರ ಸೋಂಕಿಗೆ ಚಿಕಿತ್ಸೆಯಲ್ಲಿದ್ದು, ಇವರಲ್ಲಿ ಏಳು ಮಂದಿ ಕೆಎಂಸಿ ಮಣಿಪಾಲದಲ್ಲೂ, ಉಳಿದಿಬ್ಬರು ಉಡುಪಿಯ ಆದರ್ಶದಲ್ಲೂ ಚಿಕಿತ್ಸೆ ಪಡೆಯುತಿದ್ದಾರೆ.

ಜಿಲ್ಲೆಯಲ್ಲಿ ಈವರೆಗೆ ಒಟ್ಟು 46 ಮಂದಿ ಬ್ಲಾಕ್ ಫಂಗಸ್ ಸೋಂಕಿಗೆ ಚಿಕಿತ್ಸೆ ಪಡೆದಿದ್ದಾರೆ. ಇವರಲ್ಲಿ 11 ಮಂದಿ (5 ಉಡುಪಿ, 6 ಮಂದಿ ಕುಂದಾಪುರ ತಾಲೂಕು) ಉಡುಪಿ ಜಿಲ್ಲೆಯವರಾದರೆ, 35 ಮಂದಿ ಹೊರ ಜಿಲ್ಲೆಯವರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News