ಮಂಗಳೂರು: ಮಹಿಳೆಯ ಅತ್ಯಾಚಾರ, ಕೊಲೆ ಬೆದರಿಕೆ; ದೂರು

Update: 2021-07-27 17:03 GMT

ಮಂಗಳೂರು, ಜು.27: ಮಹಿಳೆಯೊಬ್ಬರಿಗೆ ನಂಬಿಸಿ ಕಾರಿನಲ್ಲಿ ಕರೆದೊಯ್ದು ಅತ್ಯಾಚಾರವೆಸಗಿ ನಂತರ ಮದುವೆಯಾಗದಿದ್ದರೆ ಕೊಲೆ ಮಾಡುವುದಾಗಿ ಜೀವ ಬೆದರಿಕೆ ಹಾಕಿದ್ದಾನೆನ್ನಲಾದ ಘಟನೆ ತಡವಾಗಿ ಬೆಳಕಿಗೆ ಬಂದಿದೆ. ಬೆಂಗರೆ ಕೂಳೂರು ನಿವಾಸಿ ಪ್ರಶಾಂತ್ ಅಪ್ಪು ಪ್ರಕರಣದ ಆರೋಪಿ ಎಂದು ತಿಳಿದುಬಂದಿದೆ.

ಮಹಿಳೆಯೊಬ್ಬರು ತನ್ನ ಗಂಡನಿಗೆ ವಿಚ್ಛೇದನ ನೀಡಿದ ನಂತರ ತಂದೆ-ತಾಯಿ ಜತೆ ವಾಸಿಸುತ್ತಿದ್ದರು. ಎರಡು ತಿಂಗಳ ಹಿಂದೆ ಪ್ರತ್ಯೇಕ ಮನೆ ಮಾಡುವ ಉದ್ದೇಶದಿಂದ ಬಾಡಿಗೆ ಮನೆಯನ್ನು ಹುಡುಕುತ್ತಿದ್ದು, ಬೆಂಗರೆ ಕೂಳೂರು ನಿವಾಸಿ ಪ್ರಶಾಂತ್ ಅಪ್ಪು ಎಂಬವರಿಂದ ಬಾಡಿಗೆ ಮನೆ ಪಡೆದಿದ್ದರು. ನಂತರ ತನ್ನ ಬಟ್ಟೆ ಬರೆಗಳನ್ನು ರೂಮ್‌ನಲ್ಲಿ ಇಟ್ಟು ಬಂದಿದ್ದು, ಮಹಿಳೆಗೆ ಜ್ವರ ಬಂದಿದ್ದ ಕಾರಣ ಬಾಡಿಗೆ ಮನೆಗೆ ತೆರಳಿರಲಿಲ್ಲ. ಈ ಸಂದರ್ಭ ಆರೋಪಿ ಮಹಿಳೆಗೆ ಎಡೆಬಿಡದೆ ಫೋನ್ ಮಾಡಿ ‘ಬಟ್ಟೆ ಬರೆಗಳನ್ನು ವಾಪಸ್ ಕೊಂಡು ಹೋಗು’ ಎಂದು ತಿಳಿಸಿದ್ದಾನೆ. ಜೂನ್ 8ರಂದು ‘ನಿನ್ನ ಬಟ್ಟೆಗಳನ್ನು ಕುಂಟಿಕಾನ ಬಳಿ ತಂದು ನೀಡುತ್ತೇನೆ’ ಎಂದು ಹೇಳಿದ ಆರೋಪಿ, ಅಲ್ಲಿಗೆ ಕಾರಿನಲ್ಲಿ ಬಂದಿದ್ದಾನೆ. ಬಟ್ಟೆ ತರಲು ಮಹಿಳೆ ಹೋದಾಗ ‘ಬಟ್ಟೆ ಬಿಟ್ಟು ಬಂದಿದ್ದೇನೆ, ನೀನು ಬಂದು ತೆಗೆದುಕೊಂಡು ಹೋಗು’ ಎಂದು ಕಾರಿನಲ್ಲಿ ಕರೆದುಕೊಂಡು ಹೋಗಿದ್ದಾನೆ. ಬಳಿಕ ಅಲ್ಲಿಯವರೆಗೆ ಮನೆಗೆ ಹೋಗುವ ಒಳರಸ್ತೆಗೆ ಕಾರನ್ನು ಚಲಾಯಿಸಿ ಜನಸಂಚಾರವಿಲ್ಲದ ಜಾಗದಲ್ಲಿ ಅತ್ಯಾಚಾರ ನಡೆಸಿದ್ದಾನೆಂದು ಮಹಿಳೆ ದೂರಿನಲ್ಲಿ ತಿಳಿಸಿದ್ದಾರೆ.

ಇದಾದ ಕೆಲ ದಿನಗಳ ನಂತರ ಆರೋಪಿ ಮಹಿಳೆಗೆ ಕರೆ ಮಾಡಿ ಮದುವೆಯಾಗುವಂತೆ ಒತ್ತಾಯಿಸುತ್ತಿದ್ದು, ಇದಕ್ಕೆ ಮಹಿಳೆ ನಿರಾಕರಿಸಿದಾಗ ಸಂದೇಶದ ಮೂಲಕ ‘ಮದುವೆಯಾಗದಿದ್ದಲ್ಲಿ ಕೊಲ್ಲುತ್ತೇನೆ’ ಎಂದು ಬೆದರಿಕೆ ಹಾಕಿದ್ದಾನೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.

ಈ ಕುರಿತು ಮಂಗಳೂರು ದಕ್ಷಿಣ (ಪಾಂಡೇಶ್ವರ) ಮಹಿಳಾ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News