ಕೋವಿಡ್ ಲಸಿಕೆಯ ಗುರಿ ತಲುಪಲು ಅಸಾಧ್ಯ: ಮಾಧ್ಯಮ ವರದಿ ನಿರಾಕರಿಸಿದ ಕೇಂದ್ರ

Update: 2021-07-27 17:32 GMT

ಹೊಸದಿಲ್ಲಿ, ಜು. 27: ಜುಲೈ ಅಂತ್ಯದ ಒಳಗೆ ಕೋವಿಡ್ ಲಸಿಕೆಯ 50 ಕೋಟಿ ಡೋಸ್ ಗಳನ್ನು ಜನರಿಗೆ ನೀಡುವ ಗುರಿಯನ್ನು ಭಾರತಕ್ಕೆ ತಲುಪಲು ಸಾಧ್ಯವಾಗಲಾರದು ಎಂದು ಪ್ರತಿಪಾದಿಸಿದ ಮಾದ್ಯಮ ವರದಿಗಳನ್ನು ಕೇಂದ್ರ ಸರಕಾರ ಮಂಗಳವಾರ ನಿರಾಕರಿಸಿದೆ. 

ಈ ವರದಿ ತಪ್ಪು ಮಾಹಿತಿ ಹಾಗೂ ತಪ್ಪು ನಿರೂಪಣೆಯಿಂದ ಕೂಡಿದೆ ಎಂದು ಹೇಳಿದ ಕೇಂದ್ರ ಸರಕಾರ, ಜನವರಿಯಿಂದ ಜುಲೈ 31ರ ವರೆಗೆ ಕೋವಿಡ್ ಲಸಿಕೆಯ 51.60 ಕೋಟಿಗೂ ಅಧಿಕ ಡೋಸ್ ಗಳನ್ನು ಪೂರೈಕೆ ಮಾಡಲಿದೆ ಎಂದು ಹೇಳಿದೆ. ಜುಲೈ ಅಂತ್ಯದ ಒಳಗೆ ಕೋವಿಡ್ ಲಸಿಕೆಯ 50 ಕೋಟಿ ಡೋಸ್ ಗಳನ್ನು ನೀಡುವ ಗುರಿಯನ್ನು ಭಾರತ ತಲುಪಲು ಸಾಧ್ಯವಿಲ್ಲ ಎಂದು ಆರೋಪಿಸಿದ ಮಾದ್ಯಮಗಳ ಇತ್ತೀಚೆಗಿನ ವರದಿಗಳನ್ನು ಉಲ್ಲೇಖಿಸಿ ಆರೋಗ್ಯ ಸಚಿವಾಲಯ ಈ ಹೇಳಿಕೆ ಬಿಡುಗಡೆ ಮಾಡಿದೆ. 

ಅಲ್ಲದೆ ತಿಂಗಳ ಅಂತ್ಯದೊಳಗೆ ಕೋವಿಡ್ ಲಸಿಕೆಯ 51.60 ಕೋಟಿ ಡೋಸ್ ಗಳು ಲಭ್ಯವಿರುವ ಬಗ್ಗೆ ಕೇಂದ್ರ ಸರಕಾರ ಮೇಯಲ್ಲಿ ನೀಡಿರುವ ಹೇಳಿಕೆ ಬಗ್ಗೆ ಅದು ಗಮನ ಸೆಳೆದಿದೆ. 2021 ಜನವರಿಯಿಂದ 2021 ಜುಲೈ 31ರ ವರೆಗೆ ಕೋವಿಡ್ ಲಸಿಕೆಯ 51.60 ಕೋಟಿಗೂ ಅಧಿಕ ಡೋಸ್ ಗಳನ್ನು ಪೂರೈಸುವುದು ಸತ್ಯ. ಮುಂಗಡ ಹಂಚಿಕೆ ಯೋಜನೆಗೆ ಅನುಗುಣವಾಗಿ ರಾಜ್ಯಗಳಿಗೆ ಲಸಿಕೆಯ ಡೋಸ್ ಗಳನ್ನು ಪೂರೈಕೆ ಮಾಡಲಾಗುತ್ತದೆ. ಅಲ್ಲದೆ, ಅವರಿಗೆ ಮುಂಚಿತವಾಗಿ ಮಾಹಿತಿ ನೀಡಲಾಗುತ್ತದೆ. ಈ ಲಸಿಕೆಗಳನ್ನು ರಾಜ್ಯಾದ್ಯಂತ ವಿವಿಧ ವೇಳಾಪಟ್ಟಿಗಳಲ್ಲಿ ತಿಂಗಳು ಪೂರ್ತಿ ಪೂರೈಕೆ ಮಾಡಲಾಗುತ್ತದೆ ಎಂದು ಸಚಿವಾಲಯ ತಿಳಿಸಿದೆ. 

ಆದರೆ, ನಿರ್ದಿಷ್ಟ ತಿಂಗಳ ಅಂತ್ಯದವರೆಗೆ ಕೋವಿಡ್ ಲಸಿಕೆಯ 50.60 ಕೋಟಿ ಡೋಸ್ ಗಳು ಲಭ್ಯವಿದೆ ಎಂದರೆ, ತಿಂಗಳ ಅಂತ್ಯದವರೆಗೆ ಪೂರೈಸಲಾದ ಪ್ರತಿ ಡೋಸ್ ಅನ್ನು ಕೂಡ ಜನರಿಗೆ ನೀಡಲಾಗುತ್ತದೆ ಎಂದು ಅರ್ಥವಲ್ಲ ಎಂದು ಅದು ಹೇಳಿದೆ. ಜನವರಿಯಿಂದ ಇಂದಿನ ದಿನಾಂಕದ ವರೆಗೆ ರಾಜ್ಯಗಳು ಹಾಗೂ ಕೇಂದ್ರಾಡಳಿತ ಪ್ರದೇಶಗಳಿಗೆ ಕೋವಿಡ್ ಲಸಿಕೆಯ ಒಟ್ಟು 45.7 ಕೋಟಿ ಡೋಸ್ ಗಳನ್ನು ಪೂರೈಕೆ ಮಾಡಲಾಗಿದೆ. ಹೆಚ್ಚುವರಿ 6.03 ಕೋಟಿ ಡೋಸ್ ಗಳನ್ನು ಜುಲೈ 31ರ ಒಳಗೆ ಪೂರೈಕೆ ಮಾಡುವ ನಿರೀಕ್ಷೆ ಇದೆ. ಇದರೊಂದಿಗೆ ಜನವರಿಯಿಂದ ಜುಲೈ 31ರ ವರೆಗೆ ಕೋವಿಡ್ ಲಸಿಕೆಯ ಒಟ್ಟು 51.73 ಕೋಟಿ ಡೋಸ್ ಗಳು ಪೂರೈಕೆಯಾಗಲಿವೆ ಎಂದು ಸಚಿವಾಲಯ ತಿಳಿಸಿದೆ. 

ಭಾರತ ಕೋವಿಡ್ ಲಸಿಕೆಯ 44.19 ಕೋಟಿ ಡೋಸ್ ಗಳನ್ನು ನೀಡಿದೆ. ಆದುದರಿಂದ ಅದನ್ನು ಶ್ಲಾಘಿಸಬೇಕು. ಇದರಲ್ಲಿ 9.6 ಕೋಟಿ ಜನರಿಗೆ ಎರಡೂ ಡೋಸ್ ಗಳನ್ನು ನೀಡಲಾಗಿದೆ. ಜೂನ್ ನಲ್ಲಿ ಕೋವಿಡ್ ಲಸಿಕೆಯ ಒಟ್ಟು 11.97 ಕೋಟಿ ಡೋಸ್ ಗಳನ್ನು ನೀಡಲಾಗಿದೆ ಎಂದು ಸಚಿವಾಲಯದ ಹೇಳಿಕೆ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News