ಲಸಿಕಾ ಕೇಂದ್ರದಲ್ಲಿ ಪೊಲೀಸರೊಂದಿಗೆ ವಾಗ್ವಾದ: ವ್ಯಕ್ತಿ ಆತ್ಮಹತ್ಯೆಗೆ ಶರಣು

Update: 2021-07-27 18:28 GMT

ಲಕ್ನೋ : ಉತ್ತರ ಪ್ರದೇಶದ ಬಾಘಪತ್ ಜಿಲ್ಲೆಯಲ್ಲಿನ ಲಸಿಕಾ ಕೇಂದ್ರವೊಂದರಲ್ಲಿ ಪೊಲೀಸರ ಜತೆ ಜಗಳವಾದ ಕೆಲವೇ ಗಂಟೆಗಳಲ್ಲಿ ಯುವಕನೊಬ್ಬ ಆತ್ಮಹತ್ಯೆಗೈದ ಪ್ರಕರಣಕ್ಕೆ ಸಂಬಂಧಿಸಿದಂತೆ ಹತ್ತು ಮಂದಿ ಪೊಲೀಸರನ್ನು ಸೇವೆಯಿಂದ ಅಮಾನತುಗೊಳಿಸಲಾಗಿದೆ. ಎಲ್ಲರ ವಿರುದ್ಧವೂ ಆತ್ಮಹತ್ಯೆಗೆ ಪ್ರಚೋದನೆ ನೀಡಿದ ಆರೋಪ ಹೊರಿಸಲಾಗಿದೆ.

ಸೋಮವಾರ ಲಸಿಕಾ ಕೇಂದ್ರದಲ್ಲಿ ನಡೆದ ಜಟಾಪಟಿಯ ನಂತರ ಅದೇ ರಾತ್ರಿ ಆ ಯುವಕನ ಶವ ಮರವೊಂದರಲ್ಲಿ ನೇತಾಡುತ್ತಿರುವ ಸ್ಥಿತಿಯಲ್ಲಿ ಪತ್ತೆಯಾಗಿತ್ತು.

ಪೊಲೀಸರು ಆತನ ಮೇಲೆ ವಿನಾಕಾರಣ ಹಲ್ಲೆ ನಡೆಸಿದ್ದರು. ನಂತರ ಮನೆಗೆ ಬಂದು ಆತನ ತಾಯಿಯ ಮೇಲೆಯೂ ಹಲ್ಲೆ ನಡೆಸಿದ್ದರು ಎಂದು  ಯುವಕನ ಸಂಬಂಧಿಕರು ಆರೋಪಿಸಿದ್ದಾರೆ.

ಲಸಿಕಾ ಕೇಂದ್ರದಲ್ಲಿ ಸೋಮವಾರ ಅಪರಾಹ್ನ ನಡೆದ ಗೊಂದಲಕರ ವಾತಾವರಣದ ಕುರಿತಾದ 90 ಸೆಕೆಂಡುಗಳ ವೀಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ. ವೀಡಿಯೋದಲ್ಲಿ ಕನಿಷ್ಠ ಇಬ್ಬರು ಪೊಲೀಸರು ಯುವಕನನ್ನು ಹಿಡಿದೆಳೆಯುತ್ತಿರುವುದು ಹಾಗೂ ಮಧ್ಯಪ್ರವೇಶಿಸಲು ಯತ್ನಿಸಿದ ಒಬ್ಬ ವ್ಯಕ್ತಿಯನ್ನು ದೂಡುವುದು ಕಾಣಿಸುತ್ತದೆ. ನಂತರ ಆ ಯುವಕ ಅಲ್ಲಿಂದ ಪರಾರಿಯಾಗಿದ್ದ.

ಘಟನೆ ಕುರಿತು ಪ್ರತಿಕ್ರಿಯಿಸಿದ ಆತನ ತಂದೆ  ಲಸಿಕೆ ಪಡೆಯಲು ತೆರಳಿದ್ದ ಮಗನ ಹೆಸರನ್ನು ಅಲ್ಲಿನ ಸಿಬ್ಬಂದಿ ಕರೆದಿದ್ದರೂ ಪೊಲೀಸರು ಆತನನ್ನು ತಡೆದಿದ್ದರು. ಆತ ಪ್ರಶ್ನಿಸಿದಾಗ ಆತನಿಗೆ ಹೊಡೆದಿದ್ದಾರೆ, ನಂತರ ಕೊಠಡಿಯಲ್ಲಿ ಆತನ ಮೇಲೆ ಲಾಠಿಯಿಂದ ಹಲ್ಲೆ ನಡೆಸಲಾಗಿದೆ. ಸಂಜೆ ಪೊಲೀಸರು ಮನೆಗೆ ಬಂದು ಆತನ ತಾಯಿಗೆ ಕೂಡ ಹಲ್ಲೆ ನಡೆಸಿದ್ದಾರೆ. ಆತ ಭಯದಿಂದ ಮನೆಯಿಂದ ಹೊರಗೋಡಿದ್ದ. ನಂತರ ಆತನ ಮೃತದೇಹ ಪತ್ತೆಯಾಯಿತು," ಎಂದು ಹೇಳಿದ್ದಾರೆ.

ಘಟನೆಗೆ ಕಾರಣರಾದವರ ವಿರುದ್ಧ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳಲಾಗುವುದು ಎಂದು ಹಿರಿಯ ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News