ನಕಲಿ ಜಾತಿ ಪ್ರಮಾಣಪತ್ರ: ತಹಶೀಲ್ದಾರ್ ವಿರುದ್ಧ ಆರೋಪ

Update: 2021-07-27 18:51 GMT

ಉಡುಪಿ, ಜು.27: ನಕಲಿ ಪರಿಶಿಷ್ಟ ಜಾತಿ ಮೊಗೇರ ಜಾತಿ ಪ್ರಮಾಣ ಪತ್ರ ಪಡೆದು ಸರಕಾರಕ್ಕೆ ವಂಚಿಸಿರುವ ಕುರಿತ ದೂರಿನ ಹಿನ್ನೆಲೆಯಲ್ಲಿ ಬ್ರಹ್ಮಾವರ ತಹಶೀಲ್ದಾರ್ ಆಗಿದ್ದ ಕಿರಣ್ ಗೌರಯ್ಯ ಅವರನ್ನು ಮುಂದಿನ ಆದೇಶದವರೆಗೆ ವರ್ಗಾಯಿಸಿ ಮುಂದಿನ ಸ್ಥಳ ನಿಯುಕ್ತಿಗಾಗಿ ಸರಕಾರದಲ್ಲಿ ಕರ್ತವ್ಯ ವರದಿ ಮಾಡಿಕೊಳ್ಳುವಂತೆ ಉಡುಪಿ ಅಪರ ಜಿಲ್ಲಾಧಿಕಾರಿ ಆದೇಶ ನೀಡಿರುವ ವಿಚಾರ ತಡವಾಗಿ ಬೆಳಕಿಗೆ ಬಂದಿದೆ.

ಪ್ರಸ್ತುತ ಕುಂದಾಪುರ ತಹಶೀಲ್ದಾರ್ ಆಗಿರುವ ಕಿರಣ್ ಜಿ.ಗೌರಯ್ಯ ನಕಲಿ ಪರಿಶಿಷ್ಟ ಜಾತಿಯ ಮೊಗೇರ ಜಾತಿ ಪ್ರಮಾಣ ಪತ್ರ ಪಡೆದುಕೊಂಡು ಸರಕಾರಕ್ಕೆ ಹಾಗೂ ಪರಿಶಿಷ್ಟ ಜಾತಿಯವರಿಗೆ ವಂಚಿಸಿ ಉನ್ನತ ಮಟ್ಟದ ಹುದ್ದತೆಗೆ ಮುಂಬಡ್ತಿ ಪಡೆದಿದ್ದು, ಮಾತ್ರವಲ್ಲದೆ ತಮ್ಮ ಪತ್ನಿಗೆ ಉನ್ನತ ಮಟ್ಟದ ಹುದ್ದೆ ಕೊಡಿಸಿ ಮಕ್ಕಳಿಗೆ ಮೀಸಲಾತಿ ಅಡಿಯಲ್ಲಿ ಪ್ರಸಿದ್ಧ ಶಿಕ್ಷಣ ಸಂಸ್ಥೆಗಳಲ್ಲಿ ಉಚಿತ ಸೀಟು ಪಡೆದುಕೊಂಡು ಸರಕಾರಕ್ಕೆ ವಂಚನೆ ಮಾಡಿದ್ದಾರೆ. ಆದುದರಿಂದ ಇವರ ನಕಲಿ ಪರಿಶಿಷ್ಟ ಜಾತಿ ಮೊಗೇರ ಜಾತಿ ಪ್ರಮಾಣ ಪತ್ರವನ್ನು ರದ್ದು ಮಾಡಿ ಕ್ರಿಮಿನಲ್ ಹಾಗೂ ದಲಿತ ದೌರ್ಜನ್ಯ ತಡೆ ಕಾಯಿದೆಯಡಿ ಪ್ರಕರಣ ದಾಖಲಿಸುವಂತೆ ದಸಂಸ ಭೀಮವಾದ ರಾಜ್ಯ ಸಂಘಟನಾ ಸಂಚಾಲಕ ಶೇಖರ್ ಹಾವಂಜೆ ಜಿಲ್ಲಾಡಳಿತಕ್ಕೆ ಮನವಿ ಮಾಡಿದ್ದರು. ಈ ಹಿನ್ನೆಲೆಯಲ್ಲಿ ಅಪರ ಜಿಲ್ಲಾಧಿಕಾರಿ ಜು.17ರಂದು ಈ ಆದೇಶವನ್ನು ಹೊರಡಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News