ಕುಸಿದ ಪ್ರವಾಸೋದ್ಯಮ ಕ್ಷೇತ್ರ: 1.45 ಕೋಟಿ ಉದ್ಯೋಗ ನಷ್ಟ

Update: 2021-07-28 03:56 GMT
ಸಾಂದರ್ಭಿಕ ಚಿತ್ರ (source: PTI)

ಹೊಸದಿಲ್ಲಿ, ಜು.28: ಕೋವಿಡ್-19 ಸೋಂಕು ಮತ್ತು ಲಾಕ್‌ಡೌನ್ ಕಾರಣದಿಂದ ಕಳೆದ ಹಣಕಾಸು ವರ್ಷದ ಮೊದಲ ತ್ರೈಮಾಸಿಕ ಅವಧಿಯಲ್ಲಿ ದೇಶದ ಪ್ರವಾಸೋದ್ಯಮ ಆರ್ಥಿಕತೆ ಶೇಕಡ 43ರಷ್ಟು ಕುಸಿತ ಕಂಡಿದ್ದು, ಈ ಅವಧಿಯಲ್ಲಿ ಸುಮಾರು 1.45 ಕೋಟಿ ಮಂದಿ ಉದ್ಯೋಗ ಕಳೆದುಕೊಂಡಿದ್ದಾರೆ ಎಂದು ಅಂದಾಜಿಸಲಾಗಿದೆ. ವರ್ಷದ ಹಿಂದೆ ಈ ಕ್ಷೇತ್ರ 3.5 ಕೋಟಿ ಮಂದಿಗೆ ನೇರ ಉದ್ಯೋಗ ಕಲ್ಪಿಸಿತ್ತು ಎಂಬ ಅಂಶ ಕೇಂದ್ರ ಸರ್ಕಾರ ಸಂಸತ್ತಿನಲ್ಲಿ ನೀಡಿದ ಅಂಕಿ ಅಂಶಗಳಿಂದ ತಿಳಿದು ಬಂದಿದೆ.

2020-21ನೇ ಹಣಕಾಸು ವರ್ಷದ ದ್ವಿತೀಯ ಹಾಗೂ ತೃತೀಯ ತ್ರೈಮಾಸಿಕದಲ್ಲಿ ಪರಿಸ್ಥಿತಿ ಸ್ವಲ್ಪಮಟ್ಟಿಗೆ ಸುಧಾರಿಸಿತ್ತು ಎಂದು ಪ್ರವಾಸೋದ್ಯಮ ಸಚಿವ ಜಿ.ಕಿಶನ್ ರೆಡ್ಡಿ ರಾಜ್ಯಸಭೆಗೆ ಮಂಗಳವಾರ ನೀಡಿದ ಲಿಖಿತ ಉತ್ತರದಲ್ಲಿ ಹೇಳಿದ್ದಾರೆ.

"ರಾಷ್ಟ್ರೀಯ ಅನ್ವಯಿಕ ಅರ್ಥಶಾಸ್ತ್ರ ಸಂಶೋಧನಾ ಸಂಸ್ಥೆ ನಡೆಸಿದ ಅಧ್ಯಯನದಿಂದ ತಿಳಿದು ಬಂದಂತೆ, 2020-21ನೇ ಹಣಕಾಸು ವರ್ಷದಲ್ಲಿ ಒಟ್ಟಾರೆ ಆರ್ಥಿಕ ಕುಸಿತದಿಂದಾಗಿ ಪ್ರವಾಸೋದ್ಯಮ ಆರ್ಥಿಕತೆ ಅಥವಾ ಪ್ರವಾಸೋದ್ಯಮ ಕ್ಷೇತ್ರದ ಒಟ್ಟಾರೆ ಮೌಲ್ಯವರ್ಧನೆ (ಟಿಡಿಜಿವಿಎ) ಮೊದಲ ತ್ರೈಮಾಸಿಕದಲ್ಲಿ ಶೇಕಡ 42.8ರಷ್ಟು ಕುಸಿದಿದೆ. ಎರಡನೇ ತ್ರೈಮಾಸಿಕದಲ್ಲಿ ಶೇಕಡ 15.5 ಹಾಗೂ ಮೂರನೇ ತ್ರೈಮಾಸಿಕದಲ್ಲಿ 1.1% ಕುಸಿತ ದಾಖಲಿಸಿದೆ" ಎಂದು ವಿವರಿಸಿದ್ದಾರೆ.

ಪ್ರವಾಸಿಗಳ ಆಗಮನ ಗಣನೀಯವಾಗಿ ಕುಸಿದಿರುವುದರಿಂದ ಸಾಂಕ್ರಾಮಿಕದ ಅವಧಿಯಲ್ಲಿ ಪ್ರವಾಸೋದ್ಯಮ ವೆಚ್ಚ ಟಿಡಿಜಿವಿಎ ಪ್ರಮಾಣ 2020-21ನೇ ಹಣಕಾಸು ವರ್ಷದಲ್ಲಿ ಹಿಂದಿನ ವರ್ಷದ ಇದೇ ಅವಧಿಗೆ ಹೋಲಿಸಿದರೆ 93.3ರಷ್ಟು ಕುಸಿದಿತ್ತು ಎಂದು ತಿಳಿಸಿದ್ದಾರೆ.

"ಎರಡನೇ ಮತ್ತು ಮೂರನೇ ತ್ರೈಮಾಸಿಕದಲ್ಲಿ ಇದು ಅಲ್ಪ ಸುಧಾರಣೆ ಕಂಡು ಕುಸಿತದ ಪ್ರಮಾಣ 79.5% ಹಾಗೂ 64.5%ಕ್ಕೆ ಇಳಿಯಿತು. ದೊಡ್ಡ ಸಂಖ್ಯೆಯ ಉದ್ಯೋಗ ನಷ್ಟವಾಗಿದ್ದು, ಮೊದಲ ತ್ರೈಮಾಸಿಕದಲ್ಲಿ 1.45 ಕೋಟಿ ಮಂದಿ, ಎರಡನೇ ತ್ರೈಮಾಸಿಕದಲ್ಲಿ 52 ಲಕ್ಷ ಮಂದಿ ಮತ್ತು ಮೂರನೇ ತ್ರೈಮಾಸಿಕದಲ್ಲಿ 18 ಲಕ್ಷ ಮಂದಿ ಉದ್ಯೋಗ ಕಳೆದುಕೊಂಡಿದ್ದಾರೆ. ಸಾಂಕ್ರಾಮಿಕ ಆರಂಭವಾಗುವ ಮುನ್ನ ಈ ಕ್ಷೇತ್ರದ 34.8 ದಶಲಕ್ಷ ಮಂದಿಗೆ ಉದ್ಯೋಗ ನೀಡಿತ್ತು" ಎಂದು ಸ್ಪಷ್ಟಪಡಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News