ಟೋಕಿಯೊ ಒಲಿಂಪಿಕ್ಸ್: ಭಾರತ ಮಹಿಳಾ ಹಾಕಿ ತಂಡಕ್ಕೆ ಹ್ಯಾಟ್ರಿಕ್ ಸೋಲು

Update: 2021-07-28 05:49 GMT

ಟೋಕಿಯೊ: ಭಾರತದ ಮಹಿಳಾ ಹಾಕಿ ತಂಡವು ಟೋಕಿಯೊ ಒಲಿಂಪಿಕ್ಸ್ ನಲ್ಲಿ ಬುಧವಾರ ನಡೆದ ಗ್ರೇಟ್ ಬ್ರಿಟನ್ ವಿರುದ್ಧ ಪಂದ್ಯದಲ್ಲಿ 1-4 ಗೋಲುಗಳ ಅಂತರದಿಂದ ಸೋಲನುಭವಿಸಿದೆ.

ಭಾರತವು ಒಲಿಂಪಿಕ್ಸ್ ನಲ್ಲಿ ಎ ಗುಂಪಿನ ಮೂರನೇ ಪಂದ್ಯದಲ್ಲೂ ಮುಗ್ಗರಿಸಿತು. ಹ್ಯಾಟ್ರಿಕ್ ಸೋಲಿನ ಮುಖಭಂಗ ಅನುಭವಿಸಿತು.

ಹಲವು ಅವಕಾಶಗಳನ್ನು ಕೈಚೆಲ್ಲಿರುವುದು ಭಾರತಕ್ಕೆ ದುಬಾರಿಯಾಗಿ ಪರಿಣಮಿಸಿತು. ಅತ್ತ ಬ್ರಿಟನ್ ಪರ ಹನ್ನ  ಮಾರ್ಟಿನ್ (2ನೇ ಹಾಗೂ 19ನೇ ನಿಮಿಷ), ಲಿಲ್ಲಿ ಓಸ್ಲೆ (41ನೇ ನಿಮಿಷ)ಹಾಗೂ  ಗ್ರೇಸ್ ಬಾಲ್ಸ್ ಡನ್(57ನೇ ನಿಮಿಷ) ಗೆಲುವಿನ ಗೋಲು ಗಳಿಸಿದರು.

ಭಾರತದ ಪರ ಶರ್ಮಿಳಾ ದೇವಿ 23ನೇ ನಿಮಿಷದಲ್ಲಿ ಏಕೈಕ ಗೋಲು ಗಳಿಸಿ ಸೋಲಿನ ಅಂತರವನ್ನು ಕುಗ್ಗಿಸಿದರು.

ಭಾರತವು ಈ ಪಂದ್ಯದಲ್ಲಿ ಕನಿಷ್ಠ ಒಂದು ಅಂಕವನ್ನಾದರೂ ಗಳಿಸಬೇಕಿತ್ತು. ಆದರೆ ಈಗ ಕ್ವಾರ್ಟರ್ ಫೈನಲ್ ಹಂತವನ್ನು ತಲುಪಲು ಮುಂದಿನ 2 ಪಂದ್ಯಗಳಲ್ಲಿ ಗೆಲ್ಲಲೇಬೇಕಾದ ಒತ್ತಡಕ್ಕೆ ಸಿಲುಕಿದೆ. ಅಂಕಪಟ್ಟಿಯಲ್ಲಿ ಇನ್ನಷ್ಟೇ ಖಾತೆ ತೆರೆಯಬೇಕಾಗಿರುವ ಭಾರತ ತಂಡವು ಕೊನೆಯ ಸ್ಥಾನದಲ್ಲಿದೆ.

ರಾಣಿ ರಾಂಪಾಲ್ ತಂಡವು ಹಾಲೆಂಡ್ ವಿರುದ್ಧ 1-5  ಹಾಗೂ ಜರ್ಮನಿ ವಿರುದ್ದ 0-2 ಅಂತರದಿಂದ ಸೋಲನುಭವಿಸಿದೆ.  ಶುಕ್ರವಾರ ನಡೆಯಲಿರುವ 4ನೇ ಪಂದ್ಯದಲ್ಲಿ ಐರ್ಲ್ಯಾಂಡ್ ಸವಾಲನ್ನು ಎದುರಿಸಲಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News